ಸೊರಬ ತಾಪಂ ಜೆಡಿಎಸ್ ತೆಕ್ಕೆಗೆ
ಕನ್ನಡ ಪ್ರಭ ವಾರ್ತೆ, ಸೊರಬ, ಮಾ.2
ಪಕ್ಷ ಹೊಂದಾಣಿಕೆ ಕುರಿತು ಕುತೂಹಲ ಕೆರಳಿಸಿದ್ದ ತಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಎರಡನೆ ಅವಧಿ ಆಯ್ಕೆ ಪ್ರಕ್ರಿಯೆ ಜೆಡಿಎಸ್ ಪಕ್ಷದೆಡೆ ಜಾರಿದ್ದು, ಮೊದಲ ಬಾರಿಗೆ ಜೆಡಿಎಸ್ ತಾಪಂ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ತಾಪಂ 18 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ತಲಾ 6 ಸ್ಥಾನ ಗಳಿಸಿದ್ದವು. ಮೂರು ಪಕ್ಷಗಳು ಸಮಬಲ ಹೊಂದಿದ್ದರಿಂದ ಕಳೆದ ಎರಡೂವರೆ ವರ್ಷ ಅತಂತ್ರ ಸ್ಥಿತಿಯಲ್ಲಿತ್ತು. ಆಗ ಅಧ್ಯಕ್ಷ ಸ್ಥಾನ ಬಿಸಿಎಂ ಬಿ ಗೆ ಮೀಸಲಾಗಿತ್ತು, ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ಬಿಸಿಎಂ ಬಿ ಸದಸ್ಯರಿಲ್ಲದ ಕಾರಣ ಬಿಜೆಪಿಯ ಬಿ.ಸಿ. ಮೀನಾಕ್ಷಮ್ಮ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದರು.
ಉಪಾಧ್ಯಕ್ಷರಾಗಿ ಕಾಂಗ್ರೆಸ್ನ ಹೇಮಾವತಿ ಕಡ್ಲೇರ ಬಿಜೆಪಿ ಬೆಂಬಲದೊಂದಿಗೆ ಆಯ್ಕೆಯಾಗಿದ್ದರು. ಪ್ರಸ್ತುತ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗ ಮೀಸಲಾತಿ, ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮಹಿಳೆ ಮೀಸಲಿತ್ತು. ಕಳೆದ ವಾರದಿಂದ ಈ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್ನೊಂದಿಗೆ ಕೈಜೋಡಿಸಲು ಬಿಜೆಪಿ ಮುಂದಾಗಿತ್ತು. ಬಿಜೆಪಿ ಸದಸ್ಯರೂ ಬೇರೆ ಪಕ್ಷದೆಡೆ ಜಾರದಂತೆ ವಿಪ್ ಜಾರಿ ಹೊರಡಿಸಿದ್ದರು.
ಕಾಂಗ್ರೆಸ್ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಇದೇ ಸದಾವಕಾಶವನ್ನು ಸದುಪಯೋಗ ಪಡಿಸಿಕೊಂಡ ಜೆಡಿಎಸ್ ಕಾಂಗ್ರೆಸ್ನ 4 ಸದಸ್ಯರನ್ನು ತನ್ನೆಡೆಗೆ ಸೆಳೆದುಕೊಂಡು, 10 ಸದಸ್ಯರ ಬಲದ ಮೂಲಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಅರ್ಹತೆ ಪಡೆದುಕೊಂಡಿತು.
ಅಂತಿಮವಾಗಿ ಜೆಡಿಎಸ್ನ ಸದಾನಂದಗೌಡ ಅಧ್ಯಕ್ಷರಾಗಿ, ನೀಲಮ್ಮ ಸುರೇಶ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ತಾಲೂಕಿನಲ್ಲಿಯೆ ಇರುವ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಹರ್ಷ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ನಿಂದ ಜೆಡಿಎಸ್ಗೆ ವಲಸೆ ಬಂದಿರುವ ಸದಾನಂದಗೌಡ, ಬಸವಲಿಂಗಪ್ಪ, ಹೇಮಾವತಿ ಕಡ್ಲೇರಾ, ರಾಜೇಶ್ವರಿ ರಾಜಪ್ಪ ಮಾತನಾಡಿ, ಮಧು ತಂದೆಗೆ ತಕ್ಕ ಮಗನಾಗಿ ಜನರ ನೋವಿಗೆ ಸ್ಪಂಧಿಸುವ ವ್ಯಕ್ತಿ ಎಂದರು. ಕಾಂಗ್ರೆಸ್ನ ಸುರೇಶ್ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ಗೆ ಸೇರ್ಪಡೆಗೊಂಡರು. ಗಣಪತಿ, ಕುಮಾರ್, ರುದ್ರಗೌಡ, ಮಂಜುನಾಥ್, ಶೇಖರ್, ಪಕ್ಕೀರಪ್ಪ, ಶ್ರೀಪಾದರಾವ್, ಮೋಹನಗೌಡ, ಮಂಚಿ ಸೋಮಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

