ಶಿವಮೊಗ್ಗ

ಬೃಹತ್ ಮರಗಳ ಹನನಕ್ಕೆ ಸಾರ್ವಜನಿಕರ ವಿರೋಧ

Published On :

ಸಾಗರ: ಎಮ್ಮೆಗೆ ಜ್ವರ ಬಂದರೆ, ಎತ್ತಿಗೆ ಬರೆ ಹಾಕಿದರು ಎನ್ನುವ ಗಾದೆ ಮಾತಿನಂತೆ ಕಾಕತಾಳೀಯವಾಗಿ ನಡೆದ ಘಟನೆಯನ್ನು ನೆಪವಾಗಿಟ್ಟುಕೊಂಡು ಅರಣ್ಯ ಇಲಾಖೆ ಪಟ್ಟಣದ ಚಾಮರಾಜಪೇಟೆಯ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ವರ್ಷಗಳಿಂದ ಜನರಿಗೆ ನೆರಳನ್ನು ನೀಡುತ್ತಿದ್ದ ಬೃಹತ್ ಮರಗಳನ್ನು ಕಡಿತಲೆ ಮಾಡಲು ಮುಂದಾಗಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದೆ.
 ಇತ್ತೀಚೆಗೆ ಪಟ್ಟಣದ ಗಣಪತಿ ಬ್ಯಾಂಕ್ ಎದುರಿನ ರಸ್ತೆಯ ಪಕ್ಕದ ಮರಮೊಂದರ ಟೊಂಗೆ ಮುರಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಭಾಗದ ಮರಗಳನ್ನು ಕಡಿಯಲು ಮುಂದಾಗಿದೆ. ನಗರಸಭೆ ಎದುರಿನ ಚಾಮರಾಜಪೇಟೆ ರಸ್ತೆಯ ಎರಡೂ ಬದಿಗಳಲ್ಲಿ ಬಣಹತ್ಮ್‌ರಗಳು ಹಲವಾರು ವರ್ಷಗಳಿಂದ  ಪಾದಾಚಾರಿಗಳಿಗೆ ನೆರಳು ನೀಡುತ್ತಿದೆ. ಇಲ್ಲಿ ಹಲಸು, ಮಾವು, ಅರಳಿ ಇನ್ನಿತರ ಬೆಲೆಬಾಳುವ ಮರಗಳಿದ್ದು ಅರಣ್ಯ ಇಲಾಖೆ ಈ ಮರಗಳನ್ನು ಕಟಾವು ಮಾಡಲು ಈಗಾಗಲೆ ಸಂಖ್ಯೆಗಳನ್ನು ನಮೂದಿಸಿ, ಟೆಂಡರ್ ಕರೆಯುವ ಪ್ರಕ್ರಿಯೆ ನಡೆಸಿದೆ.
ಸಾರ್ವಜನಿಕರ ವಿರೋಧ: ಮರಗಳ ಟೊಂಗೆಗಳು ಒಣಗಿದ್ದರೆ ಅದನ್ನು ಕಟಾವು ಮಾಡುವ ಮೂಲಕ ನೆರಳಿನ ಆಶ್ರಯವಾಗಿರುವ ಮರಗಳನ್ನು ಉಳಿಸಿಕೊಳ್ಳುವ ಜಾಣತನ ಪ್ರದರ್ಶಿಸಬೇಕಿದ್ದ ಅರಣ್ಯ ಇಲಾಖೆ ಏಕಾಏಕಿ ಮರಗಳ ಬುಡಕ್ಕೆ ಕೊಡಲಿ ಹಾಕಲು ಹೊರಟಿರುವ ಕ್ರಮ ಖಂಡನೀಯ. ಈಗಾಗಲೇ ನಗರಸಭೆ ಆಡಳಿತ ರಸ್ತೆ ಅಗಲೀಕರಣ ಹೆಸರಿನಲ್ಲಿ ಕೋಟರ್ ರಸ್ತೆಯ ಇಕ್ಕೆಲಗಳಲ್ಲಿರುವ ದೊಡ್ಡದೊಡ್ಡ ಮರಗಳನ್ನು ಕಡಿಯುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿತ್ತು.
 ಕಡಿದ ಮರಗಳಿಗೆ ಬದಲಾಗಿ ಅದೇ ಜಾಗದಲ್ಲಿ ಸಸಿಗಳನ್ನು ನೆಡುವ ಕೆಲಸ ಮಾಡುತ್ತೇವೆ ಎಂದು ಆಡಳಿತ ನಡೆಸುವವರು ಆಗ ನೀಡಿದ್ದ ಭರವಸೆ ಹುಸಿಯಾಗಿದೆ. ಈಗ ಚಾಮರಾಜಪೇಟೆಯ ರಸ್ತೆ ಬದಿಯ ಮರಗಳನ್ನು ಕಟಾವು ಮಾಡಲು ಹೊರಟಿರುವ ಕ್ರಮ ಎಷ್ಟು ಸರಿ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
 ಹಿಂದೊಮ್ಮೆ ಆಗಿನ ಪುರಸಭೆ ಆಡಳಿತ ಇಲ್ಲಿನ ಮರಗಳನ್ನು ಕಟಾವು ಮಾಡಲು ಹೋಗಿ ಸಾರ್ವಜನಿಕರ ತೀವ್ರ ವಿರೋಧವನ್ನು ಎದುರಿಸಿ ಅಲ್ಲಿಗೇ ಕೈಬಿಟ್ಟಿತ್ತು. ಈಗ ಮತ್ತದೇ ಕೆಲಸಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಇನ್ನಾದರೂ ಮರಗಳನ್ನು ಕಟಾವು ಮಾಡುವುದನ್ನು ಬಿಟ್ಟು, ಒಣಗಿರುವ ಟೊಂಗೆಗಳನ್ನು ಕಡಿಯುವ ಮೂಲಕ ಪರಿಸರ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಪರಿಸರಪ್ರೇಮಿಗಳು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.