ಪರಿಸರ ಜಾಗೃತಿಗೆ ಹೋಗಿ ಸಾವಿನ ಕದ ತಟ್ಟಿ ಬಂದರು!
ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: 'ಅಲಕನಂದಾ ನದಿ ಪ್ರವಾಹದಲ್ಲಿ ಮುಳುಗುತ್ತಿದ್ದ ಕಟ್ಟಡದಿಂದ ಕೊನೆ ಕ್ಷಣದಲ್ಲಿ ಹೊರಬರದಿದ್ದರೆ ನಮ್ಮ ಗತಿ ಏನಾಗುತ್ತಿತ್ತೋ..?'
ರೋವರ್ಸ್ ಹಾಗೂ ರೇಂಜರ್ಸ್ಗಳಿಗಾಗಿ ಜೋಷಿಮಠದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಟ್ರಕ್ಕಿಂಗ್ ಮತ್ತು ಪರಿಸರ ಜಾಗೃತಿ ಶಿಬಿರದಲ್ಲಿ ಭಾಗವಹಿಸಿದ್ದ ರಾಜ್ಯದ ಇಬ್ಬರು ರೋವರ್ಸ್ಗಳಾದ ಮಲ್ನಾಡ್ ಓಪನ್ ಗ್ರೂಪ್ನ ಶಿವಮೊಗ್ಗದ ದೇವರಾಜ್ ಎಸ್.ಪಿ. ಹಾಗೂ ರಾಜು ಎಸ್.ಎಲ್. ಅವರಿಗೆ ಜೂ.16ರ ರಾತ್ರಿಯ ಕರಾಳ ನೆನಪು ಇನ್ನೂ ಕಾಡುತ್ತಿತ್ತು.
'ಕನ್ನಡಪ್ರಭ'ದೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, ಅವತ್ತು ರಾತ್ರಿ ಶಿಬಿರದ ಲೀಡರ್ ಎಸ್.ಎಸ್. ರಾಯ್ ಅವರು ಕಟ್ಟಡದಿಂದ ಹೊರಬರುವಂತೆ ಸೂಚನೆ ನೀಡದಿದ್ದರೆ ದೇಶದ 18 ರಾಜ್ಯಗಳಿಂದ ಬಂದಿದ್ದ ಹಲವು ರೋವರ್ಸ್ ಹಾಗೂ ರೇಂಜರ್ಸ್ಗಳು ಕಷ್ಟಕ್ಕೆ ಸಿಲುಕುತ್ತಿದ್ದರು. ನಿಗದಿಯಂತೆ ಶಿಬಿರವು ಜೋಷಿ ಮಠದ ಬೇಸ್ ಕ್ಯಾಂಪ್ನಲ್ಲಿ ಜೂ.12ರಂದು ಆರಂಭವಾಗಿತ್ತು. ಮೊದಲೆರಡು ದಿನ ಔಲಿ ಹಾಗೂ ತಪೋವನಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಬೇಸ್ ಕ್ಯಾಂಪ್ಗೆ ವಾಪಸಾಗಿದ್ದರು. ಜೂ.15ರಂದು ಬದರಿನಾಥಕ್ಕೆ ಹೋಗಬೇಕಿತ್ತು. ಬೆಳಗ್ಗೆ ಬೇಸ್ಕ್ಯಾಂಪ್ನಿಂದ ಟ್ರಕ್ಕಿಂಗ್ ಆರಂಭಿಸಿ 18 ಕಿ.ಮೀ. ದೂರದ ಬೇಸ್ ಕ್ಯಾಂಪ್ಗೆ ಬಂದರು. ಮುಂದೆ ಸಾಗಬೇಕಾದ ಸೇತುವೆಯೊಂದು ಹಾನಿಯಾಗಿದ್ದರಿಂದ ಕಾಯಬೇಕಾಗುತ್ತದೆ ಎಂದು ಸೇನೆಯ ಪ್ರತಿನಿಧಿಗಳು ಹೇಳಿದ್ದರಿಂದ ಅಲ್ಲೇ ಉಳಿದುಕೊಂಡರು.
ಇವರು ಬಂದ ದಾರಿಯಲ್ಲಿ ಭೂಕುಸಿತದಿಂದ ಸಾಲುಗಟ್ಟಲೆ ವಾಹನಗಳು ನಿಂತಿದ್ದವು. ದಾರಿಯಲ್ಲಿ ಅಡ್ಡಲಾಗಿ ಬಂಡೆಗಳು ಬಿದ್ದಿದ್ದವು. ಅವಘಡದ ಅರಿವಿಲ್ಲದೇ ಟ್ರಕ್ಕಿಂಗ್ ನಡೆಸಿದ ಅವರು ಸಂಜೆ ಗೋವಿಂದ ಘಾಟ್ ತಲುಪಿ ಗುರುದ್ವಾರದ ಲಂಗರ್ನಲ್ಲಿ ಊಟ ಮುಗಿಸಿ ಎದುರಿಗಿದ್ದ ಕಟ್ಟಡದ ಸೆಲ್ಲಾರ್ನಲ್ಲಿ ಮಲಗಿದ್ದರು.
ಕರಾಳ ರಾತ್ರಿ: ಅಂದು ರಾತ್ರಿ ಗೋವಿಂದ ಘಾಟ್ನ ಗುರುದ್ವಾರದ ಎದುರಿನಲ್ಲಿದ್ದ ಕಟ್ಟಡದ ಸೆಲ್ಲಾರ್ನಲ್ಲಿ ತಂಗಿದ್ದೆವು. ಹೊರಗೆ ಗಲಾಟೆ ಕೇಳಿ ರಾತ್ರಿ 1 ಗಂಟೆಗೆ ಎಚ್ಚರವಾಯಿತು. ಗುರುದ್ವಾರದ ಸಿಬ್ಬಂದಿ ಕೂಡಲೇ ನಮಗೆ ಲಗೇಜ್ ತೆಗೆದುಕೊಂಡು ಮೇಲಿನ ಮಹಡಿಗೆ ಹೋಗಲು ಹೇಳಿದರು. ಮೇಲೆ ಹೋದೆವು. ಹೊರಗೆ ನೋಡಿದರೆ ಅಲಕನಂದಾ ಅಬ್ಬರಿಸಿ ಹರಿಯುತ್ತಿದ್ದಳು. ಅಪಾಯದ ಸೂಚನೆ ಕಂಡ ನಮ್ಮ ತಂಡದ ಮುಖ್ಯಸ್ಥರು ಕಟ್ಟಡದಿಂದ ಹೊರಬರಲು ಹೇಳಿದರು. ನಾವು ಕೆಳಗಿಳಿಯುತ್ತಿದ್ದಾಗ ನೆಲ ಮಹಡಿಯಲ್ಲಿ ಮೊಣಕಾಲುವರೆಗೆ ನೀರು ಹರಿಯುತ್ತಿತ್ತು. ಅದರಲ್ಲೇ ನಡೆದುಕೊಂಡು ಹೊರಬಂದು ಎದುರಿಗಿದ್ದ ಗುರುದ್ವಾರ ಕಟ್ಟಡದ ಒಳಗೆ ಹೋದೆವು. ನೋಡ ನೋಡುತ್ತಿದ್ದಂತೆ ಮೊದಲು ನಾವಿದ್ದ ಕಟ್ಟಡ ಅಲಕನಂದಾ ಪ್ರವಾಹದಲ್ಲಿ ಅರ್ಧದಷ್ಟು ಮುಳುಗಿ ಹೋಯಿತು. ಅಲ್ಲಿಂದ ಹೊರಬರದಿದ್ದರೆ ನಮ್ಮ ಗತಿ ಏನಾಗುತ್ತಿತ್ತೋ?.
ನಾವು ಇದ್ದ ಕಟ್ಟಡದಿಂದ ಅಲಕನಂದಾ ನದಿಗೆ ನಿರ್ಮಿಸಿದ್ದ ಕಬ್ಬಿಣದ ಸೇತುವೆ ಕಾಣುತ್ತಿತ್ತು. ಇದು ಹೇಮಕುಂಡ್ಗೆ ಹೋಗುವ ದಾರಿ. ಈ ಸೇತುವೆಯ ಮೇಲೆಯೇ ನದಿ ಹರಿಯುತ್ತಿತ್ತು. ಇದ್ದಕ್ಕಿದ್ದಂತೆ ಸೇತುವೆ ಕುಸಿದು ಬಿತ್ತು. ತುದಿಯಲ್ಲಿ ನಿಂತಿದ್ದ ನಾಲ್ವರನ್ನು ಗುರುದ್ವಾರದ ಸಿಬ್ಬಂದಿ ಬಚಾವ್ ಮಾಡಿ ಕರೆತಂದರು. ನಾವು ಬದರಿನಾಥಕ್ಕೆ ಇದೇ ಸೇತುವೆ ಮೂಲಕ ಹೋಗಬೇಕಿತ್ತು. ನಾವೇನಾದರೂ ಸೇತುವೆ ದಾಟಿದ್ದರೆ ವಾಪಸ್ ಬರಲು ದಾರಿಯೇ ಇರುತ್ತಿರಲಿಲ್ಲ. ನದಿಯ ದಡದ ಮೇಲೆ ಸುಮಾರು 150 ವಾಹನಗಳನ್ನು ನಿಲ್ಲಿಸಲಾಗಿತ್ತು. ಎಲ್ಲವೂ ಕೊಚ್ಚಿ ಹೋಗಿ ನಾಲ್ಕೈದು ವಾಹನಗಳು ಮಾತ್ರ ಅಲ್ಲಿ ಉಳಿದಿದ್ದವು.
ನಾವು ನಿಂತಿದ್ದ ಗುರುದ್ವಾರದ ಕಟ್ಟಡವೂ ಸಹ ಪ್ರವಾಹದ ಆರ್ಭಟಕ್ಕೆ ಅಲುಗಾಡುತ್ತಿದ್ದುದು ಅನುಭವಕ್ಕೆ ಬಂತು. ಕೂಡಲೇ ಈ ಕಟ್ಟಡದಿಂದಲೂ ಕೆಳಗಿಳಿದು ಇನ್ನೂ ಮೇಲಕ್ಕೆ ಇದ್ದ ಮುಖ್ಯರಸ್ತೆಯತ್ತ ಟ್ರಕ್ಕಿಂಗ್ ಶುರು ಮಾಡಿದೆವು. ಜೂ.17ರ ಬೆಳಗಿನ ಜಾವ 5 ಗಂಟೆ ವೇಳೆಗೆ ಮುಖ್ಯರಸ್ತೆಗೆ ಬಂದ ಮೇಲೆ ನಾವು ನಿರಾತಂಕದಿಂದ ಉಸಿರಾಡುವಂತಾಗಿತ್ತು. ಅಲ್ಲಿಂದ ಜೋಷಿಮಠಕ್ಕೆ ವಾಪಸಾದೆವು.
ಯಾತ್ರಿಕರಿಗೆ ನೆರವು: ರೋವರ್ಸ್ ಹಾಗೂ ರೇಂಜರ್ಸ್ಗಳ ಗುಂಪಿನ ಕೆಲಸ ಇಷ್ಟಕ್ಕೇ ನಿಲ್ಲಲಿಲ್ಲ. ಇವರು ಜೋಷಿ ಮಠಕ್ಕೆ ವಾಪಸ್ ಬಂದಾಗ ಹೆಲಿಕಾಪ್ಟರ್ಗಳ ಹಾರಾಟ ಶುರುವಾಗಿತ್ತು. ಕೇದಾರನಾಥ, ಬದರಿನಾಥ ಹಾಗೂ ಇತರೆಡೆ ಸಿಲುಕಿದ್ದ ಯಾತ್ರಿಕರನ್ನು ಕರೆತರುತ್ತಿದ್ದರು. ಸೇನಾ ಸಿಬ್ಬಂದಿ ಇಲ್ಲಿ ಕ್ಯಾಂಪ್ ಮಾಡಿ ಯಾತ್ರಿಕರ ನೆರವಿಗೆ ನಿಂತಿತ್ತು. ಟನ್ಗಟ್ಟಲೆ ಊಟ ಸಿದ್ಧವಾಗುತ್ತಿತ್ತು. ಈ ರೋವರ್ಸ್ ಹಾಗೂ ರೇಂಜರ್ಸ್ಗಳೂ ಸೇನಾ ಸಿಬ್ಬಂದಿಗೆ ಕೈಜೋಡಿಸಿದರು. ಚಪಾತಿ ಸಿದ್ಧತೆಯಲ್ಲಿ ನೆರವಾದರೂ 10 ದಿನಗಳ ಕ್ಯಾಂಪ್ನ ಬಾಕಿ ದಿನ ಪೂರ್ತಿ ಜೋಷಿಮಠದಲ್ಲಿಯೇ ಉಳಿದು ಯಾತ್ರಿಕರಿಗೆ ನೆರವಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

