ಶಿವಮೊಗ್ಗ

ರಾಮಮಂದಿರ ನಿರ್ಮಾಣಕ್ಕೆ ಸಂಸದರು ಒತ್ತಾಯಿಸಲಿ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಜೂ.9
ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕಾಗಿ ಲೋಕಸಭೆಯಲ್ಲಿ ಎಲ್ಲಾ ಸಂಸದರೂ ಒಗ್ಗೂಡಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗ್ಡೆ ಒತ್ತಾಯಿಸಿದ್ದಾರೆ.
ಇಲ್ಲಿನ ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಹಮ್ಮಿಕೊಂಡ ಶ್ರೀರಾಮ ನಾಮ ಜಪದ ಪೂಜೆ ಹಾಗೂ ಧರ್ಮ ಜಾಗರಣ ಸಮಾರಂಭದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿಯಾಗಿರುವುದು ಮುಸ್ಲಿಮರಲ್ಲ. ಬದಲಿಗೆ ಈ ದೇಶದ ಸಂಸತ್. ಬಾಬರಿ ಮಸೀದಿ ಧ್ವಂಸದ ನಂತರ ರಾಮಮಂದಿರದ 1200 ಚದರಡಿ ಜಾಗ ಬಿಟ್ಟು ಉಳಿದ ಸುಮಾರು 70 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರ ವಿಶೇಷ ಕಾನೂನು ಮೂಲಕ ತನ್ನ ವಶಕ್ಕೆ ತೆಗೆದುಕೊಂಡಿದೆ.
ಹೀಗಾಗಿ ಮಂದಿರದ ಜಾಗ ಹಿಂದೂಗಳಿಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಅಲ್ಲಿ ಮಂದಿರ ನಿರ್ಮಿಸಲು ಆಗುತ್ತಿಲ್ಲ. ಕೇಂದ್ರ ಸರ್ಕಾರ ಇನ್ನಾದರೂ ಈ ದೇಶದ ಕೋಟ್ಯಂತರ ಹಿಂದೂಗಳ ಭಾವನೆ ಅರ್ಥ ಮಾಡಿಕೊಂಡು ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಹಿಂದೂಗಳ ಕಡಗಣನೆ: ದೇಶದಲ್ಲಿ ಜಾತ್ಯತೀತತೆ ಹೆಸರಿನಲ್ಲಿ ಹಿಂದೂಗಳ ಕಡೆಗಣನೆ ನಡೆಯುತ್ತಿದೆ ಎಂದ ಅವರು, ಸಾವಿರಾರು ವರ್ಷದ ಪರಂಪರೆ ಹೊಂದಿರುವ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಭಗವದ್ಗೀತೆ, ರಾಮಾಯಣ, ಮಹಾಭಾರತದಂತಹ ಪವಿತ್ರ ಗ್ರಂಥಗಳ ಭಾವನೆಯನ್ನು ಕೇಸರಿಕರಣ ಎಂದು ಹೇಳಿ ನಮ್ಮ ದೇಶದವರೇ ವಿರೋಧಿಸುತ್ತಾರೆ ಎಂದು ವಿಷಾದಿಸಿದರು.
ಹಿಂದುತ್ವವೇ ದೇಶದ ಶಕ್ತಿ: ಒಂದು ಕಾಲಕ್ಕೆ ಅವಿಭಕ್ತ ಕುಟುಂಬದ ಪರಿಕಲ್ಪನೆ ಹಾಗೂ ಹಿಂದುತ್ವವೇ ಈ ದೇಶದ ಶಕ್ತಿಯಾಗಿತ್ತು. ಇದನ್ನು ಮನಗಂಡ ವಿದೇಶಿಗರು ಈ ಶಕ್ತಿಯನ್ನು ಶಿಥಿಲಗೊಳಿಸಿದರು. ಇದರಿಂದಾಗಿ ಧಾರ್ಮಿಕತೆ ಅಧಃ ಪತನ ಕಾಣುತ್ತಿದ್ದು ನಮ್ಮ ಧಾರ್ಮಿಕ ಹಾಗೂ ಸಂಸ್ಕೃತಿಯ ಪರಂಪರೆ ಕೊನೆಗೊಳ್ಳುವ ಅಪಾಯದಲ್ಲಿದೆ ಎಂದರು.
ತಂದೆ, ತಾಯಿಗಳು ದೇವರೆಂಬ ಪೂಜ್ಯ ಭಾವನೆ ಕಾಣುವ ನಮ್ಮ ದೇಶದಲ್ಲಿ ಅನಾಥಾಶ್ರಮ, ವೃದ್ಧಾಶ್ರಮಗಳು ತಲೆ ಎತ್ತಿದ್ದು ಕುಟುಂಬ ವ್ಯವಸ್ಥೆ ಒಡೆದು ಛಿದ್ರವಾಗಿದೆ. ಇಂತಹ ಸಂದರ್ಭದಲ್ಲಿ ಪರಿಪೂರ್ಣ ವ್ಯಕ್ತಿತ್ವ ವಿಕಸನದ ನಿದರ್ಶನವಾಗಿರುವ ಶ್ರೀರಾಮನ ಅಭಿಯಾನ ಮುನ್ನಡೆಸಲಾಗುವುದು ಎಂದು ಹೇಳಿದರು.
ಮತಾಂತರ, ಗೋಹತ್ಯೆ ಸವಾಲು: ಶ್ರೀ ರಾಮತಾರಕ ಜಪಾನುಷ್ಠಾನವು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು ಹಾಗೂ ಇಡೀ ದೇಶದಲ್ಲಿ ಶಾಂತಿ, ಸಾಮರಸ್ಯ  ಆಗಬೇಕೆಂಬ ದೃಷ್ಟಿಯಿಂದ ನೆರವೇರಿತು ಎಂದ ಅವರು, ಹಿಂದೂ ಸಮಾಜಕ್ಕೆ ಮತಾಂತರ, ಗೋಹತ್ಯೆ ಇನ್ನಿತರ ಸವಾಲುಗಳು ಎದುರಾಗುತ್ತಿದ್ದು ಅವುಗಳನ್ನು ಮೆಟ್ಟಿನಿಲ್ಲುವ ಉದ್ದೇಶದಿಂದ ಇಡೀ ಸಮಾಜ ಒಂದು ಶಕ್ತಿಯಾಗಿ ರೂಪುಗೊಳ್ಳಬೇಕಾಗಿದೆ. ಹೀಗಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಲಕ್ಷಾಂತರ ಯುವಕರು ಹಾಗೂ ಕ್ರಾಂತಿಕಾರರು ಬ್ರಿಟೀಷರ ಗುಂಡಿಗೆ ಎದೆಯೊಡ್ಡಿ ಪ್ರತಿಭಟನೆ ನಡೆಸಿದ್ದರ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದೆ. ಅದೇ ರೀತಿ ರಾಮ ಜನ್ಮ ಭೂಮಿಗಾಗಿ ಅಪಾರ ಸಂಖ್ಯೆಯ ಹಿಂದೂಗಳು ಜೀವ ತ್ಯಾಗ ಮಾಡಿದ್ದಾರೆ. ಹಿಂದೂಗಳ ಭಾವನೆಯನ್ನು ಬಡಿದೆಬ್ಬಿಸುವ ಕೆಲಸವನ್ನು ಈ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ ಎಂದು ಹೇಳಿದರು.
ಇಡೀ ದೇಶದಾದ್ಯಂತ ಕೋಟಿ ಕೋಟಿ ಜನರು ಜಪಾನುಷ್ಠಾನದಲ್ಲಿ ಭಾಗವಹಿಸಿದ್ದಾರೆ. ಪ್ರಯಾಗದ ಕುಂಭ ಮೇಳದಲ್ಲಿ ಸಾಧುಸಂತರ ಕೈಗೊಂಡ ನಿರ್ಣಯದಂತೆ ಇಡೀ ದೇಶದ ಎಲ್ಲಾ ಹಿರಿಯರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದೆ. ಲಕ್ಷಾಂತರ ಜನರು ಕೆಲಸ ಮಾಡಿದ್ದಾರೆ. ಕೋಟಿ ಕೋಟಿ ಜನರು ಭಾಗವಹಿಸಿದ್ದರು. ಹೀಗಾಗಿ ಕೋಟಿ ಕೋಟಿ ಜನಗಳ ಭಾವನೆಯನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕೆಂದರು.
ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ಉಪಾಧ್ಯಕ್ಷ ಹಾ.ರಾಮಪ್ಪ, ಸಂಘಟನೆಯ ಶಿವಮೊಗ್ಗ ಜಿಲ್ಲಾ ಗೌರವಾಧ್ಯಕ್ಷ ಶಿವಸ್ವಾಮಿ, ಶಿವಮೊಗ್ಗ ನಗರ ಅಧ್ಯಕ್ಷ ಶ್ಯಾಂರಾವ್, ನಟರಾಜ್, ನರಸಿಂಹಮೂರ್ತಿ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ವೇ.ಬ್ರ.ಅ.ಪ. ರಾಮಭಟ್ಟರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ, ಜಪಯಜ್ಞೆ ನಡೆಯಿತು. ವಿಹಿಂಪ ಕರೆಯಂತೆ ನಗರದ ಮೂರು ಸಾವಿರ ಮನೆಗಳಲ್ಲಿ ಜಪಾನುಷ್ಠಾನ ನಡೆದಿದ್ದು, ಭಾನುವಾರ ಕೊನೆಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.