ಶಿವಮೊಗ್ಗ

ಮಾನವ ಧರ್ಮಕ್ಕೆ ನೆಲೆ ನೀಡುವಂತಾಗಬೇಕು

Published On :

ಕ.ಪ್ರ.ವಾರ್ತೆ, ಸೊರಬ, ಜೂ.30
ಸಾಮಾಜಿಕ ನೆಲೆಗಟ್ಟಿನಡಿ ಸರ್ವಧರ್ಮೀಯರನ್ನು ಒಂದೇ ನೆಲೆಗಟ್ಟಿನಡಿ ತಂದು ಧರ್ಮಗಳನ್ನು ಒಂದುಗೂಡಿಸಿ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಮಾನವ ಧರ್ಮಕ್ಕೆ ನೆಲೆ ನೀಡುವಂತಾಗಬೇಕು ಎಂದು ಸೊರಬ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಜಶೇಖರ ಪಾಟೀಲ್ ನೆಗವಾಡಿ ಕರೆ ನೀಡಿದ್ದಾರೆ.
ಆನವಟ್ಟಿಯಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಕನ್ನಡಾಭಿಮಾನದಿಂದ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಗತ್ಯ ಪ್ರಯತ್ನ ಮಾಡಬೇಕಿದೆ. ಇತರೆ ಭಾಷೆಗಳನ್ನು ಗೌರವಿಸಿ, ಕನ್ನಡ ಭಾಷೆಯನ್ನು ಆಡುಭಾಷೆಯನ್ನಾಗಿ ಮಾಡಿಕೊಂಡು ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಎಲ್ಲರಿಂದಾಗಬೇಕು.
ಸರ್ವ ಜನಾಂಗದ ಶಾಂತಿಯು ಎಲ್ಲಾ ಧರ್ಮಗಳನ್ನು ಒಗ್ಗೂಡಿಸಿಕೊಂಡು ಒಮ್ಮಸ್ಸಿನಿಂದ ಸತ್ಸಂಪ್ರದಾಯ ನೆಲೆಗೊಳ್ಳುವಂತಾಗಬೇಕು. ಆಗ ಮಾತ್ರ ಸರ್ವಧರ್ಮ ಸಮನ್ವಯತೆ ಆದರ್ಶಪ್ರಾಯವಾಗಲು ನೆರವಾಗುತ್ತದೆ ಎಂದ ಅವರು ಧರ್ಮದಲ್ಲಿ ಮರ್ಮವಿದೆ. ಮತ ಮೌಡ್ಯ ಸ್ವಾರ್ಥಪರತೆ ಮೆರೆದಾಗ ಅಪಸ್ವರಗಳು, ಆದ್ವಾನಗಳು ಹುಟ್ಟಿಕೊಳ್ಳುತ್ತವೆ ಎಂದರು.
ಬೆಳಿಗ್ಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಆನವಟ್ಟಿಯ ವಿಠಲ ರಖುಮಾಯಿ ದೇವಾಲಯದಿಂದ ಶಾಲಾ ವಿದ್ಯಾರ್ಥಿಗಳು ಗ್ರಾಮಸ್ಥರೊಂದಿಗೆ ಸಮ್ಮೇಳನಾಧ್ಯಕ್ಷ ರಾಜಶೇಖರ ಪಾಟೀಲ್ ನೆಗವಾಡಿ ಅವರನ್ನು ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆಯ ಮೂಲಕ ಚಂದ್ರಹಾಸ ವೇದಿಕೆಗೆ ಕರೆತರಲಾಯಿತು.
ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಿಜ್ಞಾನ ಮಾದರಿಗಳ ಪ್ರದರ್ಶನ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಗೃಹ ಕೈಗಾರಿಕೆಗಳ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿತ್ತು.
ಶಾಸಕ ಮಧು ಬಂಗಾರಪ್ಪ ರಾಷ್ಟ್ರಧ್ವಜಾರೋಹಣ ಮಾಡಿದರು. ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ನಾಡ ಧ್ವಜ ಹಾಗೂ ಕಸಾಪ ತಾಲೂಕು ಅಧ್ಯಕ್ಷ ಮಧುರಾಯ್ ಜಿ. ಶೇಟ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ಮಧ್ಯಾಹ್ನ ವಿವಿಧ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಕನ್ನಡ ವ್ಯವಹಾರಿಕ ಭಾಷೆ ಆಗುವವರೆಗೆ ಪ್ರಾಶಸ್ತ್ಯವಿಲ್ಲ
ಕ.ಪ್ರ.ವಾರ್ತೆ, ಸೊರಬ, ಜೂ.30
ಎಲ್ಲಿಯವರೆಗೆ ಕನ್ನಡ ಭಾಷೆಯು ಉತ್ತಮ ಸ್ಥಾನಕ್ಕೇರುವುದಿಲ್ಲವೋ ಅಲ್ಲಿಯವರೆಗೆ ಕನ್ನಡ ಭಾಷೆಗೆ ಆತಂಕ ತಪ್ಪಿದಲ್ಲ. ಕನ್ನಡ ಭಾಷೆ ಔದ್ಯೋಗಿಕ ಮತ್ತು ವ್ಯವಹಾರಿಕ ಭಾಷೆ ಆಗುವವರೆಗೂ ಕನ್ನಡಕ್ಕೆ ಪ್ರಾಶಸ್ತ್ಯ ಬರುವುದಿಲ್ಲ ಎಂದು ಕುವೆಂಪು ವಿಶ್ವ ವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಡಾ. ಸಣ್ಣರಾಮಪ್ಪ ಹೇಳಿದರು.
ಸೊರಬ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಗತ್ತಿನ ಭಾಷೆಗಳೆಲ್ಲ ತಾಂತ್ರಿಕ ಭಾಷೆಗಳಾಗಿ ಪರಿವರ್ತನೆಯಾಗುತ್ತಿರುವ ಈ ಸಂದರ್ಭಭದಲ್ಲಿ ಕನ್ನಡವೂ ತಾಂತ್ರಿಕ ಭಾಷೆಯಾಗಬೇಕಾದ ಅಗತ್ಯವಿದೆ.  ಕನ್ನಡ ಸಂಸ್ಕೃತಿ, ಕನ್ನಡ ಮಾತನಾಡುವ ನಾವು-ನೀವು ಇರುವವರೆಗೆ ಕನ್ನಡ ಭಾಷೆ ಜೀವಂತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಡೆಗಣನೆ ಬೇಡ: ಕನ್ನಡ ಸಾಹಿತ್ಯದ ಆಂತರ್ಯಯವನ್ನು ಹೊಕ್ಕು ನೋಡಿದಾಗ ಪ್ರಧಾನವಾಗಿ ಸಮಾನತೆಯ ಚಿಂತನೆ, ಪ್ರಭುತ್ವದ ವಿರುದ್ಧ ಪ್ರತಿಭಟನೆಯ ಧಾರೆಗಳನ್ನು ಗುರುತಿಸಬಹುದು. ಪುರಾತನ ಕಾಲದಿಂದಲೂ ಸಹ ಕನ್ನಡ ಭಾಷೆಗೆ ಒಂದು ಉತ್ತಮ ಸ್ಥಾನವಿದ್ದು, ಅದನ್ನು ಕಡೆಗಣಿಸಬಾರದು. ಈ ನುಡಿ ಹಬ್ಬದಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ, ನುಡಿಯ ಬಗ್ಗೆ ಚಿಂತನೆ, ಚರ್ಚೆ ನಡೆಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಮಧುರಾಯ. ಜಿ. ಶೇಟ್ ಮಾತನಾಡಿ, ತಾ.ಕ.ಸಾ.ಪ ಕನ್ನಡಾಭಿಮಾನವನ್ನು ಬೆಳೆಸುವಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಸಾಹಿತ್ಯ ಪರಿಷತ್ ತಾಲೂಕು ಘಟಕಕ್ಕೆ ಕಟ್ಟಡ ನಿರ್ಮಿಸಲು ನಿವೇಶನ ಮಂಜೂರಾತಿ ದೊರಕಿದ್ದು, ಅನುದಾನವೂ ಸಿಕ್ಕಿದೆ. ಶೀಘ್ರದಲ್ಲಿ ಸ್ವಂತ ಕನ್ನಡ ಹೊಂದಲಿದೆ ಎಂದರು.
ಕನ್ನಡಕ್ಕೆ ಎಲ್ಲೆಡೆ ಗೌರವ ಸಿಗಬೇಕು. ಕನ್ನಡ ಮಾತನಾಡಲು ಕೀಳರಿಮೆ ಬೆಳಸಿಕೊಳ್ಳದೇ ಕನ್ನಡತನವನ್ನು ಮೆರೆಯಬೇಕು ಎಂದು ಆಶಯ ನುಡಿಗಳನ್ನಾಡಿದರು.
ಸಮ್ಮೇಳನಾಧ್ಯಕ್ಷ ರಾಜಶೇಖರ ಪಾಟೀಲಲ್ನೆಗವಾಡಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹೊಸಬಾಳೆ ಸೀತಾರಾಮರಾವ್, ಜಿ.ಪಂ.ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಸದಸ್ಯರಾದ ಕೋಮಲ ನಿರಂಜನ, ಮಲ್ಲಮ್ಮ, ತಾ.ಪಂ. ಅಧ್ಯಕ್ಷ ಸದಾನಂದಗೌಡ, ಉಪಾಧ್ಯಕ್ಷೆ ನೀಲಮ್ಮ, ಕಸಾಪ ಆನವಟ್ಟಿ ಘಟಕಾಧ್ಯಕ್ಷ ಉಮೇಶ್ ಬಚ್ಚುಗತ್ತಿ, ಗ್ರಾ.ಪಂ. ಅಧ್ಯಕ್ಷೆ ಗಿರಿಜಮ್ಮ, ಜೆ.ಚಂದ್ರಶೇಖರಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.