3 ಲಕ್ಷ ಮಕ್ಕಳಿಗೆ ಕ್ಷೀರಭಾಗ್ಯ
ಕ.ಪ್ರ.ವಾರ್ತೆ ಶಿವಮೊಗ್ಗ ಜು.31
ಕ್ಷೀರ ಭಾಗ್ಯ ಯೋಜನೆ ಗುರುವಾರದಿಂದ ರಾಜ್ಯಾದ್ಯಂತ ಜಾರಿಗೆ ಬರಲಿದ್ದು, ಜಿಲ್ಲೆ ಸುಮಾರು 3 ಲಕ್ಷ ಮಕ್ಕಳು ವಾರದಲ್ಲಿ ಮೂರು ದಿನ ಹಾಲು ಕುಡಿಯಲಿದ್ದಾರೆ. ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು ಹಾಗೂ ಅಂಗನವಾಡಿಯ ಮಕ್ಕಳು ಈ ಯೋಜನೆಯ ಫಲಾನುಭವಿಗಳು.
ಗುರುವಾರ ಬೆಳಿಗ್ಗೆ 11 ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಕ್ಷೀರಭಾಗ್ಯ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಚಾಲನೆ ನೀಡಲಿದ್ದಾರೆ.
ಒಂದು ಮಗುವಿಗೆ 150 ಮಿ.ಲೀ.: ವಾರದ 3 ದಿನ ಹಾಲು ವಿತರಿಸಲಾಗುವುದು. ಸೋಮವಾರ, ಬುಧವಾರ ಹಾಗೂ ಶುಕ್ರವಾರ ಶಾಲೆಯ ಪ್ರಾರ್ಥನೆ ಮುಗಿದ ನಂತರ, ತರಗತಿ ಆರಂಭಗೊಳ್ಳುವ ಪೂರ್ವದಲ್ಲೇ ಹಾಲು ನೀಡುವ ವ್ಯವಸ್ಥೆಯಾಗಲಿದೆ.
ಉರ್ದು ಶಾಲೆಗಳಲ್ಲಿ ಶುಕ್ರವಾರದ ಬದಲು ಶನಿವಾರ ಹಾಲು ವಿತರಿಸಲಾಗುವುದು.
ಶಿವಮೊಗ್ಗ ಹಾಲು ಒಕ್ಕೂಟವು ಈಗಾಗಲೇ ಶಾಲೆಗಳಿಗೆ ಹಾಲಿನ ಪುಡಿಯನ್ನು ವಿತರಿಸಿದೆ. ಒಂದು ಮಗುವಿಗೆ 18 ಗ್ರಾಂ ಹಾಲಿನ ಪುಡಿಯಿಂದ ತಯಾರಿಸಿದ 150 ಮಿಲಿ ಲೀಟರ್ ಹಾಲನ್ನು ನೀಡಲಾಗುವುದು.
ತಿಂಗಳಿಗೆ ಒಟ್ಟು 12 ದಿನ ಮಕ್ಕಳಿಗೆ ಹಾಲು ವಿತರಣೆಯಾಗಲಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ 42,164 ಕಿಲೋ ಹಾಲಿನ ಪುಡಿ ಅಗತ್ಯವಿದೆ. ಈಗಾಗಲೇ ಶಾಲೆಯ ಮುಖ್ಯೋಪಾಧ್ಯಾಯರಿಗೆ ಈ ಬಗ್ಗೆ ಸಭೆಗಳನ್ನು ನಡೆಸಿ ಹಾಲು ವಿತರಣೆಯ ಬಗ್ಗೆ ಮಾಹಿತಿ ನೀಡಲಾಗಿದೆ.
ಶಿಮುಲ್ ಅಧಿಕಾರಿಗಳು ಸಂಬಂಧಪಟ್ಟವರಿಗೆ ಈಗಾಗಲೇ ಹಾಲಿನ ಪುಡಿ ಸಂಗ್ರಹಿಸುವ ರೀತಿ, ಕಾಯಿಸುವ ಸಂದರ್ಭದಲ್ಲಿ ಎಷ್ಟು ನೀರು ಬೆರೆಸಬೇಕು, ಎಷ್ಟು ಪ್ರಮಾಣದಲ್ಲಿ ಬಿಸಿ ಮಾಡಬೇಕು ಎಂಬ ಮಾಹಿತಿ ಕೊಟ್ಟಿದ್ದಾರೆ.
ಹೊಸ ಪಾತ್ರೆ: ಮಕ್ಕಳಿಗೆ ಹಾಲು ಕಾಯಿಸಿ ಕೊಡಲು ಹೊಸ ಪಾತ್ರೆಗಳನ್ನು ಶಾಲೆ ಸಂಚಿತ ನಿಧಿಯಿಂದ ಖರೀದಿಸಲು ಸೂಚಿಸಲಾಗಿದೆ. ಈಗ ಬಿಸಊಿಟ ಅಡುಗೆ ಮಾಡುತ್ತಿರುವ ಪಾತ್ರೆಗಳಲ್ಲಿ ಹಾಲು ಕಾಯಿಸಲು ಸಾಧ್ಯವಿಲ್ಲ.
ಆದ್ದರಿಂದ ಯಾವುದೇ ಸಂಚಿತ ನಿಧಿಯಿಂದ ಅಗತ್ಯವಿರುವ ಹಾಲು ಕಾಯಿಸುವ ಪಾತ್ರೆ, ಫಿಲ್ಟರ್, ಬಡಿಸುವ ಅಳತೆಯ ಪಾತ್ರೆ, ಹಾಲಿನ ಪುಡಿಯನ್ನು ಭದ್ರವಾಗಿ ಸಂಗ್ರಹಿಸಲು ಮುಚ್ಚಿರುವ ಬಾಕ್ಸ್, ಸೌಟು ಸೇರಿದಂತೆ ಇತರೆ ಪರಿಕರಗಳನ್ನು ಖರೀದಿ ಮಾಡಲು ಈಗಾಗಲೇ ಸಿಆರ್ಪಿಗಳ ಮೂಲಕ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಮಾಹಿತಿ ನೀಡಲಾಗಿದೆ.
100 ಮಾಸಿಕ ವೇತನ: ಬೆಳಿಗ್ಗೆ ಶಾಲೆಗೆ ಬಂದು ಮಕ್ಕಳ ಪ್ರಾರ್ಥನೆಯ ಮುಗಿದ ಸಂದರ್ಭದಲ್ಲಿ ಹಾಲನ್ನು ಕಾಯಿಸಿ ಸೋಸಿ, ಆರಿಸಿ, ಕುಡಿಯಲು ಸಿದ್ಧಪಡಿಸುವ ಶಾಲೆಯ ಬಿಸಿಯೂಟ ಅಡುಗೆ ತಯಾರಕರಿಗೆ ತಲಾ 100 ಮಾಸಿಕ ವೇತನವನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ.
ಈ ಕ್ಷೀರಭಾಗ್ಯ ಯೋಜನೆಯಲ್ಲಿ ಹಾಲು ಕುಡಿಯುವ ಪ್ರತಿ ಮಗುವಿಗೆ ಒಂದು ದಿನಕ್ಕೆ 4.64 ಪೈಸೆ ಖರ್ಚಾಗಲಿದೆ. 18 ಗ್ರಾಂ ಹಾಲಿನ ಪುಡಿಗೆ 4.05 ಪೈಸೆ ಆಗಿದ್ದರೆ, ಸಕ್ಕರೆ 10 ಗ್ರಾಂಗೆ 32 ಪೈಸೆ, ಇದಕ್ಕೆ ಬಳಸುವ ಗ್ಯಾಸ್ಗೆ 15 ಪೈಸೆ, ಇತರೆ ವೆಚ್ಚ 12 ಪೈಸೆ ಸೇರಿದಂತೆ ಇಷ್ಟು ಖರ್ಚಾಗಲಿದೆ ಎಂದು ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಜಿ. ಲೋಹಿತ್ ಹೇಳಿದ್ದಾರೆ.
ಕಾರ್ಯಕ್ರಮ: ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ.ಬಿ. ಪ್ರಸನ್ನಕುಮಾರ್ ನಿರ್ವಹಿಸಲಿದ್ದು, ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಎಲ್. ಜಗದೀಶ್ವರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸುವರು.
ಸರಬರಾಜು ಹೇಗೆ
ಅಂಗನವಾಡಿಗಳಿಗೆ ಹಾಲಿನ ಪುಡಿಯನ್ನು ತಲುಪಿಸುವ ಜವಾಬ್ದಾರಿಯನ್ನು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ಹೊತ್ತುಕೊಂಡಿದ್ದಾರೆ. ಆದರೆ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಮಸ್ಯೆ ಇನ್ನೂ ಇದೆ. ಸದ್ಯ ನಾವೇ ತಲುಪಿಸುತ್ತೇವೆ, ಮುಂದೆ ನಿಮ್ಮ ಜವಾಬ್ದಾರಿ ಎಂದಿದ್ದಾರೆ. ಆದರೆ, ಶಿಮುಲ್ ವ್ಯಾಪ್ತಿಯ 6 ಸಾವಿರ ಶಾಲೆಗಳಿಗೆ ತಲುಪಿಸುವುದು ನಮ್ಮಿಂದ ಕಷ್ಟಸಾಧ್ಯ. ಆದ್ದರಿಂದ ಪರ್ಯಾಯ ಮಾರ್ಗದ ಆಲೋಚನೆ ನಡೆಯುತ್ತಿದೆ.
- ವಿ.ಎಸ್. ಅಕ್ಕಿ, ನಿರ್ವಾಹಕ ನಿರ್ದೇಶಕರು
ಶಿವಮೊಗ್ಗ ಹಾಲು ಒಕ್ಕೂಟ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

