ತಾಳಗುಪ್ಪ ಹೋಬಳಿಗೆ ವಿಶೇಷ ಪ್ಯಾಕೇಜ್ ನೀಡಲು ಆಗ್ರಹ
ಕ.ಪ್ರ.ವಾರ್ತೆ ಸಾಗರ ಜು. 28
ವರದಾನದಿ ಪ್ರವಾಹದಿಂದ ಅತಿಹೆಚ್ಚು ಹಾನಿ ಸಂಭವಿಸಿರುವ ತಾಳಗುಪ್ಪ ಹೋಬಳಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಒತ್ತಾಯಿಸಿದರು.
ಭಾನುವಾರ ತಾಲೂಕಿನ ತಾಳಗುಪ್ಪ ಹೋಬಳಿಯ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ಸೈದೂರು, ಕಣಸೆ, ತಟ್ಟೆಗುಂಡಿ, ಯಲಕುಂದ್ಲಿ, ಬರದವಳ್ಳಿ, ಕಾಗೋಡು, ಹಿರೇನೆಲ್ಲೂರು, ಬೀಸನಗದ್ದೆ ಸೇರಿದಂತೆ ಬಹುತೇಕ ಗ್ರಾಮಗಳು ನೆರೆಯಿಂದ ಹಾನಿ ಅನುಭವಿಸಿವೆ. ಈ ಕಾರಣದಿಂದ ಪೂರ್ಣಹೋಬಳಿಯನ್ನು ನೆರೆಪೀಡಿತ ಪ್ರದೇಶವೆಂದು ಘೋಷಿಸಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ರು. 10 ಕೋಟಿ ಹಾನಿ: ನೆರೆಯಿಂದ ದ್ವೀಪದಂತಾಗುವ ಬೀಸನಗದ್ದೆ ಗ್ರಾಮಕ್ಕೆ ಸುಮಾರು 1.5ಕಿ.ಮೀ. ಬೋಡ್ರಸ್ ಹಾಕಿಯಾದರೂ ಸಂಪರ್ಕಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರೊಂದಿಗೆ ಚಚರ್ಚಿಸುವುದಾಗಿ ಹೇಳಿದ ಅವರು, ಮಳೆಯಿಂದ ಇಡೀ ಜಿಲ್ಲೆಯಲ್ಲಿ ಸುಮಾರು 10ಕೋಟಿ. ರೂ.ಗಳಿಗೂ ಹೆಚ್ಚಿನ ಹಾನಿ ಉಂಟಾಗಿದೆ ಎಂದರು.
ನೆರೆಪೀಡಿತ ಪ್ರದೇಶಗಳಿಗೆ ತುರ್ತು ಕಾಮಗಾರಿಗಳನ್ನು ನಿರ್ವಹಿಸಲು ತಲಾ 10 ಲಕ್ಷ ರೂ. ಹಣ ಬಿಡುಗಡೆ ಮಾಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದರೂ ಈತನಕ ಬಿಡುಗಡೆ ಮಾಡಿಲ್ಲ. ತಕ್ಷಣ ಹಣ ಬಿಡುಗಡೆ ಮಾಡುವ ಮೂಲಕ ಅಗತ್ಯ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದರು.
ಆ.3ರಿಂದ ರೈಲು: ಆಗಸ್ಟ್ 3ರಿಂದು ಶಿವಮೊಗ್ಗ -ತಾಳಗುಪ್ಪ ಪ್ಯಾಸೆಂಜರ್ ಹಾಗೂ ಮೈಸೂರು ಪ್ಯಾಸೆಂಜರ್ ರೈಲು ಓಡಾಟ ಪ್ರಾರಂಭವಾಗುವುದು ಬಹುತೇಕ ಖಚಿತವಾಗಿದೆ. ಈ ಕುರಿತಂತೆ ಕಳೆದ ವಾರ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತನಾಡಿದಾಗ ಆ.3ರಂದು ಉದ್ಘಾಟಿಸುವ ಮಾತನಾಡಿದ್ದಾರೆ ಎಂದು ಹೇಳಿದ ಅವರು, ಶಿವಮೊಗ್ಗ ತಾಳಗುಪ್ಪ ನಡುವೆ ಬರುವ ಕೋಟೆಗಂಗೂರು, ಕೊನಗವಳ್ಳಿ, ಹಾರ್ನಹಳ್ಳಿ, ಕುಂಸಿ, ಅರಸಾಳು, ಕೆಂಚನಾಳ, ಬಾಳೆಗುಂಡಿ, ಅಡ್ಡೇರಿ, ಕಾನ್ಲೆ ಗ್ರಾಮಗಳಲ್ಲಿ ರೈಲು ನಿಲುಗಡೆ ಮಾಡುವಂತೆ ಒತ್ತಾಯಿಸಿ ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.
ನಿಗದಿತ ಸ್ಥಳದಲ್ಲೇ ಸೇತುವೆ: ತುಮರಿ ಸೇತುವೆಗೆ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿ ಅದಕ್ಕೆ ಬೇಕಾದ ಹಣವನ್ನು ಮೀಸಲಿಟ್ಟಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಬೆಳವಣಿಗೆಯಾಗಿದೆ. ಈಗ ಸ್ಥಳ ಬದಲಾವಣೆಯ ವಿಷಯ ಅಪ್ರಸ್ತುತ. ರಾಜ್ಯ ಸರ್ಕಾರ ಉದ್ದೇಶಿತ ಸ್ಥಳದಲ್ಲಿಯೇ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು
. ಹಾಗೆಯೇ ಚೆಕ್ಕೋಡು ಸೇತುವೆಗೂ ಹಿಂದೆಯೆ ಹಣ ಬಿಡುಗಡೆ ಮಾಡಲಾಗಿದೆ. ಈ ಕಾಮಗಾರಿಯನ್ನು ಕೂಡ ತಕ್ಷಣ ಪ್ರಾರಂಭಿಸಬೇಕು ಎಂದು ಹೇಳಿದರು.
ಸೈದೂರು ಗ್ರಾಮ ಪಂಚಾಯ್ತಿ ಸದಸ್ಯ ಮಹಾಬಲೇಶ್ವರ ಜೆ. ನಾಯಕ್, ಹಿರೇನೆಲ್ಲೂರು ಗ್ರಾಮ ಪಂಚಾಯ್ತಿ ಸದಸ್ಯ ದೇವೇಂದ್ರಪ್ಪ, ಕೆಜೆಪಿ ಮುಖಂಡರಾದ ಟಿ.ಡಿ.ಮೇಘರಾಜ್, ಗಣೇಶಪ್ರಸಾದ್, ವಾದಿರಾಜ್, ತುಕಾರಾಮ, ವಿ.ಮಹೇಶ್ ಇನ್ನಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

