ಶಿವಮೊಗ್ಗ

ಮತದಾರ ಪಟ್ಟಿಯ ಲೋಪ: ವರದಿಗೆ ಸೂಚನೆ

Published On :

ಶಿವಮೊಗ್ಗ: ಮತದಾರರ ಪಟ್ಟಿಯಲ್ಲಿ ಹೆಸರನ್ನು ಡಿಲಿಟ್  ಮಾಡಿರುವುದು, ಬೇರೊಂದು ವಾರ್ಡ್‌ಗೆ ಸ್ಥಳಾಂತರವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಈ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.
 ರಾಜ್ಯದ ಎಲ್ಲೆಡೆ ಈ ರೀತಿಯ ಲೋಪ ಕಂಡುಬಂದಿದ್ದು, ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮತದಾನದ ದಿನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹಲವೆಡೆ ಪ್ರತಿಭಟನೆಗಳೂ ನಡೆದಿದ್ದವು. ಈ ಬಗ್ಗೆ ಕ್ರಮಕ್ಕೆ ಆಯೋಗವನ್ನು ಆಗ್ರಹಿಸಿದ್ದವು.
ರಾಜಕೀಯ ಪ್ರಮುಖರ ಭೇಟಿ: ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ರಾಜಕೀಯ ಪಕ್ಷಗಳ ಪ್ರಮುಖರಿಗೆ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅವರು ಈ ವಿಷಯ ತಿಳಿಸಿದ್ದಾರೆ. ನಾಲ್ಕು ದಿನಗಳಲ್ಲಿ ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲಾಗುವುದು. ಹೆಸರು ಕೈಬಿಟ್ಟಿದ್ದು ಹೇಗೆ ಎಂಬುದಕ್ಕೆ ಸದ್ಯವೇ ಉತ್ತರ ಸಿಗಲಿದೆ ಎಂದು ಅವರು ಭರವಸೆ ನೀಡಿದರು. ಮತದಾನದ ಮರುದಿನವಾದ ಶುಕ್ರವಾರ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಅಭ್ಯರ್ಥಿಗಳು ಮತಪಟ್ಟಿಯಿಂದ ಹೆಸರು ಕಣ್ಮರೆಯಾದ ವಿಷಯವನ್ನೇ ಮುಂದಿಟ್ಟುಕೊಂಡು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದರು.
ಬಿಜೆಪಿ ಮನವಿ: ಮೊದಲು ಆಗಮಿಸಿದ ಬಿಜೆಪಿ ಮುಖಂಡ ಎಸ್.ಎನ್. ಚನ್ನಬಸಪ್ಪ, ಸೂಡಾ ಅಧ್ಯಕ್ಷ ದತ್ತಾತ್ರಿ, ಆಶ್ರಯ ಸಮಿತಿ ಅಧ್ಯಕ್ಷ ಅನಂತಶಾಸ್ತ್ರಿ ಹಾಗೂ ನಗರ ಘಟಕದ ಪ್ರಮುಖರು ವಿವಿಧ ವಾರ್ಡ್‌ಗಳಲ್ಲಿ ಆಗಿರುವ ಸಮಸ್ಯೆಯನ್ನು ಡಿಸಿ ಗಮನಕ್ಕೆ ತಂದರು. ತಹಸೀಲ್ದಾರರು ನೀಡಿದ ಅಧಿಕೃತ ಮತದಾರರ ಪಟ್ಟಿಗೂ, ಮತದಾನದಲ್ಲಿ ಬಳಸಿದ ಮತಗಟ್ಟೆ ಅಧಿಕಾರಿಯ ಪಟ್ಟಿಗೂ ಭಾರಿ ವ್ಯತ್ಯಾಸಗಳಿದ್ದವು. ಮತದಾರರ ಗುರುತುಪತ್ರ ಹೊಂದಿದ್ದ ಸಹಸ್ರಾರು ಜನರಿಗೆ ಮತದಾನದ ಹಕ್ಕು ನಿರಾಕರಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ. ವಾರ್ಡ್‌ಗಳ ವ್ಯಾಪ್ತಿಯನ್ನೂ ಬದಲಿಸಿರುವುದು ಸರಿ ಅಲ್ಲ ಎಂದು ಹೇಳಿದರು.
ಜೆಡಿಎಸ್ ಆಗ್ರಹ: 2007ರ ವಾರ್ಡ್ ವಿಂಗಡಣೆಯಂತೆಯೇ ಚುನಾವಣೆ ನಡೆಯಬೇಕಿತ್ತು. ಆದರೆ ವಾರ್ಡ್‌ಗಳನ್ನು ವಿಭಜನೆಗೊಳಿಸಲಾಗಿದೆ. ಮತಪಟ್ಟಿಯಲ್ಲಿರುವ ಲೋಪಗಳನ್ನು ಸರಿಪಡಿಸಲು ಚುನಾವಣೆಗಿಂತ ಮುಂಚೆಯೇ ತಹಸೀಲ್ದಾರರಿಗೆ ಮನವರಿಕೆ ಮಾಡಿಕೊಡಲಾಯಿತು. ಸರಿಪಡಿಸಲು ಅವರು ಅಸಹಾಯಕರಾಗಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.
 ಮತಪಟ್ಟಿ ಗೊಂದಲದಿಂದ ಪ್ರಜಾಪ್ರಭುತ್ವದ ಮೂಲ ಉದ್ದೇಶವೇ ಬುಡಮೇಲು ಆಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಾದರೂ ಈ ಗೊಂದಲಕ್ಕೆ ತೆರೆ ಎಳೆಯಬೇಕು. ಈಗ ಆಗಿರುವ ಲೋಪಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಂ.ಬಿ. ಶಿವಣ್ಣ, ತ್ಯಾಗರಾಜ್, ಮಂಜುನಾಥ್ ಇದ್ದರು.
ಕೆಜೆಪಿ ಒತ್ತಾಯ: ಮತದಾರರ ಪಟ್ಟಿಯಲ್ಲಿ ಆದ ಲೋಪದಿಂದ ಹಲವೆಡೆ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ಮತದಾನದ ಹಕ್ಕು ಚಲಾವಣೆ ಮಾಡಲು ಆಗದೇ ತೊಂದರೆಯಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ಜನತಾ ಪಕ್ಷ ಮಹಿಳಾ ಘಟಕದ ಪ್ರಮುಖರು ಶುಕ್ರವಾರ ಎಸ್ಪಿ ಕೌಶಲೇಂದ್ರ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.