ಬಲವಂತದಿಂದ ಒಕ್ಕಲೆಬ್ಬಿಸುವುದು ಬೇಡ
ಕಪ್ರ ವಾರ್ತೆ, ಶಿವಮೊಗ್ಗ, ಜೂ. 15
ಜಂಟಿ ಸರ್ವೆ ಆಗದೇ ಭೂಮಿ ಕಂದಾಯ ಇಲಾಖೆಗೆ ಸೇರಿದ್ದೋ, ಅರಣ್ಯವೋ ಎಂದು ಗೊತ್ತಾಗುವುದಿಲ್ಲ. ಈ ಬಗ್ಗೆ ಸರ್ಕಾರ ಸದ್ಯವೇ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಆದ್ದರಿಂದ ಸಾಗುವಳಿದಾರರನ್ನು ಬಲವಂತದಿಂದ ಒಕ್ಕಲೆಬ್ಬಿಸಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಸೂಚಿಸಿದರು.
ನಗರದಲ್ಲಿ ಶನಿವಾರ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ, ಸುಪ್ರೀಂಕೋರ್ಟ್ ಕೊಟ್ಟ ಆದೇಶ ತಪ್ಪಲ್ಲ. ಆದರೆ ಕೋರ್ಟ್ಗೆ ಸರಿಯಾದ ಮಾಹಿತಿ ಒದಗಿಸಿಲ್ಲ. ಒಂದೆರಡು ತಿಂಗಳು ತಾಳ್ಮೆ ಇರಲಿ. ಸರ್ಕಾರ ಈ ದಿಕ್ಕಿನಲ್ಲಿ ಚಿಂತನೆ ನಡೆಸಿದೆ ಎಂದರು.
ಪ್ರತಿಷ್ಠೆಯ ವಿಷಯವಲ್ಲ: ಇದನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಳ್ಳದೆ ಮಾನವೀಯ ದೃಷ್ಟಿಯಿಂದ ಚಿಂತಿಸಿ. ನಿಮ್ಮನ್ನೇನು ಕಷ್ಟಕ್ಕೆ ಸಿಕ್ಕಿಸುವುದಿಲ್ಲ. ಸರ್ಕಾರದ ಪರಿಷ್ಕೃತ ಆದೇಶ ಬರುವವರೆಗೂ ಒಕ್ಕಲೆಬ್ಬಿಸಬೇಡಿ ಎಂದು ಸೂಚಿಸಿದರು.
ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ದನಿಗೂಡಿಸಿ, ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ಇತ್ಯರ್ಥ ಆಗುವವರೆಗೂ ಒಕ್ಕಲೆಬ್ಬಿಸಬಾರದು ಎಂದು ಕಾನೂನು ಇದೆ. ಅದನ್ನು ಮೀರಿದರೆ ಶಿಕ್ಷೆಗೆ ಗುರಿಯಾಗಬಹುದು. ಇದು ನಿಮಗೆ ಗೊತ್ತಿಲ್ಲವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಾನೂನು ಮೇಷ್ಟ್ರು: ಒತ್ತುವರಿ ತೆರವು ವಿಷಯದಲ್ಲಿ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರು ಕಾನೂನು ಅಂಶಗಳಗಳ ಪಾಠವನ್ನೇ ಮಾಡಿದರು. ಅರಣ್ಯಾಧಿಕಾರಿಗಳನ್ನು ಉದ್ದೇಶಿಸಿ ಅವರು ನೀವು ಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸುವಾಗ ಅಲ್ಲಿರುವ ಸಾಗುವಳಿ ಭೂಮಿ, ಮನೆ, ದೇವಸ್ಥಾನ, ಶಾಲೆ, ಕಚೇರಿ ಇತ್ಯಾದಿ ಇರುವ ಬಗ್ಗೆ ಮಾಹಿತಿ ನೀಡಿದ್ದೀರಾ ಹಣಗೆರೆ ಕಟ್ಟೆ ಅರಣ್ಯವೆಂದು ಹೇಳುತ್ತೀರಿ. ಅಲ್ಲಿರುವ ದೇವಸ್ಥಾನದ ಬಗ್ಗೆ ಹೇಳಿದ್ದೀರಾ ದಬ್ಬಣಗದ್ದೆ ಬಗ್ಗೆ ಹೇಳುವಾಗ ಅಲ್ಲಿ ಪೋಸ್ಟ್ ಆಫೀಸ್ ಇದೆ ಎಂದು ಸೂಚಿಸಿದ್ದೀರಾ ನಾನು ಎಲ್ಲಾ ದಾಖಲೆಗಳನ್ನು ನೋಡಿದ್ದೇನೆ. ನೀವು ಆಧಾರವಾಗಿ ಇಟ್ಟುಕೊಂಡಿರುವುದು ನೀವೇ ಮಾಡಿಕೊಂಡ ಭೂಪಟ ಹಾಗೂ ಪಾಣಿ ಮಾತ್ರ. ಅರಣ್ಯ ಭೂಮಿ ಎಂದು ಹೇಳುವ ಒಂದೇ ಒಂದು ಟಿಪ್ಪಣಿ ಇದ್ದರೆ ತೋರಿಸಿ ಎಂದು ಸವಾಲೆಸೆದರು.
ಅರಣ್ಯ ಹಾಗೂ ಕಂದಾಯ ಇಲಾಖೆ ಸೇರಿ ಯಾವ ಭೂಮಿ ಎಂದು ನಿರ್ದಿಷ್ಟವಾಗಿ ಗುರುತಿಸಿ ನಂತರ ಪ್ರಮಾಣಪತ್ರ ನೀಡಬೇಕಿತ್ತು. ನಮ್ಮಲ್ಲೇ ಲೋಪ ಇಟ್ಟುಕೊಂಡು ಜನರಿಗೆ ತೊಂದರೆ ಕೊಡುವುದು ಬೇಡ ಎಂದರು. ಅಂತಿಮವಾಗಿ ಒತ್ತುವರಿಯನ್ನು ಬಲವಂತವಾಗಿ ತೆರವುಗೊಗೊಳಿಸದಂತೆ ಸೂಚನೆ ನೀಡುವ ಮೂಲಕ ಚರ್ಚೆಗೆ ತೆರೆ ಬಿದ್ದಿತು.
ಒತ್ತುವರಿ: ಶಾಸಕರಾದ ಶಾರದಾ ಪೂರ್ಯಾನಾಯ್ಕ್ ಚಿತ್ರಶೆಟ್ಟಿಹಳ್ಳಿ ವಿಷಯ ಪ್ರಸ್ತಾಪಿಸಿದರೆ, ಶಾಸಕ ಅಪ್ಪಾಜಿಗೌಡ ಬದನೆಹಾಳ್ನಲ್ಲಿ ಒತ್ತುವರಿ ತೆರವು ಮಾಡಿದ್ದಲ್ಲದೇ ತಮ್ಮ ವಿರುದ್ಧವೇ ಪ್ರಕರಣ ದಾಖಲಿಸಿರುವುದನ್ನು ಪ್ರಸ್ತಾಪಿಸಿದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್ ನಗರದ ಕೋಟೆ ಪ್ರದೇಶದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲು ಹೊರಟರೆ ಅದಕ್ಕೆ ಅರಣ್ಯ ಇಲಾಖೆ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿರುವುದನ್ನು ಪ್ರಸ್ತಾಪಿಸಿದರು. ಶಾಸಕ ಮಧು ಬಂಗಾರಪ್ಪ, ವಿಧಾನಪರಿಷತ್ ಸದಸ್ಯ ಸಿದ್ದರಾಮಣ್ಣ, ಬಾನುಪ್ರಕಾಶ್ ಚರ್ಚೆಯಲ್ಲಿ ಭಾಗವಹಿಸಿ ಪೂರಕ ಮಾಹಿತಿ ನೀಡಿದರು.
ಪಾಣಿಯಲ್ಲಿ ಬೆಳೆ ಇಲ್ಲ: ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಕಂಪ್ಯೂಟರೀಕೃತ ಪಾಣಿಯಲ್ಲಿ ಬೆಳೆಯನ್ನು ಏಕೆ ನಮೂದಿಸುವುದಿಲ್ಲ ಬೆಳೆದಿದ್ದು ಒಂದು ಬೆಳೆಯಾದರೆ ಪಾಣಿಯಲ್ಲಿ ಇನ್ನೊಂದು ಬೆಳೆ ಹೇಗೆ ನಮೂದಾಗುತ್ತದೆ ಎಂಬ ಪ್ರಶ್ನೆ ಎತ್ತುವ ಮೂಲಕ ಗಂಭೀರ ಚರ್ಚೆಗೆ ನಾಂದಿ ಹಾಡಿದರು.
ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಉತ್ತರಿಸುವ ಪ್ರಯತ್ನ ನಡೆಸಿ, ಉಪವಿಭಾಗಾಧಿಕಾರಿ ಉದಯಕುಮಾರ್ ಅವರಿಗೆ ಸೂಚಿಸಿದರು. ಎಲ್ಲಾ ಪಾಣಿಗಳಲ್ಲೂ ಹೀಗಾಗುವುದಿಲ್ಲ ಎಂದು ಅವರು ಸಮಜಾಯಿಷಿ ನೀಡಿದರು.
ಪಾಣಿ ಇಲ್ಲದೇ ರೈತರ ಕಷ್ಟಗಳು ಹೆಚ್ಚಾಗುತ್ತಿವೆ. ಕಂಪ್ಯೂಟರ್ ನೀಡುವ ಪಾಣಿ ಸರಿ ಇಲ್ಲ ಎಂದರೆ ಕೈಯಲ್ಲಿ ಬರೆದು ನೀಡಿ. ಕಾನೂನು ಹೇಳುವಂತೆ ಕೆಲಸ ಮಾಡಿ ಎಂದು ತಾಕೀತು ಮಾಡಿದರು. ಆಗ ಕಿಮ್ಮನೆ ಅವರು, ನನ್ನ ಪಾಣಿಯಲ್ಲೂ ಹೀಗೆ ಆಗಿದೆ. ನಾನು ಬೆಳೆದಿದ್ದು ಅಡಕೆ ಆದರೆ ಬಂದಿರುವುದು ಎಳ್ಳು ಅಂತ ಎಂದರು. ಭಾನುಪ್ರಕಾಶ್, ಎಳ್ಳುನೀರು ಬಿಡಿ ಅಂತ ಇದರರ್ಥ ಎಂದು ಕಿಚಾಯಿಸಿದರು.
ಮಗುಚಿದೆ: ಕಾಗೋಡು ತಿಮ್ಮಪ್ಪ, ಭೂಮಿ ಯೋಜನೆ ಜಾರಿ ಬಂದ ಮೇಲೆ ಹೀಗಾಗಿದೆ. ಆದ್ದರಿಂದ ಭೂಮಿ ಮಗುಚಿಕೊಂಡಿದೆ ಅಂತ ರಿಪೋರ್ಟ್ ಮಾಡಿ ಎಂದರು. ಇದಕ್ಕೆ ಉದಯಕುಮಾರ್, ಕಂಪ್ಯೂಟರೀಕೃತ ಪಹಣಿಯಲ್ಲಿ ತಪ್ಪಾಗಿದ್ದರೆ ಕೈಬರಹದ ಮೂಲಕ ತಿದ್ದುಪಡಿ ಮಾಡುತ್ತೇವೆ ಎಂದು ಹೇಳಿದ ನಂತರ ಚರ್ಚೆ ಕೊನೆಯಾಯಿತು. ಸಂಸದ ಬಿ.ವೈ. ರಾಘವೇಂದ್ರ, ಆಯನೂರು ಮಂಜುನಾಥ್, ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರಕುಮಾರ್, ಜಿಪಂ ಸಿಇಒ ಸಸಿಕಾಂತ್ ಸೆಂಥಿಲ್ ಇದ್ದರು.
ಶನಿವಾರದ ಸಭೆಯ ಹೈಲೈಟ್ಸ್...
- ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸುವ ಮೂಲಕ ಹೊಸ ಆಯಾಮ ತರಲಾಗುವುದು. ಶಿಕ್ಷಣ ಇಲಾಖೆಗೆ ಮೀಸಲಿಟ್ಟ ಬಹುಪಾಲು ಅನುದಾನ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ ಹಾಗೂ ಸಮವಸ್ತ್ರಕ್ಕೆ ವೆಚ್ಚವಾಗುತ್ತಿದ್ದು, ಮೂಲಸೌಲಭ್ಯಕ್ಕೆ ಸಾಕಾಗುತ್ತಿಲ್ಲ. ಆದರೆ ಇನ್ನುಮುಂದೆ ಶಾಲಾ ಮೂಲ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಈ ಮೂಲಕ ಶಾಲಾ ವ್ಯವಸ್ಥೆಗೆ ಹೊಸ ಆಯಾಮ ನೀಡಲು ಪ್ರಯತ್ನಿಸಲಾಗುವುದು ಎಂದು ಕಿಮ್ಮನೆ ಭರವಸೆ.
- ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಇನ್ನೆರಡು ದಿನಗಳಲ್ಲಿ ಸರ್ಕಾರದ ಆದೇಶ ಹೊರಬೀಳಲಿದೆ. ಆದ್ದರಿಂದ ಈಗ ಪಾಠಪ್ರವಚನಕ್ಕೆ ತೊಂದರೆಯಾಗದಂತೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸಚಿವರ ಸೂಚನೆ.
- ಜಿಲ್ಲೆಯ ವಿವಿಧ ತಾಲೂಕುಗಳ ಆಯಾ ಹವಾಗುಣಕ್ಕೆ ತಕ್ಕಂತೆ ಬೀಜ ಉತ್ಪಾದನೆ ಕೇಂದ್ರಗಳನ್ನು ಸ್ಥಾಪಿಸಬೇಕು. ಇದಕ್ಕಾಗಿ ಯೋಜನೆಯೊಂದನ್ನು ರೂಪಿಸಬೇಕೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸಚಿವರ ಸೂಚನೆ.
- ಕೃಷಿ ವಿಮಾ ಯೋಜನೆಯ ಪ್ರಯೋಜನ ಎಲ್ಲ ರೈತರಿಗೆ ಸಿಗುವಂತೆ ಮಾಡಲು ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ ರೂಪಿಸಿ. ಈ ಬಾರಿ ಕನಿಷ್ಠ 50 ಲಕ್ಷ ರೈತರನ್ನು ಯೋಜನೆ ವ್ಯಾಪ್ತಿಗೆ ತನ್ನಿ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಾಕೀತು.
ಸುದೀರ್ಘ ಸಭೆ
ಜಿಲ್ಲಾ ಉಸ್ತುವಾರಿ ಸಚಿವ ಅಧ್ಯಕ್ಷತೆಯ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲು ಇಷ್ಟು ಸುದೀರ್ಘವಾಗಿ ನಡೆದ ಉದಾಹರಣೆ ಕಡಿಮೆಯೇ. ಶನಿವಾರದ ಸಭೆ ಬೆಳಗ್ಗೆ 11 ಗಂಟೆಗೆ ಆರಂಭವಾಗಿ ಭೋಜನ ವಿರಾಮದ ನಂತರವೂ ಮುಂದುವರಿದು 3.45ರ ವರೆಗೆ ನಡೆಯಿತು. ವಿಷಯಗಳು ಪೂರ್ಣವಾಗದ ಕಾರಣ 15 ದಿನದಲ್ಲಿ ಮತ್ತೊಂದು ಸಭೆ ಕರೆಯುವುದಾಗಿ ಸಚಿವರು ತಿಳಿಸಿದರು.
ಕಂದಾಯ, ಅರಣ್ಯ, ಶಿಕ್ಷಣ, ಆರೋಗ್ಯ ಇಲಾಖೆ ಬಗ್ಗೆ, ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಆರೋಗ್ಯ ಇಲಾಖೆ ಚರ್ಚೆ ಸಂದರ್ಭದಲ್ಲಿ ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆಯ ಬಗ್ಗೆ ಕಾಗೋಡು ತಿಮ್ಮಪ್ಪ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಿಂದಿನ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ 2012ರ ಜುಲೈ 21ರಂದು ತ್ರೈಮಾಸಿಕ ಕೆಡಿಪಿ ಸಭೆ ನಡೆದಿತ್ತು. ಇದಾಗಿ ಸರಿಸುಮಾರು ಒಂದು ವರ್ಷದ ಅಂತರದಲ್ಲಿ ನಡೆದ ಸಭೆ ಇದಾಗಿದೆ.
ಅರಣ್ಯ ಹಕ್ಕು ಸಮಿತಿ ಪುನಾರಚನೆ
ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತಮ್ಮ ಪ್ರೀತಿಪಾತ್ರವಾದ ಅರಣ್ಯ ಹಕ್ಕು ಕಾಯ್ದೆ ವಿಚಾರವನ್ನು ಭೋಜನ ವಿರಾಮದ ನಂತರ ಚರ್ಚೆಗೆ ತೆಗೆದುಕೊಂಡರು.
ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಈಗಾಗಲೇ ಬಹಳ ಅರ್ಜಿಗಳು ವಿಲೇವಾರಿ ಆಗಿದ್ದು, ಅದರಲ್ಲಿ ತಿರಸ್ಕೃತವಾದ ಅರ್ಜಿಗಳ ಸಂಖ್ಯೆಯೇ ಹೆಚ್ಚು ಎಂದು ಮಾಹಿತಿ ನೀಡಿದರು.
ಸರಿಯಲ್ಲ: ಅರ್ಜಿಗಳನ್ನು ತಿರಸ್ಕರಿಸಿರುವುದು ಕಾನೂನು ಪ್ರಕಾರ ಸರಿ ಇಲ್ಲ. ಗ್ರಾಮ ಅರಣ್ಯ ಹಕ್ಕು ಸಮಿತಿಯಲ್ಲಿರುವ ಬಹಳಷ್ಟು ಜನರಿಗೆ ವಿಷಯವೇ ಗೊತ್ತಿಲ್ಲ ಎಂದ ಅವರು ಜಿಲ್ಲಾಧಿಕಾರಿಯವರತ್ತ ತಿರುಗಿ, ಚನ್ನಾಗಿ ಕೆಲಸ ಮಾಡುವ ಸಮಿತಿಗಳನ್ನು ಮಾತ್ರ ಉಳಿಸಿಕೊಳ್ಳಿ. ಉಳಿದೆಲ್ಲಾ ಸಮಿತಿಗಳನ್ನು ಪುನರ್ರಚಿಸಿ ಎಂದು ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಚಿವ ಕಿಮ್ಮನೆ, ಈ ಹಿಂದೆ ರಚಿಸಿದ್ದ ಸಮಿತಿಗಳು ಕಾನೂನು ಬದ್ಧ, ಕ್ರಮಬದ್ಧವಾಗಿಲ್ಲ. ಆದ್ದರಿಂದ ಮತ್ತೆ ಸಮಿತಿಗಳನ್ನು ಪುನರ್ರಚಿಸಲು ನಿರ್ದೇಶನ ನೀಡುವಂತೆ ಸರ್ಕಾರಕ್ಕೆ ಕೋರಿ ನಿರ್ಣಯ ಮಾಡೋಣ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

