ಶಿವಮೊಗ್ಗ

ಸಹಕಾರಿ ಕ್ಷೇತ್ರ ನಿರೀಕ್ಷಿತ ಎತ್ತರಕ್ಕೆ ಬೆಳೆಯಲಿಲ್ಲ

Published On :

ಶಿವಮೊಗ್ಗ: ಸಹಕಾರಿ ಕ್ಷೇತ್ರ ನಿರೀಕ್ಷಿತ ಎತ್ತರಕ್ಕೆ ಬೆಳೆಯಲಿಲ್ಲ. ಸಹಕಾರಿ ಸದಸ್ಯರೂ ಬಲಿಷ್ಠರಾಗಿ ಬೆಳೆಯುವ ಅಗತ್ಯವಿದೆ ಎಂದು ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥಗೌಡ ಹೇಳಿದರು.
 ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಟಿಎಪಿಸಿಎಂಎಸ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ 97ನೇ ಸಂವಿಧಾನ ತಿದ್ದುಪಡಿ ಅನ್ವಯ ಸಹಕಾರ ಕಾಯ್ದೆ ತಿದ್ದುಪಡಿ ಕುರಿತು ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ನಾವೇ ರಚಿಸಿಕೊಂಡ ಬೈಲಾದಂತೆ ನಾವು ನಡೆದುಕೊಳ್ಳುವಲ್ಲಿ ಹಿಂದುಳಿದಿದ್ದೇವೆ ಎಂದ ಅವರು, ಸಹಕಾರ ಸಂಘಗಳಲ್ಲಿ ಸದಸ್ಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವ ಅಗತ್ಯವಿದ್ದು, ಷೇರುಬಂಡವಾಳ ಸಂಗ್ರಹಿಸಬೇಕು ಎಂದ ಕರೆ ನೀಡಿದರು.
ವೈದ್ಯನಾಧನ್ ವರದಿ: ವೈದ್ಯನಾಧನ್ ವರದಿ ಜಾರಿಯಾದ ನಂತರ ಸಹಕಾರ ಕ್ಷೇತ್ರದಲ್ಲಿ ಅನೇಕ ಮಹತ್ವದ ನಿರ್ಣಯಗಳೊಂದಿಗೆ ಬದಲಾವಣೆ ಕಂಡುಕೊಳ್ಳಲಾಗಿದೆ ಎಂದ ಅವರು ಈ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಸಹಕಾರಿ ವಿಷಯದ ಪದವೀಧರರು, ಅನುಭವಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ಸಂಘಗಳ ಉನ್ನತಿಗೆ ಶ್ರಮಿಸಬೇಕು. ಸಹಕಾರಿ ಸಂಘಗಳಲ್ಲಿನ ಸದಸ್ಯರು ಹಾಗೂ ಉದ್ಯೋಗಿಗಳು ಜಾತ್ಯತೀತವಾಗಿ, ಪಕ್ಷಾತೀತವಾಗಿ ಕಾರ್ವನಿರ್ವಹಿಸಬೇಕೆಂದರು.
ಸಮನ್ವಯತೆ ಕೊರತೆ: ಪ್ರಾಸ್ತಾವಿಕವಾಗಿ ಮಾತನಾಡಿದ ಸಹಕಾರ ಸಂಘಗಳ ಅಪರ ನಿಬಂಧಕ ಸಿ.ಎಸ್.ಪುಟ್ಟರಾಜ್, ಸಹಕಾರ ಕ್ಷೇತ್ರ ಇಂದು ಸರ್ಕಾರದ ಹಸ್ತಕ್ಷೇಪದಿಂದ ಮುಕ್ತವಾಗಿದ್ದು, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಅನುಕೂಲವಾಗಿದೆ ಎಂದರು. ಸಹಕಾರಿಗಳ ನಡುವೆ ಸಮನ್ವಯತೆ ಕೊರತೆ ಕಂಡುಬರುತ್ತಿದೆ ಎಂದ ಅವರು ಸಹಕಾರ ಕ್ಷೇತ್ರದಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಕನಿಷ್ಠ ಪ್ರಮಾಣದಲ್ಲಿದೆ. ಮಹಿಳೆಯರೂ ಸಹಕಾರ ಸಂಘಗಳ ಸದಸ್ಯತ್ವ ಪಡೆದುಕೊಳ್ಳುವಂತೆ ತಿಳಿಸಿದ ಅವರು ಎಲ್ಲಾ ಜಾತಿ ಜನಾಂಗದವರಿಗೆ ಸಹಕಾರ ಕ್ಷೇತ್ರ ಮುಕ್ತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಡಿ. ಭೂಕಾಂತ್ ಅಧ್ಯಕ್ಷತೆ ವಹಿಸಿದ್ದರು. ಬಿ.ಜಿ. ವೆಂಕಟೇಗೌಡ, ಎಂ.ಬಿ. ಚನ್ನವೀರಪ್ಪ, ಉಂಬ್ಳೇಬೈಲು ಮೋಹನ್, ಎಚ್.ವಿ. ರವಿಕುಮಾರ್, ಎಚ್.ಎಸ್. ನಾಗರಾಜಯ್ಯ, ಎಚ್.ಎನ್. ವಿಜಯದೇವ್, ಅಶೋಕ ಎಂ. ಮೊರಬ, ಬಿ.ಜಿ. ದಿನೇಶ್ ಬಿರದವಳ್ಳಿ, ಎಸ್. ಸಾಬ್ಜಾನ್ಸಾಬ್, ಬಿ.ಎಚ್. ಶಶಿರೇಖಾ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.