1ಕ್ಕೆ 30 ಕಿಲೋ ಅಕ್ಕಿ; ಹೋರಾಟಕ್ಕೆ ಬಿಜೆಪಿ ರೆಡಿ
ಕ.ಪ್ರ.ವಾರ್ತೆ ಶಿವಮೊಗ್ಗ ಜೂ.8
ಒಂದು ರು.ಗೆ 30 ಕಿಲೋ ಅಕ್ಕಿಯನ್ನು ಜೂನ್ 1ರಿಂದ ನೀಡುವುದಾಗಿ ಹೇಳಿದ ಮುಖ್ಯಮಂತ್ರಿಯವರು ಈಗ ಯೋಜನೆಯನ್ನು ಜುಲೈಗೆ ಮುಂದೂಡಿದ್ದರೂ, ಜುಲೈ ತಿಂಗಳಲ್ಲಿ ಜೂನ್ ತಿಂಗಳ ಅಕ್ಕಿಯನ್ನೂ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಗ್ಯಾರೆಂಟಿ ಎಂದು ಬಿಜೆಪಿ ಹೇಳಿದೆ.
ಹನಿಮೂನ್ ಪಿರಿಯಡ್ ಮುಗಿಯಿತು. ಇನ್ನು ಹೋರಾಟ ಎದುರಿಸಲು ಸಿದ್ಧರಾಗಿ ಎಂದಿರುವ ಬಿಜೆಪಿ ರಾಜ್ಯ ಕಾಂಗ್ರಸ್ ಸರ್ಕಾರದ ಮೊದಲ ಹೆಜ್ಜೆ ಲೋಪಗಳನ್ನು ಪಟ್ಟಿ ಮಾಡಿದೆ.
ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೈಗೊಂಡ ಖಂಡನಾ ನಿರ್ಣಯಗಳ ಮಾಹಿತಿಯನ್ನು ರಾಜ್ಯ ಬಿಜೆಪಿ ವಕ್ತಾರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು.
ಬೀದಿಗಿಳಿಯುವುದು ಗ್ಯಾರೆಂಟಿ: ಬಿಪಿಎಲ್ ಕಾರ್ಡ್‌ದಾರರಿಗೆ 1 ರು.ಗೆ 30 ಕಿಲೋ ಅಕ್ಕಿ ನೀಡುವ ನಿರ್ಧಾರ ತರಾತುರಿಯದ್ದು. ಜುಲೈಗೆ ಮುಂದೂಡಿರುವುದನ್ನು ನೋಡಿದರೆ ಇದು ಯೋಚಿಸಿ ತೆಗೆದುಕೊಂಡ ನಿರ್ಧಾರವಲ್ಲ ಎಂಬುದು ಸಾಬೀತಾಗಿದೆ ಎಂದ ಅವರು, ಜುಲೈ ತಿಂಗಳಲ್ಲಿ ಜೂನ್ ತಿಂಗಳ 30 ಕಿಲೋ ಅಕ್ಕಿ ಸೇರಿಸಿ ಕೊಡದಿದ್ದರೆ ಬೀದಿಗಿಳಿಯುವುದು ಗ್ಯಾರೆಂಟಿ ಎಂದರು. ಪಕ್ಷ ಕೈಗೊಂಡ ಇತರೆ ನಿರ್ಣಯಗಳನ್ನು ಅವರು ವಿವರಿಸಿದರು.
ಧ್ವೇಷದ ರಾಜಕಾರಣ: ಬಿಜೆಪಿ ಸರ್ಕಾರ ಘೋಷಿಸಿದ್ದ ಹೊಸ 43 ತಾಲೂಕುಗಳ ರಚನೆಯನ್ನು ನೆನಗುದಿಗೆ ಇಟ್ಟಿರುವುದು ಸೇಡಿನ ಕ್ರಮ. ಇದಕ್ಕಾಗಿ 2 ಕೋಟಿ ರು.ಗಳನ್ನೂ ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು. ಆದರೆ ಸಿದ್ದರಾಮಯ್ಯ ಅವರು ಆರ್ಥಿಕ ಹೊರೆಯ ನೆಪ ಹೇಳಿ ತಾಲೂಕು ರಚನೆ ಕೈಬಿಡುವುದಾಗಿ ಹೇಳುತ್ತಿದ್ದಾರೆ. ಅದೇ ರೀತಿ ವಸತಿ ಶಾಲೆ ರದ್ದು ಮಾಡುತ್ತಿರುವುದೂ ಸಹ ಧ್ವೇಷದ ರಾಜಕಾರಣಕ್ಕೆ ಉದಾಹರಣೆ.
ಕೋಮು ಧ್ವೇಷ ಬಿತ್ತುವ ಹುನ್ನಾರ: ಅಕ್ರಮ ಸಕ್ರಮ ಮಸೂದೆಯನ್ನು ಮತ್ತೆ ವಿಧಾನಸಭೆಯಲ್ಲಿ ಮಂಡಿಸಬೇಕು, ಕೃಷ್ಣಮಠ ಹಾಗೂ ಗೋಕರ್ಣ ದೇವಸ್ಥಾನಗಳ ಸ್ವಾಧೀನ ಪ್ರಸ್ತಾಪ ಕೋಮು ಧ್ವೇಷ ಬಿತ್ತುವ ಹುನ್ನಾರ. ಹಿಂದೂಧರ್ಮದ ಆಧಾರ ಸ್ಥಂಭವಾಗಿರುವ ಮಠಮಾನ್ಯಗಳ ಸ್ವಾಯತ್ತತೆಗೆ ಬಿಜೆಪಿ ಬದ್ಧವಾಗಿದೆ.
ಮನ್ನಾ ಮಾಡಿದ್ದ ರೈತರ 25 ಸಾವಿರ ರು. ವರೆಗಿನ ಸಾಲ ಚುನಾವಣಾ ನೀತಿ ಸಂಹಿತೆ ಕಾರಣ ಹೊಂದಾಣಿಕೆ ಆಗಿರಲಿಲ್ಲ. ಈಗ ಅವರು ತೆಗೆದುಕೊಳ್ಳುವ ಸಾಲದಲ್ಲಿ 25 ಸಾವಿರ ರು.ಗಳನ್ನು ಬ್ಯಾಂಕ್‌ಗಳು ಕಡಿತ ಮಾಡಿ ವಿತರಣೆ ಮಾಡುತ್ತಿವೆ. ಇದರಿಂದ ಕಡಿಮೆ ಸಾಲ ಪಡೆಯುವ ರೈತರಿಗೆ ತೀವ್ರ ತೊಂದರೆಯಾಗಿದೆ. ಕೂಡಲೇ ಸರ್ಕಾರ ಸಾಲ ಮನ್ನಾದ ಹಣವನ್ನು ಬ್ಯಾಂಕ್‌ಗಳಿಗೆ ಸರ್ಕಾರ ಪಾವತಿಸಬೇಕು. ಗೋಹತ್ಯೆ ನಿಷೇಧ ಕಾಯ್ದೆಯನ್ನು ಮರುಪರಿಶೀಲಿಸಲು ಹೊರಟಿರುವ ಸರ್ಕಾರದ ಕ್ರಮ ಖಂಡನೀಯ, ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಅಸಂಬದ್ಧ ಅರ್ಜಿಗಳ ವಿರುದ್ಧ ಸಮರ್ಪಕ ಕಾನೂನು ಹೋರಾಟ ನಡೆಸಿ ಅದನ್ನು ತಿರಸ್ಕೃತಗೊಳಿಸುವಲ್ಲಿ ಯಶಸ್ವಿಯಾಗಬೇಕು. ಸಿಎಂ ಅವರು ಯೋಚಿಸಿ, ನಿರ್ಧರಿಸಬೇಕು. ಸಮಾಲೋಚಿಸದೇ ನಿರ್ಧಾರ ಕೈಗೊಳ್ಳಬಾರದು ಎಂದು ಆಯನೂರು ಮಂಜುನಾಥ್ ಹೇಳಿದರು. ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ದತ್ತಾತ್ರಿ, ನಗರಸಭೆ ಮಾಜಿ ಅಧ್ಯಕ್ಷ ಎನ್.ಜೆ. ರಾಜಶೇಖರ್, ಜಿಪಂ ಮಾಜಿ ಅಧ್ಯಕ್ಷ ಬಸವರಾಜಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

