ಹೊದ್ದು ಮಲಗಿದ ಕನ್ನಡ ಸಂಘಟನೆಗಳು
ಶಿವಮೊಗ್ಗ (ಕುವೆಂಪು ಮಹಾಮಂಟಪ)
ಮಲೆನಾಡ ತವರಲ್ಲಿ ಕನ್ನಡ ಜಾತ್ರೆಯ ಸಂಭ್ರಮ, ಕನ್ನಡದ ನುಡಿ ತೇರು ಎಳೆಯುವ ಅಪರೂಪದ ಹೊತ್ತು.
ಇಂತಹ ಕನ್ನಡ ಡಿಂಡಿಮ ಮೊಳಗುತ್ತಿರುವ ಹೊತ್ತಿನಲ್ಲೇ ನಗರದ ಕನ್ನಡಪರ ಸಂಘಟನೆಗಳು ಮಾತ್ರ ಹೊದ್ದು ಮಲಗಿದ್ದವು.
ಸಂಘಟನೆಗಳು ದೂರ: ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ 8ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಶನಿವಾರ ಇಳಿಹೊತ್ತಿನಲ್ಲಿ ವಿದ್ಯುಕ್ತವಾಗಿ ಚಾಲನೆಗೊಂಡಿತು. ಆದರೆ, ನಗರದ ಪ್ರಮುಖ ಎಲ್ಲಾ ಕನ್ನಡ ಸಂಘಟನೆಗಳು ಈ ಕನ್ನಡ ಜಾತ್ರೆಯಿಂದ ಸಂಪೂರ್ಣವಾಗಿ ದೂರವೇ ಉಳಿದವು. ಸಮ್ಮೇಳನದ ಪ್ರಮುಖ ಭಾಗ ಎಂದೇ ಹೇಳಲಾಗುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳ ಹೊರತಾಗಿ ಹತ್ತಿಪ್ಪತ್ತು ಮಂದಿಯಷ್ಟೇ ಹೆಜ್ಜೆಹಾಕಿದರು.
ವರ್ಷಪೂರ್ತಿ ಕನ್ನಡದ ಹೆಸರಿನಲ್ಲಿ ಹೋರಾಟ, ಹಾರಾಟ ನಡೆಸುವ ಹಾಗೂ ನವೆಂಬರ್ನಲ್ಲಿ ಚಂದಾ ಎತ್ತಿ ರಸಮಂಜರಿ ನಡೆಸುವ ಸಂಘಟನೆಗಳ ಕಾರ್ಯಕರ್ತರಿಗೆ ಈ ಕನ್ನಡ ಹಬ್ಬದ ಸದ್ದೇ ಕೇಳದಿದ್ದುದು ವಿಪರ್ಯಾಸ.
ಮನಸ್ಥಿತಿ ಬದಲಾಗಬೇಕು: ಕನ್ನಡಪ್ರಭದೊಂದಿಗೆ ಈ ಕುರಿತು ಅನಿಸಿಕೆ ಹಂಚಿಕೊಂಡ ಕನ್ನಡಪರ ಹಿರಿಯ ಮನಸ್ಸೊಂದು, ಇಂದಿನವರಿಗೆ ಕನ್ನಡ ಪರ ಕಾರ್ಯ ಎಂದರೆ ನವೆಂಬರ್ನಲ್ಲಿ ಆರ್ಕೆಸ್ಟ್ರಾ ಆಯೋಜನೆ ಮಾಡುವುದು, ಕಾವೇರಿ ವಿಚಾರ ಬಂದಾಗ ರಸ್ತೆಯಲ್ಲಿ ಟೈರ್ಗೆ ಬೆಂಕಿ ಇಡುವುದಷ್ಟೇ ಎಂಬ ಭಾವನೆ ಬೇರೂರಿದೆ. ಈ ಮನಸ್ಥಿತಿಯನ್ನು ತೊಳೆಯುವ ಕಾರ್ಯ ತುರ್ತಾಗಿ ಆಗಬೇಕಾಗಿದೆ ಎಂದರು.
ಈ ಮಧ್ಯೆಯೇ ಸಮ್ಮೇಳನ ಆಯೋಜಕರು ನಗರದ ಕನ್ನಡ ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ಹೋಗಿದ್ದರೆ ಸಮ್ಮೇಳನವನ್ನು ಇನ್ನಷ್ಟು ಚೆಂದವಾಗಿಸಬಹುದಿತ್ತು, ಸಂಘಟನೆಗಳಿಗೆ ಒಂದಷ್ಟು ಮಾರ್ಗದರ್ಶನಕ್ಕೂ ಅವಕಾಶವಿತ್ತು ಎಂಬ ಅಭಿಪ್ರಾಯವೂ ಕೇಳಿಬಂದಿದೆ.
ಅಚ್ಚುಕಟ್ಟಾದ ಮೆರವಣಿಗೆ: ಡೊಳ್ಳು- ತಮಟೆಯ ಸದ್ದು, ಕೀಲುಕುದುರೆ- ಬೊಂಬೆಗಳ ನೃತ್ಯ, ಕೋಲಾಟದ ರಂಗು ಸಮ್ಮೇಳಾನಧ್ಯಕ್ಷರ ಮೆರವಣಿಗೆಗೆ ಕಳೆಕಟ್ಟಿತ್ತು. ಪ್ರಮುಖವಾಗಿ ಸಿಂಗಾರಗೊಂಡಿದ್ದ ಚಕ್ಕಡಿ (ಸಮ್ಮೇಳನಾಧ್ಯಕ್ಷರ ರಥ)ಗಮನ ಸೆಳೆಯಿತು.
ಮಧ್ಯಾಹ್ನ 4.30ರ ಸಮಯದಲ್ಲಿ ಶಿವಪ್ಪನಾಯಕ ಪುತ್ಥಳಿ ಸಮೀಪದಿಂದ ಸಾಗಿಬಂದ ಮೆರವಣಿಗೆ ನೆಹರೂ ರಸ್ತೆ, ಬಾಲರಾಜ ಅರಸ್ ರಸ್ತೆ ಮೂಲಕ ಮಹಾವೀರ ವೃತ್ತ ತಲುಪಿ, ಅಲ್ಲಿಂದ ಕುವೆಂಪು ಮಂಟಪ (ಕುವೆಂಪು ರಂಗಮಂದಿರ)ದಲ್ಲಿ ಸಂಪನ್ನಗೊಂಡಿತು. ಕಸಪಾ ಜಿಲ್ಲಾ ಘಟಕದ ಪ್ರಮುಖರು ಮೆರವಣಿಗೆಯಲ್ಲಿ ಕಾಣಿಸಿಕೊಂಡರು.
ಜವಾಬ್ದಾರಿ ಹಸ್ತಾಂತರ: 7ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಜಿ.ವಿ.ಜಯಾ ರಾಜಶೇಖರ್ ಅವರು ಪರಿಷತ್ತಿನ ಧ್ವಜವನ್ನು 8ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹುಚ್ಚಪ್ಪ ಮಾಸ್ತರ್ ಅವರಿಗೆ ಹಸ್ತಾಂತರಿಸುವ ಮೂಲಕ ಸಮ್ಮೇಳನ ಮುನ್ನೆಡೆಸುವ ಜವಾಬ್ದಾರಿ ನೀಡಿದರು. ಇದೇ ಸಂದರ್ಭದಲ್ಲಿ ಜಯಾ ರಾಜಶೇಖರ್ ಹಾಗೂ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಅಭಿನಂದಿಸಲಾಯಿತು.
ಸಭಾಂಗಣ ಭರ್ತಿ; ಉತ್ಸಾಹ ಕಳಕೊಂಡ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಅಪವಾದ ಎಂಬಂತೆ ಸಭಾ ಕಾರ್ಯಕ್ರಮ ನಡೆದ ಕುವೆಂಪು ಮಂಟಪದ ವಸುದೇವ ಭೂಪಾಲಂ ವೇದಿಕೆ ಮಾತ್ರ ಪೂರ್ತಿ ಭರ್ತಿಯಾಗಿತ್ತು. ಕಿಕ್ಕಿರಿದು ತುಂಬಿದ್ದ ಜನತೆ ಸಮ್ಮೇಳನಾಧ್ಯಕ್ಷ ಹುಚ್ಚಪ್ಪ ಮಾಸ್ತರ್ ಅವರ ಚಾಟಿ ಏಟಿನಂತಹ ಭಾಷಣ ಆಲಿಸಿದರು.
-ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

