'ಇಂದಿನ ರಾಜಕಾರಣ ಕಲುಷಿತವಾಗಿದೆ'
ಕ.ಪ್ರ.ವಾರ್ತೆ, ಹೊಸನಗರ, ಮಾ.4 ಇಂದಿನ ರಾಜಕಾರಣ ಕಲುಷಿತವಾಗಿದ್ದು, ಎಚ್ಚೆತ್ತುಕೊಂಡು ಶುದ್ಧೀಕರಿಸುವ ಪ್ರಯತ್ನ ಮಾಡದಿದ್ದರೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಪಟ್ಟಣದಲ್ಲಿ ಮತಯಾಚಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ತತ್ವ, ಸಿದ್ಧಾಂತ, ನೈತಿಕತೆ, ಅಭಿವೃದ್ಧಿ ರಾಜಕಾರಣಕ್ಕಿಂತ ಹಣ, ಹೆಂಡ, ಅನೈತಿಕ ರಾಜಕಾರಣಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾಂಗ್ರೆಸ್ಗೆ ಉತ್ತಮ ವಾತಾವರಣ: ರಾಜ್ಯ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಉತ್ತಮ ವಾತಾವರಣವಿದೆ. ನಿವೇಶನ, ಮನೆ ನೀಡದಿರುವುದು, ಪಡಿತರ ಅವ್ಯವಸ್ಥೆ, ಬಗರಹುಕುಂ ಸೇರಿದಂತೆ ಹಲವು ಸಮಸ್ಯೆಗೆ ಸ್ಪಂದಿಸದಿರುವುದು ಜನರಲ್ಲಿ ಸಹಜವಾಗಿ ಅಸಮಧಾನ ತಂದಿದೆ.
ಅಲ್ಲದೆ ಬಿಜೆಪಿಯಿಂದ ಹೊರಬಂದ ಬಿಎಸ್ವೈ ಕೆಜೆಪಿ ಕಟ್ಟಿ ಮೈ ಪರಚಿಕೊಳ್ಳುತ್ತಿದ್ದಾರೆ ಹೀಗಾಗಿ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಮ್ಮೆ ಬಿಜೆಪಿ, ಮತೊಮ್ಮೆ ಯಡಿಯೂರಪ್ಪರನ್ನು ಬೈಯುತ್ತಾ, ಇಲ್ಲದ ಗಿಮಿಕ್ ಮಾಡುತ್ತ ಬಂದ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ಅತಂತ್ರರಾಗಿದ್ದಾರೆ.
ಕಾಂಗ್ರೆಸ್ ಟಿಕೆಟ್ ಪಡೆಯಲು ಯತ್ನಿಸಿರುವ ಅವರ ಆಟ ಪಕ್ಷದಲ್ಲಿ ನಡೆಯದು. ಅಲ್ಲದೆ ಉತ್ತಮ ಸ್ಥಿತಿಯಲ್ಲಿರುವ ಕಾಂಗ್ರೆಸ್ಗೆ ಅವರ ಅಗತ್ಯವಿಲ್ಲ ಎಂದರು.
ಪರಿಸ್ಥಿತಿ ಲಾಭವೋ ಏನೋ ಎರಡುಬಾರಿ ಶಾಸಕರಾದ ಶಾಸಕ ಬೇಳೂರು ಜವಾಬ್ದಾರಿಯುತವಾಗಿ ವರ್ತಿಸಿದ್ದರೆ ಉತ್ತಮ ಸ್ಥಾನ ಗಳಿಸಬಹುದಿತ್ತು. ಇಂತಹ ಅವಕಾಶ ಗೌರವ ಅಪರೂಪ. ಆದರೆ ಇದರ ಮಹತ್ವ ಅರಿಯದ ಬೇಳೂರು ಇಂದು ಅತಂತ್ರರಾಗಬೇಕಾಗಿ ಬಂದದ್ದು ವಿಪರ್ಯಾಸ ಎಂದು ಮಾರ್ಮಿಕವಾಗಿ ನುಡಿದರು.
ಮಾಜಿ ಶಾಸಕ ಸ್ವಾಮಿರಾವ್, ಜಿಪಂ ಸದಸ್ಯರಾದ ಕಲಗೋಡು ರತ್ನಾಕರ್, ಜ್ಯೋತಿ ಚಂದ್ರಮೌಳಿ, ತಾಪಂ ಅಧ್ಯಕ್ಷೆ ಗೀತಾನಿಂಗಪ್ಪ, ಬಂಡಿ ರಾಮಚಂದ್ರ, ಕುನ್ನೂರು ಮಂಜಪ್ಪ, ಪ್ರಭಾಕರಾವ್, ಏರಗಿಉಮೇಶ್, ಕೋಡೂರು ಚಂದ್ರಮೌಳಿ, ಮಹಾಬಲರಾವ್, ರತ್ನಾಕರಶೆಟ್ಟಿ, ಚಂದ್ರಶೇಖರ ಶೇಟ್ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

