ಶಿವಮೊಗ್ಗ

ಕೊಟ್ಟ ಜವಾಬ್ದಾರಿ ನಿರ್ವಹಿಸುವೆ

Published On :

ಕ.ಪ್ರ.ವಾರ್ತೆ  ಸಾಗರ  ಜೂ.8
ಕೊಟ್ಟಿರುವ ಜವಾಬ್ದಾರಿ ಸಮರ್ಥವಾಗಿ, ಯಶಸ್ವಿಯಾಗಿ ನಿರ್ವಹಿಸುವ ವಿಶ್ವಾಸ ತಮಗಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
 ವಿಧಾನಸಭಾಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಮೊದಲ ಬಾರಿಗೆ ಶುಕ್ರವಾರ ಸಾಗರಕ್ಕೆ ಭೇಟಿ ನೀಡಿದ ಸಂದರ್ಭ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸರ್ಕಾರ ಈ ಕ್ಷೇತ್ರಕ್ಕೆ ಗೌರವದ ಸ್ಥಾನ ನೀಡಿದೆ. ಸ್ಥಾನಕ್ಕೆ ಕಳಂಕ ಬಾರದ ರೀತಿಯಲ್ಲಿ ನಡೆದುಕೊಳ್ಳುವ ವಿಶ್ವಾಸ ಇದೆ. ಇದಕ್ಕೆ ಕಾರಣರಾಗಿರುವ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಹಿಂದೆ ಬೀಳುವುದಿಲ್ಲ: ತಮಗೆ ಸ್ಪೀಕರ್ ಹುದ್ದೆ ನೀಡಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಬಹುದು ಎನ್ನುವ ಅನುಮಾನ ಬೇಡ. ಈ ಬಗ್ಗೆ ಮುಖ್ಯಮಂತ್ರಿಗಳೇ ಭರವಸೆ ನೀಡಿದ್ದು, ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬೀಳುವುದಿಲ್ಲ. ಮುಂದೆ ನಡೆಯುವ ಬಜೆಟ್ ಅಧಿವೇಶನಕ್ಕೂ ಮುಂಚಿತವಾಗಿ ಕ್ಷೇತ್ರಕ್ಕೆ ಆಗಬೇಕಾದ ಅಭಿವೃದ್ಧಿ ಕುರಿತು ರೂಪರೇಷೆ ಸಿದ್ಧಪಡಿಸಿ ಚಾಲನೆ ನೀಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಗುಟ್ಕಾ ನಿಷೇದಕ್ಕೆ ಆತಂಕ ಬೇಡ: ಸರ್ಕಾರ ಗುಟ್ಕಾ ನಿಷೇದ ಮಾಡಿ ಆದೇಶ ಹೊರಡಿಸಿದ ಒಂದು ವಾರದಲ್ಲಿ ಅಡಕೆ ದರದಲ್ಲಿ ಹೇಳಿಕೊಳ್ಳುವ ಏರುಪೇರು ಆಗಲಿಲ್ಲ. ಒಂದೊಮ್ಮೆ ಅಡಕೆ ಬೆಳೆಗಾರರಿಗೆ ತೊಂದರೆ ಆದರೆ ಸರ್ಕಾರ ಖುದ್ದು ಆಸಕ್ತಿ ವಹಿಸಿ ಬೆಳೆಗಾರರ ಬೆಂಬಲಕ್ಕೆ ನಿಲ್ಲುತ್ತದೆ. ಈ ಬಗ್ಗೆ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ ಸರ್ಕಾರ ಕೃಷಿಗೆ ಲಾಭದಾಯಕ ಬೆಲೆ ಕೊಡುವುದಕ್ಕೆ ಬದ್ಧವಾಗಿದೆ ಎಂದರು.
ಶಾಸಕರ ಪ್ರೀತಿಗೆ ಭಾವುಕನಾದೆ: ತಮ್ಮನ್ನು ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಶಾಸಕರೆಲ್ಲರೂ ತೋರಿಸಿದ ಪ್ರೀತಿ, ತಮ್ಮ ಬಗ್ಗೆ ಅವರು ಆಡಿದ ಮಾತುಗಳಿಂದ ಭಾವುಕನಾದೆ ಎಂದು ಮನದಾಳದ ಮಾತನ್ನು ಹಂಚಿಕೊಂಡ ಕಾಗೋಡು, ಶಾಸಕರ ಅಭಿನಂದನೆ ಸ್ವೀಕರಿಸಿ ಉತ್ತರಿಸುವಾಗ ದುಃಖ ಬಂತು. ಶಾಸಕರು ಹೇಳಿದ ಎತ್ತರಕ್ಕೆ ಏರಲು ತಮ್ಮಿಂದ ಸಾಧ್ಯವಿಲ್ಲವೇನೋ ಎನ್ನುವ ಅಂಜಿಕೆ ಕೆಲಹೊತ್ತು ನನ್ನನ್ನು ಕಾಡಿತು ಎಂದು ಹೇಳಿದರು.
 ಚರ್ಚೆಯ ಸಂದರ್ಭದಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರಿಗೆ ಸಮಾನ ಅವಕಾಶ ನೀಡುವುದಾಗಿ ಹೇಳಿದ ಅವರು, ಕೆಲವು ಸಂದರ್ಭದಲ್ಲಿ ಹೆಚ್ಚು ಮಾತನಾಡುವವರಿಗೆ, ವಿಷಯ ಮಂಡನೆ ಮಾಡುವವರಿಗೆ ಅವರು ವಿಪಕ್ಷ ಸದಸ್ಯರಾದರೂ ಹೆಚ್ಚು ಸಮಯ ಕೊಡಲೇಬೇಕಾಗುತ್ತದೆ. ಶಿಸ್ತಿನಿಂದ, ನಿಯಮಾವಳಿ ಪ್ರಕಾರ ನಡೆದುಕೊಳ್ಳದಿದ್ದರೆ ಆಡಳಿತ ಹಾಗೂ ವಿಪಕ್ಷ ಸದಸ್ಯರೆನ್ನದೆ ಬಿಗಿ ನಿಲುವು ತಳೆಯುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
 ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ನಾಗರಿಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.