ಶಿವಮೊಗ್ಗ

ಗುಟ್ಕಾನಿಷೇಧ ಹಿಂಪಡೆಯಲು ಒತ್ತಾಯ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.16
ರಾಜ್ಯದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ಮಾರಾಟ ನಿಷೇಧ ಮಾಡಿರುವುದನ್ನು ಹಿಂಪಡೆಯುವಂತೆ ಒತ್ತಾಯಿಸಿ ಭದ್ರಾವತಿಯ ಅಡಕೆ ಬೆಳೆಗಾರರ ಸಂಘ ಆಗ್ರಹಿಸಿದೆ.
ರಾಜ್ಯದ 17,400 ಹೆಕ್ಟೇರ್ ಪ್ರದೇಶದಲ್ಲಿ 2,31,700 ಟನ್ ಅಡಕೆಯನ್ನು ಉತ್ಪಾದಿಸಲಾಗುತ್ತಿದೆ. ಶಿವಮೊಗ್ಗ, ದಕ್ಷಿಣ ಕನ್ನಡ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಉಡುಪಿ ಜಿಲ್ಲೆಗಳಲ್ಲಿ ಶೇ.94ರಷ್ಟು ಅಡಕೆ ಉತ್ಪಾದನೆಯಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಶೇ.71.4ರಷ್ಟು ಅಡಕೆ ಬೆಳೆ ಹೆಚ್ಚಾಗಿದ್ದು, ಇದನೇ ನಂಬಿಕೊಂಡು ಬದುಕುವ ಲಕ್ಷಾಂತರ ರೈತ ಕುಟುಂಬಗಳು, ಕೃಷಿ ಕಾರ್ಮಿಕರು, ಅಡಕೆ ಮಂಡಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರು, ಗೂಡಂಗಡಿ ಮಾಲೀಕರು ಸರ್ಕಾರದ ಆದೇಶದಿಂದ ಬೀದಿ ಪಾಲಾಗಲಿದ್ದಾರೆ, ಹೀಗಾಗಿ ಸರ್ಕಾರ ಮುಂದಾಲೋಚನೆ ಮಾಡಿ ಕ್ರಮಕೈಗೊಳ್ಳಲಿ ಎಂದು ಸಂಘಟನೆ ಒತ್ತಾಯಿಸಿದೆ.
ಶೇ.30 ತೆರಿಗೆ: ಶಿವಮೊಗ್ಗ ಜಿಲ್ಲೆಯಲ್ಲಿ ಅಡಕೆ ಬೆಳೆಯೊಂದರಲ್ಲಿಯೇ ವಹಿವಾಟು ವಾರ್ಷಿಕವಾಗಿ 800 ಕೋಟಿಗೂ ಅಧಿಕವಾಗಿದೆ. ಗುಟ್ಕಾ ವಹಿವಾಟಿಗೆ ಸಂಬಂಧಿಸಿದಂತೆ ಶೇ.30ರಷ್ಟು ವ್ಯಾಟ್ ತೆರಿಗೆಯನ್ನು ರಾಜ್ಯ ಸರ್ಕಾರಕ್ಕೆ ಪಾವತಿಸಲಾಗುತ್ತಿದೆ ಎಂದು ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.60ರಷ್ಟು ಅಡಕೆ ಬೆಳೆಗಾರರಿದ್ದು, ದೇಶದ ನಾನಾ ರಾಜ್ಯಗಳಿಗೆ ಶೇ.65ರಷ್ಟು ಶ್ರೇಷ್ಠಮಟ್ಟದ ಅಡಕೆ ರಫ್ತಾಗುತ್ತಿದೆ. ಅಡಕೆ ಆ ಭಾಗದ ಜನರ ಜೀವನಾಡಿಯಾಗಿರುವುದನ್ನು ರಾಜ್ಯ ಸರ್ಕಾರವು ಗಮನಿಸಲಿ, ಲಕ್ಷಾಂತರ ಕುಟುಂಬಗಳು ಬೀದಿಗೆ ಬೀಳುವ ಬಗ್ಗೆಯೂ ಸರ್ಕಾರ ಯೋಚಿಸಬೇಕಿತ್ತು. ಇದಾವುದನೇ ಮಾಡದೇ ಏಕಾಏಕಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಸಂಘ ತಿಳಿಸಿದೆ.
ಪರ್ಯಾಯ ಕಾಲವಕಾಶ ಕಲ್ಪಿಸಿ: ಕೆಲವು ಸಿಗರೇಟು, ತಂಬಾಕು ಕಂಪನಿಗಳ ಮಾಲೀಕರು ತೆರೆಮರೆಯಲ್ಲಿ ಲಾಬಿಗಳನ್ನು ಮಾಡುತ್ತಿರುವುದು ನಿಚ್ಚಳವಾಗಿ ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗುಟ್ಕಾ ನಿಷೇಧದ ಸಾಧಕ- ಬಾಧಕಗಳ ಬಗ್ಗೆ ವರ್ತಕರನ್ನು ಮಾತುಕತೆಗೆ ಕರೆಯಬೇಕು, ಅಡಕೆ ಬೆಳೆಗಾರರ ಪರ್ಯಾಯ ಬೆಳೆಗೆ ಕಾಲಾವಕಾಶ ನೀಡಬೇಕು. ಗೋರಕ್‌ಸಿಂಗ್ ವರದಿಯನ್ನು ಯಥಾವತ್ತಾಗಿ ರಾಜ್ಯಾದ್ಯಂತ ಜಾರಿಗೆ ತರಬೇಕು ಎಂದು ಸಂಘದ ಪರವಾಗಿ ಜಿ.ಎಂ. ಬಸವರಾಜ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.