ಜಲಾಶಯಕ್ಕೆ ಅಕ್ರಮ ಮೋಟರ್ ಅಳವಡಿಕೆ
ಶಿಕಾರಿಪುರ: ತಾಲೂಕಿನ ಅಂಬ್ಲಿಗೊಳ್ಳ ಜಲಾಶಯದಲ್ಲಿ ಬರಗಾಲದಿಂದಾಗಿ ನೀರಿನ ಸಂಗ್ರಹ ನಿತ್ಯ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಆದೇಶ ಮೀರಿ ಜಲಾಶಯದ ಹಿಂಭಾಗ ರೈತರು ಅಕ್ರಮ ಮೋಟಾರ್ ಅಳವಡಿಸಿ ಕುಡಿಯಲು ಮೀಸಲಾದ ನೀರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಅಧಿಕಾರಿಗಳು ಇದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಅಚ್ಚುಕಟ್ಟುದಾರ ರೈತರು ಗುರುವಾರ ಶಿಕಾರಿಪುರಕ್ಕೆ ಆಗಮಿಸಿದ್ದ ಭಾರಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಶಿಕಾರಿಪುರ ತಾಲೂಕಿನ ರೈತ ಸಮುದಾಯದ ಕಣ್ಣಿನಂತಿರುವ ಬಹುದೊಡ್ಡ ಅಂಬ್ಲಿಗೊಳ್ಳ ಜಲಾಶಯದಲ್ಲಿ ಬರಗಾಲದ ಸ್ಥಿತಿಯಿಂದಾಗಿ ನೀರಿನ ಸೆಲೆ ನಿತ್ಯ ಕಡಿಮೆಯಾಗುತ್ತಿದೆ. ಈ ಸಂದರ್ಭದಲ್ಲಿ ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಗಳ ಆದೇಶದಂತೆ ಬೇಸಿಗೆ ಬೆಳೆಗೆ ನೀರು ಒದಗಿಸಲು ಅಸಾಧ್ಯ ಎಂದು ಅಚ್ಚುಕಟ್ಟುದಾರ ರೈತರು ಪರ್ಯಾಯ ಬೆಳೆಯತ್ತ ಗಮನ ಹರಿಸುತ್ತಿದ್ದಾರೆ ಎಂದರು.
ಅಕ್ರಮ ಮೋಟರ್: ಇಂತಹ ಸ್ಥಿತಿಯಲ್ಲಿ ಜಲಾಶಯದ ಹಿಂಭಾಗದಲ್ಲಿನ ಸಾಗುವಳಿದಾರ ರೈತರು ಅಕ್ರಮವಾಗಿ ಮೋಟಾರ್ ಅಳವಡಿಸಿ ನಿತ್ಯ ಹಲವು ನೀರನ್ನು ಬಳಸಿಕೊಂಡು ನಾಟಿ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದಾರೆ ಎಂದು ರೈತ ಮುಖಂಡ, ತಾಲೂಕು ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬನ್ನೂರು ಮಂಜಪ್ಪ ಆರೋಪಿಸಿದರು.
ಮೋಟಾರ್ ಪಂಪ್ಸೆಟ್ ಮೂಲಕ ಅಕ್ರಮವಾಗಿ ಜಲಾಶಯದ ನೀರನ್ನು ಬಳಸಿಕೊಳ್ಳುವ ಜತೆಗೆ ಕೃಷಿ ಕಾರ್ಯಕ್ಕೆ ಹೇರಳವಾಗಿ ಉಪಯೋಗಿಸುತ್ತಿರುವ ರಾಸಾಯನಿಕ, ಜಲಾಶಯದ ನೀರಿನ ಜತೆ ಬೆರೆತು ಸಂಪೂರ್ಣ ನೀರು ಮಲಿನಗೊಳ್ಳುತ್ತಿದೆ ಎಂದು ಆರೋಪಿಸಿದರು.
ಇಂತಹ ನೀರನ್ನು ಶಿಕಾರಿಪುರ ಹಾಗೂ ಶಿರಾಳಕೊಪ್ಪ ಜನ ಕುಡಿಯುವ ಉದ್ದೇಶಕ್ಕೆ ಹಾಗೂ ಜಾನುವಾರುಗಳು ಉಪಯೋಗಿಸುತ್ತಿದ್ದು, ಇದರಿಂದಾಗಿ ಶೀಘ್ರ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು. ಈ ಕೂಡಲೇ ಇಲಾಖೆ ಅಧಿಕಾರಿಗಳು ಸಂಬಂಧಿಸಿದ ರೈತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದರು.
ಸೂಕ್ತ ಮುನ್ನೆಚ್ಚರಿಕೆ: ಮಧ್ಯ ಪ್ರವೇಶಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ ಸುಲೇಪೇಟ್ಕರ್, ಜಲಾಶಯದಲ್ಲಿ ಕೇವಲ 4.5 ಅಡಿ ಮಾತ್ರ ನೀರು ಸಂಗ್ರಹವಿದ್ದು, ಈಗಾಗಲೇ ಅಕ್ರಮ ಪಂಪ್ ಸೆಟ್ಗಳನ್ನು ಹಲವು ಬಾರಿ ಮುಟ್ಟುಗೋಲು ಹಾಕಿಕೊಂಡು ರೈತರಿಗೆ ಸೂಕ್ತ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿ, ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್ ಇಲಾಖೆಯ ಸಹಕಾರ ಅಗತ್ಯವಾಗಿದೆ ಎಂದರು.
ಕಾರ್ಯಪಾಲಕ ಅಭಿಯಂತರ ಸಿದ್ದಲಿಂಗಪ್ಪ, ಬೇಸಿಗೆಯ ಇತ್ತೀಚಿನ ದಿನದಲ್ಲಿ ಎಲ್ಲೆಡೆ ಈ ಕೃತ್ಯ ಸಾಮಾನ್ಯವಾಗುತ್ತಿದ್ದು, ಕುಡಿಯುವ ನೀರಿನ ದುರ್ಬಳಕೆ ತಡೆಯಲು ಅಧಿಕಾರಿಗಳಿಗೆ ಮೋಟಾರ್ ಪಂಪ್ಸೆಟ್ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದ ಅವರು, ಇದಕ್ಕೆ ಶಾಶ್ವತ ಕ್ರಮ ಕೈಗೊಳ್ಳಲು ಪ್ರತ್ಯೇಕ ಕಾನೂನು ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಅಧಿಕಾರಿಗಳ ರಕ್ಷಣೆಗೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಕ್ರಮ ಕೈಗೊಳ್ಳಲು ಸೂಚಿಸಿದರು.
ಮಾಜಿ ಯೋಧ ಪಿ.ವೈ. ರವಿ, ಸಹಾಯಕ ಅಭಿಯಂತರ ಮಂಜುನಾಥ್, ರಾಮಪ್ಪ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

