ಶಿವಮೊಗ್ಗ

ಮಹಿಳೆಯರ ಮೇಲಿನ ದೌರ್ಜನ್ಯ ಸಹಿಸುವುದಿಲ್ಲ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.26
ಮಣಿಪಾಲ್‌ನಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಘಟನೆಯಿಂದ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚೆತ್ತಿದ್ದು, ಜಿಲ್ಲೆಯಲ್ಲಿ ಇಂತಹ ಅಹಿತಕರ ಘಟನೆ ನಡೆಯದಂತೆ ತಡೆಯಲು ವಿಶೇಷ ಕಾರ್ಯತಂತ್ರ ರೂಪಿಸಿದೆ.
ಶಾಲಾ-ಕಾಲೇಜು ಆರಂಭ ಮತ್ತು ಮುಕ್ತಾಯ ವೇಳೆ ವಿಶೇಷ ಗಸ್ತು, ಕಿಡಿಗೇಡಿಗಳ ಮೇಲೆ ಹದ್ದಿನಕಣ್ಣು, ಮಹಿಳೆಯರ ರಕ್ಷಣೆಗೆ ವಿಶೇಷ ಗಮನ ಇತ್ಯಾದಿ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ.
ಮಣಿಪಾಲ್ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಆತ್ಯಾಚಾರ ಘಟನೆ ಹಿನ್ನೆಲೆಯಲ್ಲಿ ಡಿಎಆರ್‌ನಲ್ಲಿ ಆಯೋಜಿಸಲಾಗಿದ್ದ ಜಿಲ್ಲೆಯಲ್ಲಿರುವ ವಿಶ್ವವಿದ್ಯಾನಿಲಯ ಹಾಗೂ ಎಲ್ಲಾ ಕಾಲೇಜು ಮತ್ತು ವಸತಿ ನಿಲಯಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಈ ವಿಷಯಗಳನ್ನು ಹಾಗೂ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯನ್ನು ಪ್ರಸ್ತಾಪಿಸಿದರು.
ದೌರ್ಜನ್ಯ ಸಹಿಸುವುದಿಲ್ಲ: ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯಗಳು ನಡೆದರೆ ನಾವು ಸಹಿಸುವುದಿಲ್ಲ, ಅಂತಹ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗುಡುಗಿದರು.
ಜಿಲ್ಲೆಯಲ್ಲಿನ ಕೆಲ ಕಿಡಿಗೇಡಿಗಳಿಂದ ದೌರ್ಜನ್ಯ ಮತ್ತಿತರ ಪ್ರಕರಣಗಳ ಬಗ್ಗೆ ದೂರುಗಳು ಬರುತ್ತಿದ್ದವು. ಆದರೆ, ಚುನಾವಣೆ ಸೇರಿದಂತೆ ಮತ್ತಿತರ ಕಾರಣಗಳಿಂದ ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಎಲ್ಲಾ ಪ್ರಕರಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.
ಯೋಜನೆ ಸಿದ್ಧ: ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆ ಶಾಲಾ-ಕಾಲೇಜು ಹಾಗೂ ಹಾಸ್ಟೆಲ್‌ಗಳಿಗೆ ಭದ್ರತೆ ಹೆಚ್ಚಿಸುವುದೂ ಸೇರಿದಂತೆ ವಿವಿಧ ಕ್ರಮಕ್ಕೆ ಮುಂದಾಗಿದೆ. ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿನಿ ನಿಲಯಗಳು ಹಾಗೂ ಇತರೆಡೆ ಮಹಿಳೆಯರ ರಕ್ಷಣೆಗೆ ಸೂಕ್ತ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ಕಿಡಿಗೇಡಿಗಳನ್ನು ಹೇಗೆ ನಿಯಂತ್ರಿಸಬೇಕು ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಾರಾಂತ್ಯದಲ್ಲಿ ಯೋಜನೆ ಸಿದ್ಧಗೊಳ್ಳಲಿದೆ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಗಳು ಹಾಗೂ ಹಾಸ್ಟೆಲ್‌ಗಳಿಗೆ ಆಯಾ ಇಲಾಖೆ ಹಾಗೂ ಸಂಸ್ಥೆಗಳಿಂದಲೇ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಅಪರಾಧಿಗಳನ್ನು ಪತ್ತೆಹಚ್ಚಲು ಸುಲಭವಾಗುತ್ತದೆ.
ಅಲ್ಲದೆ, ವಿದ್ಯಾರ್ಥಿನಿ ನಿಲಯಗಳಲ್ಲಿ, ಪಿಜಿಗಳಲ್ಲಿ ಇರುವ ವಿದ್ಯಾರ್ಥಿನಿಯರ ಸಂಖ್ಯೆ ವಿವರಗಳನ್ನು ದಾಖಲಿಸಬೇಕು. ವಿಶ್ವವಿದ್ಯಾಲಯ, ಕಾಲೇಜು, ಮಹಿಳಾ ಕಾಲೇಜು, ವಿದ್ಯಾರ್ಥಿನಿಲಯ ಮತ್ತು ಪಿಜಿಗಳಲ್ಲಿ ಇರುವ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗಳ ವಿವರವನ್ನು ದಾಖಲಿಸಿರಬೇಕು. ಅಲ್ಲದೆ, ಈಗಿರುವ ಭದ್ರತಾ ಸಿಬ್ಬಂದಿಗೆ ಹೆಚ್ಚಿನ ತರಬೇತಿ ಕೊಡುವ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾಹಿತಿ ಸಲ್ಲಿಸಿ: ವಿದ್ಯಾರ್ಥಿನಿಲಯಗಳು, ಪಿಜಿಗಳಲ್ಲಿ ಹೊರಹೋಗುವ ಆಥವಾ ಬರುವ ಬಗ್ಗೆ ಹಾಗೂ ಭೇಟಿ ಮಾಡಲು ಬರುವವರ ಬಗ್ಗೆ ನಿಗದಿತ ಸಮಯ ಹಾಗೂ ವಿವರಗಳನ್ನು ದಾಖಲಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಕಾಲೇಜು ಕ್ಯಾಂಪಸ್‌ನಲ್ಲಿ ನಿಗಾವಹಿಸಲು ಉಪನ್ಯಾಸಕರು ಮತ್ತು ಆಡಳಿತ ವರ್ಗಗಳ ತಂಡಗಳನ್ನು ರಚಿಸಿದ್ದಲ್ಲಿ ವಿವರಗಳನ್ನು ಪೊಲೀಸ್ ಇಲಾಖೆಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ರಾಮೇಗೌಡ, ಶೈಕ್ಷಣಿಕವಾಗಿ ಇಂದು ಹೆಣ್ಣು ಮಕ್ಕಳು ಹೆಚ್ಚಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡುವು ನಮ್ಮ ಕರ್ತವ್ಯ ಎಂದ ಅವರು, ನಾಗರಿಕರಾಗಿ ತಮ್ಮ ಜವಾಬ್ದಾರಿಯ ಬಗ್ಗೆ ಪ್ರತಿಯೊಬ್ಬರೂ ಸಾಬೀತುಪಡಿಸಬೇಕಿದೆ. ಶಿಕ್ಷಣ-ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಸಂಸ್ಕಾರದ ಬಗ್ಗೆ, ನೀತಿ ಪಾಠಗಳನ್ನು ಹೇಳಿಕೊಡಬೇಕು.
ಪೋಷಕರ ಪಾತ್ರ ಮುಖ್ಯ: ಅಲ್ಲದೆ ನುರಿತ ತಜ್ಞರಿಂದ ಕಾಲ ಕಾಲಕ್ಕೆ ಉಪನ್ಯಾಸಗಳನ್ನು ಮಾಡಿಸುವ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಹೇಳಿಕೊಡಬೇಕು, ಈ ವಿಷಯದಲ್ಲಿ ಪೋಷಕರ ಪಾತ್ರವೂ ಮುಖ್ಯವಾಗಿದೆ ಎಂದರು. ಶಿಕ್ಷಣ ಸಂಸ್ಥೆಗಳು ಕಾಲಕ್ಕೆ ತಕ್ಕಂತೆ ರಕ್ಷಣಾ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಅನಿವಾರ್ಯ. ಇಂತಹ ಕಾರ್ಯಕ್ರಮಗಳನ್ನು ಕಾಲೇಜು- ವಿಶ್ವವಿದ್ಯಾನಿಲಯಗಳಲ್ಲಿ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಎಸ್‌ಪಿ ದಯಾಳು, ಡಿವೈಎಸ್‌ಪಿ ರಾಮಾನಾಯ್ಕ ಮತ್ತಿತರರು ಇದ್ದರು.

ಜಿಲ್ಲಾ ವರಿಷ್ಠಾಧಿಕಾರಿ ಸೂಚನೆಗಳು
  ಕೆಲ ಕಿಡಿಗೇಡಿಗಳಿಂದ ದೌರ್ಜನ್ಯ ಮತ್ತಿತರ ಪ್ರಕರಣಗಳ ಬಗ್ಗೆ ದೂರುಗಳು ಬರುತ್ತಿದ್ದವು. ಎಲ್ಲಾ ಪ್ರಕರಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು
  ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿನಿ ನಿಲಯಗಳು ಹಾಗೂ ಇತರೆಡೆ ಮಹಿಳೆಯರ ರಕ್ಷಣೆಗೆ ಸೂಕ್ತ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು
  ವಿದ್ಯಾರ್ಥಿನಿ ನಿಲಯ, ಪಿಜಿಗಳಲ್ಲಿ ವಿದ್ಯಾರ್ಥಿನಿಯರ ವಿವರ ದಾಖಲಿಸಬೇಕು
  ವಿಶ್ವ ವಿದ್ಯಾನಿಲಯ, ಕಾಲೇಜು, ಮಹಿಳಾ ಕಾಲೇಜು, ವಿದ್ಯಾರ್ಥಿನಿಲಯ ಮತ್ತು ಪಿಜಿಗಳಲ್ಲಿ ಇರುವ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗಳ ವಿವರ ದಾಖಲಿಸಿರಬೇಕು
   ವಿದ್ಯಾರ್ಥಿನಿಲಯಗಳು, ಪಿಜಿಗಳಲ್ಲಿ ಹೊರಹೋಗುವ ಆಥವಾ ಒಳ ಬರುವ ಬಗ್ಗೆ ಹಾಗೂ ಭೇಟಿ ಮಾಡಲು ಹೊರಗಿನಿಂದ ಬರುವವರ ಬಗ್ಗೆ ನಿಗದಿತ ಸಮಯ ಹಾಗೂ ವಿವರಗಳನ್ನು ದಾಖಲಿಸಬೇಕು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.