ಕಿಮ್ಮನೆ ಆಡಳಿತಕ್ಕೆ ಒಂದು ಮನೆ
ಶಿವಮೊಗ್ಗ: ಅಂತೂ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಆಡಳಿತಕ್ಕೊಂದು ಸೂರು ಸಿಕ್ಕಿದೆ. ಹಲವು ಅಡ್ಡಿಗಳನ್ನು ದಾಟಿ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ಇರುವ ಸಹಕಾರ ಭವನದಲ್ಲಿ ಸದ್ಯವೇ ಸಚಿವರ ಕಚೇರಿ ಆರಂಭವಾಗಲಿದೆ.
ಇದೇ ಕಚೇರಿಯಲ್ಲಿ ಹಿಂದಿನ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕಚೇರಿ ಆರಂಭಿಸಿದ್ದರು. ಕಿಮ್ಮನೆ ಸಹ ಇದೇ ಕಟ್ಟಡವನ್ನು ಆರಿಸಿಕೊಂಡಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿರುವ ಕಿಮ್ಮನೆ ರತ್ನಾಕರ್ ಅವರು ತಮ್ಮ ವಿಶೇಷ ಕರ್ತವ್ಯಾಧಿಕಾರಿ ಪ್ರಾಣೇಶ್ ಅವರನ್ನು ನೇಮಕ ಮಾಡಿಕೊಂಡಿದ್ದಾರೆ. ಇವರು ಶಿವಮೊಗ್ಗ ತಾಪಂ ಕಚೇರಿಯಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿದ್ದರು. ಇವರೂ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಗುರುತಿಸಿಕೊಂಡವರು. ಆಡಳಿತಾತ್ಮಕ ಹಾಗೂ ಕಾನೂನಿನ ವಿಷಯದಲ್ಲಿ ಪರಿಣಿತರೂ ಆಗಿದ್ದಾರೆ. ಜಿಲ್ಲಾ ಉಸ್ತುವಾರಿ ಕಚೇರಿಯ ನಿರ್ವಹಣೆಯ ಜವಾಬ್ದಾರಿಯೂ ಇವರದೇ ಆಗಿದೆ. ಕಚೇರಿ ನಿರ್ವಹಣೆಗೆಂದು 3-4 ಜನ ಸಿಬ್ಬಂದಿಯನ್ನು ಜಿಲ್ಲಾಡಳಿತ ನಿಯೋಜಿಸಲಿದೆ.
ಕಚೇರಿಗೆ ಗುದ್ದಾಟ: ಕಿಮ್ಮನೆ ರತ್ನಾಕರ್ ಅವರು ಸಹಕಾರ ಭವನವೇ ಬೇಕೆಂದು ಕೇಳಿದಾಗ ಅದನ್ನು ನೀಡುವುದಕ್ಕೆ ಸ್ವಲ್ಪ ಅಡ್ಡಿ ಉಂಟಾಗಿತ್ತು. ಹಿಂದಿನ ಸಚಿವ ಕೆ.ಎಸ್. ಈಶ್ವರಪ್ಪ ಅವರು ಚುನಾವಣೆಯ ನಂತರ ಕಚೇರಿ ಖಾಲಿ ಮಾಡಿದಾಗ ಕುವೆಂಪು ರಸ್ತೆಯ ಬಾಡಿಗೆ ಕಟ್ಟಡದಲ್ಲಿದ್ದ ಸಹಕಾರ ಇಲಾಖೆ ಉಪನಿಬಂಧಕರ ಕಚೇರಿ ಇಲ್ಲಿಗೆ ವರ್ಗಾವಣೆಯಾಗಿತ್ತು. ಮತ್ತೆ ಖಾಲಿ ಮಾಡಬೇಕೆಂದಾಗ ಇಲಾಖೆಯ ಅಧಿಕಾರಿಗಳು ಹಿಂದೆಮುಂದೆ ನೋಡಿದರು.
ಆದರೆ ಸಚಿವರು ಕಚೇರಿಯನ್ನು ಆರಂಭಿಸಲು ಯಾವ ಕಟ್ಟಡ ಬೇಕೆನ್ನುತ್ತಾರೋ ಆ ಕಟ್ಟಡವನ್ನು ಒದಗಿಸಿಕೊಡುವುದು ಜಿಲ್ಲಾಡಳಿತದ ಜವಾಬ್ದಾರಿ. ಅಂತಿಮವಾಗಿ ಈ ಕಟ್ಟಡ ತೆರವಾಗುತ್ತಿದೆ. ಸಹಕಾರ ಭವನದ ಕೆಳ ಮಹಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ ಆರಂಭವಾಗಲಿದೆ.
ಹೀಗಿರಲಿದೆ ಕಚೇರಿ: ತಮ್ಮ ಜನಸಂಪರ್ಕ ಕಚೇರಿಯನ್ನು ವಿಶೇಷವಾಗಿ ರೂಪಿಸಬೇಕೆಂಬ ಆಶಯ ಸಚಿವ ಕಿಮ್ಮನೆ ಅವರದ್ದಾಗಿದೆ. ಇಡೀ ರಾಜ್ಯದಲ್ಲಿ ಈ ಕಚೇರಿ ಒಂದು ಮಾದರಿ ಕಚೇರಿಯಾಗಿಸುವ ಗುರಿ ಹೊಂದಿದ್ದಾರೆ.
ಈಗಾಗಲೇ ತಮ್ಮ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತಮ್ಮ ಲೆಟರ್ ಹೆಡ್ನ್ನು ಖಾಲಿ ಕೊಡದಂತೆ ಸೂಚನೆ ನೀಡಿದ್ದಾರೆ. ಯಾವುದೇ ಪತ್ರ ನೀಡುವುದಿದ್ದರೂ ಈ ವಿಷಯವನ್ನು ಕಚೇರಿಯ ಸಿಬ್ಬಂದಿಯೇ ಟೈಪ್ ಮಾಡಿ ಕೊಡುವಂತೆ ನಿರ್ದೇಶಿಸಿದ್ದಾರೆ.
ಇವರೇನಂತಾರೆ....
ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯು ಜಿಲ್ಲೆಯ ಇತರೆ ಎಲ್ಲಾ ಕಚೇರಿಗಳ ಸಂಪರ್ಕ ಸೇತುವೆಯಂತಿರಬೇಕು. ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಬಂದಾಗ ಅವರಿಗೆ ಸ್ಪಂದಿಸಬೇಕು.
ರಮೇಶ್ ಗೌಡ -ಶಿವಮೊಗ್ಗದ ನಿವಾಸಿ.
ಈ ಕಚೇರಿ ಕಾಲಕ್ಕೆ ತಕ್ಕಂತೆ ಜನರ ಸಮಸ್ಯೆಯನ್ನು ಗುರುತಿಸಬೇಕು. ಅದನ್ನು ಬಗೆಹರಿಸಲು ಪ್ರಯತ್ನಿಸಬೇಕು. ಮುಖ್ಯವಾಗಿ ರೈತರ ಬಗರ್ ಹುಕುಂ, ಒತ್ತುವರಿ ತೆರವು, ಸಾಲ ಇತ್ಯಾದಿ ಸಮಸ್ಯೆಗಳ ಬಗ್ಗೆ ತೀವ್ರವಾಗಿ ಗಮನ ಹರಿಸಬೇಕು.
-ರೇವಣಸಿದ್ದಪ್ಪ ರೈತ.
ಇವತ್ತು ಭ್ರಷ್ಟಾಚಾರ ವ್ಯಾಪಕವಾಗಿದೆ. ಕಿಮ್ಮನೆ ರತ್ನಾಕರ್ ಅವರ ಬಗ್ಗೆ ನಮಗೆ ಗೌರವವಿದೆ. ಆದರೆ ಅವರ ಕಚೇರಿ ಹಾಗಿರುವುದಿಲ್ಲ ಎಂಬ ನಿರೀಕ್ಷೆ ನಮ್ಮದು. ನಮ್ಮ ನಿರೀಕ್ಷೆ ಹುಸಿಯಾಗದಿರಲಿ.
-ಅಭಿಷೇಕ್ ವಿದ್ಯಾರ್ಥಿ
-ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

