ಭದ್ರಾ ಜಲಾಶಯದಿಂದ ನೀರು ಬಿಡುಗಡೆ
ಶಿವಮೊಗ್ಗ/ ಭದ್ರಾವತಿ: ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ಈ ನಡುವೆ ಭರ್ತಿಯಾಗುವುದಕ್ಕೆ ಕೆಲವೇ ಅಡಿ ಬಾಕಿ ಇರುವ ಭದ್ರಾ ಜಲಾಶಯದಿಂದ ಶನಿವಾರ ಸಂಜೆ 6.45ಕ್ಕೆ ನೀರು ಹೊರಬಿಡಲಾಯಿತು.
186 ಅಡಿ ಗರಿಷ್ಠ ಮಟ್ಟದ ಈ ಜಲಾಶಯ ಶನಿವಾರ ಸಂಜೆ ವೇಳೆಗೆ 184 ಅಡಿ ತಲುಪಿತ್ತು. ಒಳಹರಿವಿನಲ್ಲಿ ಏರಿಕೆಯಾಗುತ್ತಿರುವುದರಿಂದ 4 ಕ್ರಸ್ಟ್ ಗೇಟುಗಳನ್ನು ಮುಕ್ಕಾಲು ಅಡಿ ಮೇಲೆತ್ತಿ 10 ಸಾವಿರ ಕ್ಯುಸೆಕ್ಸ್ ನೀರನ್ನು ನದಿ ಪಾತ್ರಕ್ಕೆ ಹರಿಬಿಡಲಾಯಿತು.
ಕಟ್ಟೆಚ್ಚರ: ಭದ್ರಾವತಿ ಪಟ್ಟಣದ ಹೊಸ ಸೇತುವೆ ಕೆಳಮಟ್ಟದಲ್ಲಿರುವುದರಿಂದ ಈ ಸೇತುವೆ ಜಲಾವೃತವಾಗುವ ಸಾಧ್ಯತೆ ಇದ್ದು, ತಾಲೂಕು ಆಡಳಿತ ಕಟ್ಟೆಚ್ಚರ ವಹಿಸಿದೆ. ಸೇತುವೆ ಬಳಿ ಯಾರೂ ತೆರಳದಂತೆ ಬಂದೋಬಸ್ತ್ ವಹಿಸಲಾಗಿದೆ.
ತುಂಬಿದ ತುಂಗಾ: ಇತ್ತ ತುಂಗಾ ನದಿಯೂ ತುಂಬಿ ಹರಿಯುತ್ತಿದ್ದು, 63 ಸಾವಿರ ಕ್ಯುಸೆಕ್ ಒಳಹರಿವು ಇದೆ. ಭದ್ರಾ ಜಲಾಶಯದ ನೀರು ಕೂಡಲಿ ಸಂಗಮ ಬಳಿ ಈ ನದಿಯನ್ನು ಸೇರುತ್ತಿದ್ದು, ಕೆಳಗಿನ ಪ್ರದೇಶದ ಜನರಿಗೆ ಎಚ್ಚರಿಕೆ ಸೂಚನೆ ನೀಡಲಾಗಿದೆ. ಹೊನ್ನಾಳಿ ಹಾಗೂ ಹರಿಹರ ತಾಲೂಕಿನಲ್ಲಿ ತುಂಗಭದ್ರಾ ನದಿ ಪ್ರವಾಹವು ಇದರಿಂದ ಏಕಾಏಕಿ ಏರಿಕೆಯಾಗಿದೆ.
ತೀರ್ಥಹಳ್ಳಿ ತಾಲೂಕಿನ ಕುಂಡುಗೋಳಹಳ್ಳದಲ್ಲಿ ಪ್ರವಾಹ ಹೆಚ್ಚುತ್ತಿರುವುದರಿಂದ ಕುಡುಮಲ್ಲಿಗೆ ಗ್ರಾಮದ 25 ಮನೆಗಳ ನಿವಾಸಿಗಳನ್ನು ತೆರವುಗೊಳಿಸಲಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಭೇಟಿ ನೀಡಿದ್ದರು. ಈ ಹಳ್ಳವು ಮುಂದೆ ತುಂಗಾ ನದಿಯನ್ನು ಸೇರುತ್ತದೆ.
ಲಿಂಗನಮಕ್ಕಿ ಜಲಾಶಯವೂ ಸಹ ಭರ್ತಿಯಾಗುವುದಕ್ಕೆ 10 ಅಡಿ ಬಾಕಿ ಇದೆ.
ಭಾರಿ ಮಳೆ: ಈ ನಡುವೆ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಮಾಸ್ತಿಕಟ್ಟೆಯಲ್ಲಿ ಅತಿ ಹೆಚ್ಚು ಎಂದರೆ 18 ಸೆ.ಮೀ. ಮಳೆಯಾಗಿದೆ.
ಉಳಿದಂತೆ ಮಾಣಿ ಡ್ಯಾಂ ವ್ಯಾಪ್ತಿ, ಹುಲಿಕಲ್ ಹಾಗೂ ಯಡೂರಿನಲ್ಲಿ 17 ಸೆ.ಮೀ., ಆಗುಂಬೆ 13, ಹೊಸನಗರ 12, ಹುಂಚದಕಟ್ಟೆ 8, ತಾಳಗುಪ್ಪ, ಲಿಂಗನಮಕ್ಕಿ, ತೀರ್ಥಹಳ್ಳಿ 4, ಅರಸಾಳು, ಆನವಟ್ಟಿ, ಸೊರಬ 3, ಸಾಗರ, ತ್ಯಾಗರ್ತಿ, ಶಿಕಾರಿಪುರ, ಶಿರಾಳಕೊಪ್ಪ, ಭದ್ರಾವತಿಯಲ್ಲಿ 2 ಸೆ.ಮೀ. ಮಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

