ಶಿವಮೊಗ್ಗ

ಮಳೆ ನಷ್ಟ: ಅಂದಾಜು ಪಟ್ಟಿ ತಯಾರಿಸಿ

Published On :

ಕ.ಪ್ರ.ವಾರ್ತೆ  ಶಿಕಾರಿಪುರ  ಜು.29 ಮಳೆ ಹಾನಿಯಿಂದಾಗಿ ತಾಲೂಕಿನಲ್ಲಿ ಸಂಭವಿಸಿರುವ ನಷ್ಟದ ಅಂದಾಜು ಪಟ್ಟಿಯನ್ನು ಕೂಡಲೇ ತಯಾರಿಸಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸುವಂತೆ ಸಂಸದ ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ, ಮಳೆ ಹಾನಿಯಿಂದಾಗಿ ಸಂಭವಿಸಿರುವ ನಷ್ಟದ ಬಗ್ಗೆ ಸರ್ಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳ ಹಾಗೂ ಗ್ರಾಪಂ ಅಧ್ಯಕ್ಷ, ಕಾರ್ಯದರ್ಶಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೆಚ್ಚಿನ ನೀಗಾವಹಿಸಿ: ತಾಲೂಕಿನ ವಿವಿಧ ಗ್ರಾಮದಲ್ಲಿ ಶಾಸಕರು, ಸಂಸದರ ಅನುದಾನದಲ್ಲಿ ನೀಡಲಾಗಿರುವ ಸಮುದಾಯ ಭವನ ಮತ್ತಿತರ ಕಾಮಗಾರಿಯನ್ನು ಶೀಘ್ರ ಆರಂಭಿಸಲು ಸೂಚಿಸಿ, ಕಾಮಗಾರಿಗೆ ಅಡೆತಡೆಗಳಿದ್ದಲ್ಲಿ ವ್ಯಾಪ್ತಿಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಕಾಳಜಿ ವಹಿಸಿ ಬಗೆಹರಿಸುವ ಮೂಲಕ ಹೆಚ್ಚಿನ ನಿಗಾ ವಹಿಸಲು ತಿಳಿಸಿದರು.
ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಪ್ರಭಾಕರ್ ಮಾತನಾಡಿ, ಕಳೆದ ಬಾರಿಗಿಂತ ಪ್ರಸಕ್ತ ಸಾಲಿನಲ್ಲಿ ಅತ್ಯಧಿಕ ಮಳೆ ತಾಲೂಕಿನಲ್ಲಿ ದಾಖಲಾಗಿದ್ದು, ಇದರಿಂದ ಹಲವೆಡೆ ಕೆರೆ ಕಟ್ಟೆ ಒಡೆದು ಕೃಷಿ ಭೂಮಿಗೆ ಹಾನಿಯಾಗಿದೆ ಎಂದ ಅವರು ತಾವರೆಕಟ್ಟೆ ಕೆರೆ ಏರಿ ಒಡೆದು ಸಮೀಪದ ಜಮೀನಿಗೆ ನೀರು ಹರಿದ ಪರಿಣಾಮ ನೂರಾರು ಎಕರೆ ಮೆಕ್ಕೆಜೋಳದ ಬೆಳೆಗೆ ಹಾನಿಯಾಗಿದೆ ಎಂದರು.
ಜೋಳ ನಾಶದ ಭೀತಿ: ಜಾವಗಟ್ಟೆ, ಬಳ್ಳಿಗಾವಿ ಮತ್ತಿತರ ಕಡೆಗಳಲ್ಲಿ ಕೆರೆ ಏರಿ ಹಾನಿಗೆ 60 ಎಕರೆಗೆ ಮಿಗಿಲಾಗಿ ಜೋಳದ ಫಸಲು ನಾಶವಾಗುವ ಭೀತಿ ಎದುರಿಸುತ್ತಿದೆ ಎಂದ ಅವರು, ವಿಪರೀತ ಮಳೆಯಿಂದಾಗಿ ಜೋಳದ ಫಸಲು ನೀರಿನಿಂದಾಗಿ ಆವೃತವಾಗಿದ್ದು, ನೀರು ಸಂಪೂರ್ಣ ಕಡಿಮೆಗೊಳಿಸಿ, ಲಘು ಪೋಶಕಾಂಶ ಬಳಕೆ ಮಾಡಿದಲ್ಲಿ ರೋಗದ ಬಾಧೆಯಿಂದ ತಪ್ಪಿಸಬಹುದಾಗಿದೆ ಎಂದರು.
ರೈತರು ಶೀಘ್ರ ಪರಿಹಾರಕ್ಕೆ ಕೇವಲ ಯೂರಿಯಾ ಹಾಗೂ ಡಿಎಪಿ ಗೊಬ್ಬರವನ್ನು ಯಥೇಚ್ಚವಾಗಿ ಬಳಕೆ ಮಾಡುತ್ತಿದ್ದು, ಇದರಿಂದಾಗಿ ಫಸಲು ರೋಗಕ್ಕೆ ತುತ್ತಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
33 ಶಾಲೆಗೆ ಹಾನಿ: ತಾಲೂಕಿನಲ್ಲಿನ 33 ಶಾಲೆಯ 66 ಕೊಠಡಿಗಳು ಮಳೆ ಹಾನಿಗೆ ತುತ್ತಾಗಿದ್ದು, ಹಲವೆಡೆ ಹಳೆಯ ಮೇಲ್ಚಾವಣಿ, ಗೋಡೆಗಳಲ್ಲಿ ಬಿರುಕು ಕಂಡುಬಂದಿದೆ ಎಂದು ಶಿಕ್ಷಣ ಇಲಾಖೆಯ ಶಿವ್ಯಾನಾಯ್ಕ ಸಭೆಯ ಗಮನ ಸೆಳೆದರು.
ಕೂಡಲೇ ದಾಖಲೆ ಸಹಿತ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ತಲುಪಿಸುವಂತೆ ಸಂಸದರು ಸೂಚಿಸಿದರು. ಹಿತ್ಲ ಗ್ರಾಮದ ಮೇಲ್ಭಾಗದಲ್ಲಿರುವ ಬಾಕ್ಸ್ ಚರಂಡಿ ಮಳೆಗೆ ಭರ್ತಿಯಾಗಿ ಕೆಳಭಾಗದ ಮುಸ್ಲಿಂ ಕಾಲೋನಿಗೆ ಕೊಳಚೆ ನೀರು ನುಗ್ಗುತ್ತಿದ್ದು, ಕೂಡಲೇ ದುರಸ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಗಮನ ಹರಿಸುವಂತೆ ಗ್ರಾ.ಪಂ ಅಧ್ಯಕ್ಷ್ಯರಾದ ಕುಮಾರಿ ಬಾಯಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪ್ರಕಾಶ್ ಗಣಾಚಾರಿ, ತಾಪಂ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷರಾದ  ಸರೋಜಮ್ಮ, ಸದಸ್ಯ ಲಕ್ಷ್ಮಣನಾಯ್ಕ, ವೀರನಗೌಡ, ಜಿಪಂ ಸದಸ್ಯ ಈಶ್ವರಪ್ಪ, ಶಾಂತಮ್ಮ, ಪುರಸಭಾ ಮುಖ್ಯಾಧಿಕಾರಿ ಮನೋಹರ್, ಲೋಕೋಪಯೋಗಿ ಇಲಾಖೆ ಎಇಇ ರಮೇಶ್ ಬಾಣದ್, ಮೆಸ್ಕಾಂ ಎಇಇ ಚಿದಾನಂದ್, ಲೋಕೇಶಪ್ಪ, ತಾಲೂಕು ವೈದ್ಯಾಧಿಕಾರಿ ಡಾ. ನಾಗರಾಜನಾಯ್ಕ, ಪಶು ವೈದ್ಯಾಧಿಕಾರಿ ಡಾ.ಬಸವೇಶ್ ಹೂಗಾರ್ ತಡಗಣಿ  ಗ್ರಾಪಂ ಅಧ್ಯಕ್ಷ ಮಂಜಪ್ಪ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.