ಶಿವಮೊಗ್ಗ

ಬಸವಣ್ಣನವರ ವಿಚಾರ ಆಚರಣೆಗೆ ತನ್ನಿ

Published On :

ಕ.ಪ್ರ.ವಾರ್ತೆ, ಭದ್ರಾವತಿ, ಜೂ.4
ಬಸವಣ್ಣನವರ ಜಯಂತಿ ಆಚರಿಸಿ ಅವರ ವಿಚಾರಗಳನ್ನು ಮಾತ್ರ ಕೇಳಿ ನಂತರ ಅವುಗಳನ್ನು ಆಚರಣೆಗೆ ತಾರದೆ ಮರೆಯುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಪ್ರಸಾರಾಂಗ ನಿರ್ದೇಶಕರು ಮತ್ತು ಕುಲಪತಿಗಳ ವಿಶೇಷಾಧಿಕಾರಿ ಡಾ. ಜಿ.ಪ್ರಶಾಂತ ನಾಯಕ್ ಹೇಳಿದರು.
ಅವರು ಕಾಗದನಗರದ ವಿಶ್ವಗುರು ಬಸವೇಶ್ವರ ಸಮಿತಿ ಎಂ.ಪಿ.ಎಂ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಸವ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿ,  ಇಂದು ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಅನಾಥಾಶ್ರಮ, ವೃದ್ಧಾಶ್ರಮಗಳು ಮತ್ತು ವಿವಾಹ ವಿಚ್ಛೇದನಗಳು ಹೆಚ್ಚಾಗುತ್ತಿವೆ ಎಂದು ವಿಷಾದ ವ್ಯಕಪಡಿಸಿದರು.
ಅಧೋಗತಿಗೆ ಕುಸಿತ: ಲಿವಿಂಗ್ ಟುಗೆದೆರ್‌ನಂತಹ ವಿದೇಶೀ ಸಂಸ್ಕೃತಿ ಹಾಗೂ ಆಧುನಿಕ ಜೀವನ ಶೈಲಿಯ ಪರಿಣಾಮದಿಂದ  ಸಮಾಜ ಅಧೋಗತಿಗೆ ಕುಸಿಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ವಚನಕಾರರ ಕಾಲದಲ್ಲಿ ಮಾತಿಗೆ ಬೆಲೆಯಿತ್ತು ಎಂದರು. ವಿಶ್ವೇಶ್ವರಾಯ ಬಿ.ಎಡ್. ಕಾಲೇಜು ಉಪನ್ಯಾಸಕಿ ಎನ್.ಪಿ.ಲತಾ ಮಾತನಾಡಿದರು.
ಅಹಂಭಾವ ಹೆಚ್ಚಳ: ವಿದ್ಯಾರ್ಥಿಗಳಲ್ಲಿ ಅಹಂಭಾವ ಹೆಚ್ಚುತ್ತಿದೆ. ತಂದೆ-ತಾಯಿ, ಗುರು-ಹಿರಿಯರಲ್ಲಿ ಗೌರವ ತೋರುತ್ತಿಲ್ಲ. ಯುವಜನತೆಯಲ್ಲಿ ಸಂಯಮ ಕಡಿಮೆಯಾಗುತ್ತಿದೆ. ಬೇಕು ಎಂಬ ಬೇಡಿಕೆಯ ಹಿಂದಿರುವ ಅವಶ್ಯಕತೆಯನ್ನು ಅರ್ಥೈಸಿಕೊಳ್ಳದೇ ವರ್ತಿಸುತ್ತಿರುವ ಕಿರಿಯರಿಗೆ ಹಿರಿಯರು ಮಾರ್ಗದರ್ಶನ ನೀಡುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಹರಿಹರ ತಾಲೂಕು ನಂದಿಗುಡಿ ವೃಷಭಪುರಿ ಮಹಾಸಂಸ್ಥಾನ ಬೃಹನ್ಮಠದ  ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀಗಳು ಸಮಾಜದಲ್ಲಿನ ಇಂದಿನ ಬದುಕು ಶಾಂತಿ, ನೆಮ್ಮದಿ ಇಲ್ಲದೆ ತಲ್ಲಣಗಳಿಂದ ಕೂಡಿದೆ ಎಂದರು. ಮೈಸೂರು ಕಾಗದ ಕಾರ್ಖಾನೆಯ ಮಾನವ ಸಂಪನ್ಮೂಲಾಭಿವೃದ್ಧಿ ಹಾಗೂ ಆಡಳಿತ ಮಹಾಪ್ರಬಂಧಕ ಶ್ರೀನಿವಾಸ್, ನಿರ್ವಹಣೆಗಳ ಮಹಾಪ್ರಬಂಧಕ ರವೀಂದ್ರನಾಥ್, ಹಣಕಾಸು ಉಪ ಮಹಾಪ್ರಬಂಧಕ ಮಲಗನ್ ಭಾಗವಹಿಸಿ ಮಾತನಾಡಿದರು.ಅಕ್ಕ ನಾಗಲಾಂಬಿಕೆ ಮಹಿಳಾ ಸಮಾಜದವರು ಶಿವಯೋಗಿ ಸಿದ್ದರಾಮೇಶ್ವರ ತ್ರಿಪತಿ ವಚನ ಗಾಯನ ನಡೆಸಿಕೊಟ್ಟರು. ಶಾಂತಲಾ ಉದೋಶಿ ನೃತ್ಯ ರೂಪಕ ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.