'ಏಳು ನಾಟಕಗಳು' ಪುಸ್ತಕ ಬಿಡುಗಡೆ
ಶಿವಮೊಗ್ಗ: ಡಿ.ಎಸ್. ಚೌಗಲೆ ಅವರ ಏಳು ನಾಟಕಗಳು ಪುಸ್ತಕ ಬಿಡುಗಡೆ ಸಮಾರಂಭ ಇಲ್ಲಿನ ಕಮಲಾ ನೆಹರೂ ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ನೆರವೇರಿತು.
ಕಲಾವಿದರು ಶಿವಮೊಗ್ಗ (ರಂಗ ತಂಡಗಳ ಒಕ್ಕೂಟ) ಮತ್ತು ಸಿರಿವರ ಕಲ್ಚರಲ್ ಅಕಾಡೆಮಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ಪ್ರಸನ್ನ ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲೇಖಕನಿಗೆ ಅರೆಬರೆ ಸೃಷ್ಟಿಸುವ ಧೈರ್ಯವಿರಬೇಕು. ಹೀಗೆ ಅರೆ ಬರೆ ಸೃಷ್ಟಿಸುತ್ತಾ ಹೋದಂತೆ ಪರಿಪೂರ್ಣ ಸೌಂದರ್ಯದ ಕಡೆ ಹೋಗಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಭಾರತೀಯ ಭಾಷಾ ಪರಂಪರೆಯಲ್ಲಿ ಕನ್ನಡ ನಾಟಕಕ್ಕೆ ದೊಡ್ಡಸ್ಥಿಕೆ ಇದೆ. ಸಮಾಜಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದೆ ಎಂದರು. ಚೌಗಲೆಯವರ ನಾಟಕದಲ್ಲಿ ಚಾರಿತ್ರ್ಯಿಕ ವ್ಯಕ್ತಿಗಳಿರುತ್ತಾರೆ. ಗಾಂಧಿ, ಅಂಬೇಡ್ಕರ್, ಕಸ್ತೂರ್ಬಾ ಸೇರಿದಂತೆ ಅನೇಕರು ಇರುತ್ತಾರೆ. ಆದರೆ, ಎಲ್ಲೂ ವೈಭವೀಕರಣ ನಡೆದಿಲ್ಲ ಎಂದು ಹೇಳಿದರು.
ಪ್ರದೀಪ್ ಮಾಲ್ಗುಡಿ ಮಾತನಾಡಿ, ರೈತ ಗೀತೆಯನ್ನು ನಾಡಗೀತೆಯಾಗಿ ಮಾಡಿದ ನಾವು ರೈತರಿಗಾಗಿ ಏನು ಮಾಡಿದ್ದೇವೆಂಬುದು ಮುಖ್ಯ ಎಂದರು.
ನಮ್ಮ ಊಟ ಬಟ್ಟೆಗಾಗಿ ಶ್ರಮಿಸುತ್ತಿರುವ ರೈತನ ಪರವಾಗಿ ನಾವು ಯೋಚಿಸುತ್ತಿಲ್ಲ. ಅವನು ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳ ಕಾಟ ವಿಪರೀತ. ರೈತನ ಮಗನಿಗೆ ಹೆಣ್ಣು ಸಿಗುತ್ತಿಲ್ಲ, ಇಂತಹ ಒಂದು ಸಮಸ್ಯೆಯನ್ನು ತಮ್ಮ ನಾಟಕದ ಮೂಲಕ ಚೌಗಲೆಯವರು ಪ್ರಸ್ತುತ ಪಡಿಸುತ್ತಾ ರೈತನ ಕುರಿತಾಗಿ ಹೊಸ ಚಿತ್ರಣವನ್ನೇ ಕಟ್ಟಿಕೊಡುತ್ತಾರೆ ಎಂದು ಪ್ರದೀಪ್ ತಿಳಿಸಿದರು.
ಗುಂಪಿನಲ್ಲಿದ್ದಾಗ ನಾವೆಲ್ಲರೂ ಜಾತ್ಯತೀತರೇ. ಒಂದೇ ಜಾತಿ ಅಥವಾ ಪಂಗಡದವರು ಸೇರಿದಾಗ ಇವ ನಮ್ಮವನೆಂಬ ಮಾತು ಹೊರಬರುತ್ತದೆ. ಇಂತಹ ಹೊತ್ತಿನಲ್ಲಿ ಚಿಂತನೆಗೆ ಒರೆಗೆ ಹಚ್ಚುವ ನಾಟಕವನ್ನು ಚೌಗಲೆಯವರು ರಚಿಸಿದ್ದಾರೆ ಎಂದ ಅವರು, ಕಳೆದ 8 ವರ್ಷಗಳಲ್ಲಿ ರಾಜ್ಯ ರಾಜಕೀಯದಲ್ಲಿ ಏನೇನೋ ನಡೆದು ಹೋಯಿತು. ಇದನ್ನು ಪ್ರತಿಬಿಂಬಿಸುವ ನಾಟಕ ಕನ್ನಡ ರಂಗಭೂಮಿಯಲ್ಲಿ ಮೂಡಿಬರಲೇ ಇಲ್ಲ. ಚೌಗಲೆಯವರು ಈ ಬೆಳವಣಿಗೆಗಳ ಕುರಿತಾಗಿ ನಾಟಕ ರಚಿಸಲಿ ಎಂದು ಸಲಹೆ ನೀಡಿದರು.
ಅಧ್ಯಕ್ಷ ಪ್ರೊ.ಗೌರಿಶಂಕರ್ ಮಾತನಾಡಿ, ನಿರ್ದೇಶಕನೊಬ್ಬ ನಾಟಕದಲ್ಲಿ ಒಂದೇ ಸಂದೇಶ ನೀಡುವ ಪ್ರಯತ್ನ ಮಾಡುವ ಬೆಳೆವಣಿಗೆ ನಡೆದಿದೆ. ವಾಸ್ತವವಾಗಿ ನಾಟಕ ರಚನಾಕಾರನೇ ತನ್ನ ಕೃತಿಯಲ್ಲಿ ಸಂದೇಶ ಇಟ್ಟಿರುತ್ತಾನೆ. ಹೀಗಿರುವಾಗ ನಿರ್ದೇಶಕನಾದವನು ಮತ್ತೆ ಸಂದೇಶ ನೀಡುವ ಅಥವಾ ಬೇರೆ ಪರಿಕಲ್ಪನೆ ಕೊಡಬೇಕಾಗಿಲ್ಲ, ಈ ಧೋರಣೆ ಏಕೆ ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಡಿ.ಎಸ್.ಚೌಗಲೆಯವರು ಕಲಾವಿದರು ಶಿವಮೊಗ್ಗದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಟ್ಟೇಪುರಾಣ ಡಿ.ಚಂದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶಕ ರವೀಂದ್ರನಾಥ ಸಿರಿವರ ಹಾಜರಿದ್ದರು. ಹೊನ್ನಾಳಿ ಚಂದ್ರಶೇಖರ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

