ಷರೀಫರು ಜಾತಿ ಮೀರಿ ಬೆಳೆದ ಸಂತ
ಕಪ್ರ ವಾರ್ತೆ, ಚಿತ್ರದುರ್ಗ, ಮಾ.8
ತತ್ವ ಪದಕಾರ ಶಿಶುನಾಳ ಷರೀಫರು ಜಗತ್ತನ್ನು ಮುಟ್ಟಿದ್ದರಿಂದ ಅವರು ವಿಶ್ವ ಮಟ್ಟದ ಜಂಗಮ ಎಂದು ಬಸವ ಕೇಂದ್ರ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಪತ್ರಿಕಾ ಭವನದಲ್ಲಿ ವಿಶ್ವ ಪಥ ವೇದಿಕೆಯಿಂದ ನಡೆದ ಸಂತ ಶಿಶುನಾಳ ಷರೀಫ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶರಣರು, ಯಾರು ಜಗತ್ತನ್ನು ಮುಟ್ಟುತ್ತಾರೋ ಅವರು ವಿಶ್ವ ಜಂಗಮರಾಗುತ್ತಾರೆ. ಹಾಗೆಯೇ ಷರೀಫರು ವಿಶ್ವ ಜಂಗಮ ಆಗಿದ್ದಾರೆ ಎಂದರು.
ಜಾತಿ ರಹಿತ ಜಗತ್ತು: ಷರೀಫರು ಮುಸ್ಲಿಂ, ಅವರ ಗುರು ಗೋವಿಂದ ಭಟ್ಟರು ಬ್ರಾಹ್ಮಣರು. ಗುರು ಶಿಷ್ಯ ಪರಂಪರೆಯನ್ನು ಮುಂದುವರೆಸಿದ ಅವರು ಸಾಧನೆಗೆ ಜಾತಿ ಯಾವುದಾದರೇನು ಎಂದು ತೋರಿಸಿಕೊಟ್ಟಿದ್ದಾರೆ.
ಜಾತಿ ಮೀರಿ ಬೆಳೆದು ನಿಲ್ಲುವಂತಹ ಸಾಹಸ ಮಾಡಿದ್ದಾರೆ. ಜಾತಿ ರಹಿತ ಜಗತ್ತು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.
ಅನನ್ಯ ಶ್ರದ್ಧೆ: ಷರೀಫರು ಗುರುವನ್ನು ಮೀರಿಸುವಂತಹ ಅದ್ಭುತ ಮೇಧಾವಿ. ಗುರುವಿನ ಸಂದೇಶ, ತತ್ವ, ಭಕ್ತಿಯನ್ನು ಹೃದಯದಲ್ಲಿ ಇಟ್ಟುಕೊಂಡ ಅನನ್ಯ ಶ್ರದ್ಧೆ ಅವರನ್ನು ದೊಡ್ಡವರನ್ನಾಗಿ ಮಾಡಿತು. ಮುತ್ಸದ್ದಿಯಾಗಿ, ಬೌದ್ಧಿಕವಾಗಿ ಮುನ್ನಡೆದಿದ್ದರಿಂದ ಕೆಲವೇ ದಿನಗಳಲ್ಲಿ ಪ್ರಸಿದ್ಧಿ ಪಡೆದರು. ಷರೀಫರಿಂದ ತಾವು ಹೇಗೆ ಪ್ರಭಾವಿತರಾದೆವು ಎಂಬುದನ್ನು ಶ್ರೀಗಳು ವಿವರಿಸಿದರು.
ಬದುಕಿನ ಮೌಲ್ಯ: ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಮಾತನಾಡಿ, ಆಗಿನ ಕಾಲದಲ್ಲಿ ಈಗ ಇರುವ ಸಂವಹನ ವ್ಯವಸ್ಥೆ ಇರಲಿಲ್ಲ. ಆಗ ಸೂಫಿ ಸಂತರು, ತತ್ವ ಪದಕಾರರು ಊರಿಂದ ಊರಿಗೆ ತೆರಳಿ ಹಾಡು, ಭಜನೆ ಮೂಲಕ ಜನರಲ್ಲಿ ಬದುಕಿನ ಮೌಲ್ಯಗಳನ್ನು ತಲುಪಿಸುತ್ತಿದ್ದರು.
ಷರೀಫರ ಕಾರ್ಯಕ್ರಮ ಎಂದರೆ ಬೇರಾವುದೇ ತುರ್ತು ಕಾರ್ಯಕ್ರಮವಿದ್ದರೂ ಇಲ್ಲಿಂದ ತೆರಳುವ ಮನಸ್ಸಾಗುವುದಿಲ್ಲ. ಷರೀಫರು ಇಂದಿಗೂ ಅತ್ಯಂತ ಪ್ರಸ್ತುತ. ಇಂತಹ ಕಾರ್ಯಕ್ರಮವನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಂಡು ನಾಡಿನ ಖ್ಯಾತ ಹಾಡುಗಾರರಿಂದ ಷರೀಫರ ಕಾರ್ಯಕ್ರಮ ಆಯೋಜಿಸುವಂತಾದರೆ ಜಿಲ್ಲಾಡಳಿತದ ಸಹಕಾರ ಇರುತ್ತದೆ ಎಂದು ಹೇಳಿದರು.
ಶರಣ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಂ. ವೀರೇಶ್ ಮಾತನಾಡಿ, ಶಿಶುನಾಳ ಷರೀಫರು ಹಿಂದು ಮುಸ್ಲಿಂ ಭಾವೈಕ್ಯತೆಯ ಸಂಕೇತ. ಉತ್ತರ ಕರ್ನಾಟಕದ ಜನರಿಗೆ ತತ್ವಪದ, ಭಜನೆ ಮೂಲಕ ಅರಿವು ಮೂಡಿಸಿದವರು. ಅವರ ಕಾಲದಲ್ಲಿ ಹಿಂದು ಮುಸ್ಲಿಂ ಸಾಮರಸ್ಯ ಚೆನ್ನಾಗಿತ್ತು. ಕಡಿಮೆ ಶಿಕ್ಷಣ ಪಡೆದರೂ ಸಂಸ್ಕಾರವಂತ ತತ್ವಜ್ಞಾನಿ ಎಂದು ತಿಳಿಸಿದರು.
ಶ್ವಾಸ ಗುರು ವಚನಾನಂದ ಸ್ವಾಮೀಜಿ, ಷರೀಫರು ದೇಶ, ಜನಾಂಗ, ಧರ್ಮಕ್ಕೆ ಸೀಮಿತವಾದವರಲ್ಲ. ಬುದ್ಧ, ಬಸವ ಮುಂತಾದವರನ್ನು ನೆನಪಿಸಿಕೊಳ್ಳುವಂತೆ ಷರೀಫರನ್ನೂ ನೆನಪಿಸಿಕೊಳ್ಳುತ್ತೇವೆ.
ಸರ್ವಸಂಗ ತ್ಯಾಗಿಗಳಾಗಿ ಸ್ವಾರ್ಥಿಗಳಾಗದೆ ಸಮಾಜಕ್ಕೆ ಸೇವೆಗೈದ ಇಂಥವರೆಲ್ಲ ಜ್ಯೋತಿಯಂತೆ ಬೆಳಗಿದವರು ಎಂದು ಹೇಳಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.
ಬಸವರಾಜ ಮುದನೂರು ಸ್ವಾಗತಿಸಿದರು. ಚಳ್ಳಕೆರೆ ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿನೇಶ ಗೌಡರ ಕಾರ್ಯಕ್ರಮ ನಿರೂಪಿಸಿದರು. ಬಾಪೂ ಕಲಾ ತಂಡದವರಿಂದ ಶರೀಫರ ಹಾಡುಗಳ ಕಾರ್ಯಕ್ರಮ ಆಯೋಜಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

