ಅಗ್ನಿ ಆಕಸ್ಮಿಕ: 7 ಜಾನುವಾರು ಸಾವು, ರು. 50ಲಕ್ಷಕ್ಕೂ ಹೆಚ್ಚು ನಷ್ಟ
ಸಾಗರ: ತಾಲೂಕಿನ ಓತಿಗೋಡು ಗ್ರಾಮದಲ್ಲಿ ಶನಿವಾರ ರಾತ್ರಿ 8ಗಂಟೆ ಸುಮಾರಿಗೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮೂರ್ನಾಲ್ಕು ಮನೆಗಳ ಕೊಟ್ಟಿಗೆಗಳಿಗೆ ಭಾರಿ ನಷ್ಟ ಉಂಟಾಗಿದೆ.
ಮೊದಲಿಗೆ ಗ್ರಾಮದ ನಾರಾಯಣಪ್ಪ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಹೊತ್ತಿನಲ್ಲಿ ಅಕ್ಕಪಕ್ಕದ ಮನೆಯ ಕೊಟ್ಟಿಗೆಗಳಿಗೂ ವ್ಯಾಪಿಸಿತು ಎನ್ನಲಾಗಿದೆ.
ಬೆಂಕಿಯ ಕೆನ್ನಾಲಿಗೆಗಳು ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು, ಒಣಹುಲ್ಲು, ಸುಮಾರು 60 ಚೀಲದಷ್ಟು ಭತ್ತ, ಅಡಕೆ (ಸಿಪ್ಪೆಗೋಟು)ಗಳನ್ನು ಆಹುತಿ ತೆಗೆದುಕೊಂಡಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಎರಡು ವಾಹನಗಳು ಸಮರೋಪಾದಿಯಲ್ಲಿ ಕೆಲಸ ಮಾಡಿ ಬೆಂಕಿಯನ್ನು ತಹಬಂದಿಗೆ ತರಲು ಯಶಸ್ವಿಯಾದವು.
ಬೆಂಕಿ ಅನಾಹುತದಲ್ಲಿ ನಾರಾಯಣಪ್ಪ, ಹಾಗೂ ಲಕ್ಷ್ಮೀನಾರಾಯಣ ಎಂಬುವವರ ಕೊಟ್ಟಿಗೆಗಳು ಸಂಪೂರ್ಣ ಭಸ್ಮವಾಗಿದ್ದು ರು. 50ಲಕ್ಷಗಳಿಗೂ ಹೆಚ್ಚು ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.
ಅಗ್ನಿ ಅನಾಹುತದಲ್ಲಿ ಸುಮಾರು ಏಳಕ್ಕೂ ಹೆಚ್ಚು ಜಾನುವಾರುಗಳು ಅಸುನೀಗಿವೆ. ಅಲ್ಲದೆ ನಾರಾಯಣಪ್ಪ ಎಂಬುವವರಿಗೆ ಸುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಸಾಗರದ ಆಸ್ಪತ್ರೆಗೆ ಕರೆತರಲಾಗಿದೆ ಸಾಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸುತ್ತಿದ್ದಾರೆ.
ಸಿಲಿಂಡರ್ ವಶ
ಭದ್ರಾವತಿ: ಆಟೋದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಅಡುಗೆ ಅನಿಲದ ಸಿಲಿಂಡರ್ಗಳನ್ನು ಹಾಗೂ ಆಟೋರಿಕ್ಷಾವನ್ನು ನ್ಯೂಟೌನ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ 8 ಗಂಟೆ ಸಮಯದಲ್ಲಿ ಆರೋಪಿ ಭದ್ರಾವತಿಯ ಚಂದ್ರಪ್ಪ ಎಂಬವನು ಆಟೋರಿಕ್ಷಾದಲ್ಲಿ ಅಡುಗೆ ಅನಿಲದ ಸಿಲಿಂಡರ್ ಸಾಗಿಸುವ ಬಗ್ಗೆ ಖಚಿತ ವರ್ತಮಾನ ದೊರೆತ ಮೇರೆಗೆ ನ್ಯೂಟೌನ್ ಸಬ್ ಇನ್ಸ್ಪೆಕ್ಟರ್ ಹಿಂಬಾಲಿಸಿ ಶಿವಮೊಗ್ಗ-ಭದ್ರಾವತಿ ನಡುವೆ ಇರುವ ಶಿವಮೊಗ್ಗ ಹಾಲು ಒಕ್ಕೂಟದ ಬಳಿ ವಾಹನವನ್ನು ತಡೆದು ತಪಾಸಣೆ ಮಾಡಿದ್ದಾರೆ.
ಸುಮಾರು 5,000 ರು. ಬೆಲೆಬಾಳುವ ಮೂರು ಅಡುಗೆ ಅನಿಲ ತುಂಬಿದ ಸಿಲಿಂಡರ್ಗಳು ಪತ್ತೆಯಾಗಿವೆ.
ಸಿಲಿಂಡರ್ಗಳನ್ನು ಹಾಗೂ ಸುಮಾರು 50,000 ರು. ಮೌಲ್ಯದ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ಕಾಲುವೆಯಲ್ಲಿ ಬಿದ್ದು ಸಾವು
ಉಜ್ಜಿನೀಪುರದ ಮಾರಿಯಮ್ಮ ದೇವಸ್ಥಾನದ ಪಕ್ಕ ವಾಸಿಸುವ ಉತ್ತರೇಶಿ ಎಂಬವರು 7ರಂದು ಬಹಿರ್ದೆಸೆಗೆಂದು ಕಾಲುವೆ ಬಳಿ ಹೋಗಿ ಅದರಲ್ಲಿ ಬಿದ್ದು ಮರಣ ಹೊಂದಿರುತ್ತಾರೆ.
ಈ ಬಗ್ಗೆ ಪರಶುರಾಮ ಎಂಬವರು ಕಾಗದನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. 8ರಂದು ಕಾಲುವೆಯಲ್ಲಿ ಶವವನ್ನು ನೋಡಿದ ಸಾರ್ವಜನಿಕರು ಅದನ್ನು ಮೇಲೆತ್ತಿದಾಗ ಅದು ಉತ್ತರೇಶಿದ್ದೇ ಶವ ಎಂದು ಪರಶುರಾಮ ಗುರುತಿಸಿದ್ದಾರೆ.
ಜೂಜಾಟ: ಬಂಧನ
ಅಂತರಗಂಗೆ ಗ್ರಾಮದಲ್ಲಿ ಚನ್ನಬಸಪ್ಪ ಎಂಬವರ ತೋಟದ ಹತ್ತಿರ ಅಂದರ್ ಬಾಹರ್ ಇಸ್ಪೀಟ್ ಜೂಜಾಟದಲ್ಲಿ ನಿರತರಾಗಿದ್ದ ಅಂತರಗಂಗೆ ಗ್ರಾಮದ ಗೋಪಾಲ (43), ವೆಂಕಟೇಶ (28), ಮೂರ್ತಿ (32), ಸತೀಶ (29) ಮತ್ತು ಅಂಜನಕುಮಾರ ಯಾನೆ ಅಂಜಿ (35) ನಾಲ್ವರನ್ನೂ ಬಂಧಿಸಿ ಆರೋಪಿಗಳಿಂದ 2,740 ರು. ನಗದು ಹಾಗೂ ಆಟಕ್ಕೆ ಬಳಸಿದ್ದ ಇಸ್ಪೀಟ್ ಎಲೆಗಳನ್ನು ಭದ್ರಾವತಿ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿದ್ಯಾರ್ಥಿ ಸಾವು
ಸಾಗರ: ಇಲ್ಲಿನ ಜೋಗ ರಸ್ತೆಯ ಎಲ್.ಬಿ. ಕಾಲೇಜಿನ ಮಹಿಳಾ ಹಾಸ್ಟೆಲ್ ಸಮೀಪ ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಹಲಸಿನಘಟ್ಟದ ಪುರುಷೋತ್ತಮ ಎಂಬವರ ಪುತ್ರ, ಅಂತಿಮ ಬಿ.ಕಾಂ. ವಿದ್ಯಾರ್ಥಿ ಕಿರಣ್ (21) ಕಾಲೇಜಿನಿಂದ ಸಾಗರಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೆಕ್ಬೌನ್ಸ್ ಬಂಧನ, ಬಿಡುಗಡೆ
ಕಪ್ರ ವಾರ್ತೆ, ಶಿವಮೊಗ್ಗ, ಮಾ.9ಚೆಕ್ ಬೌನ್ಸ್ ಕರಣಕ್ಕೆ ಸಂಬಂಧಿಸಿದಂತೆ ಜನಸ್ಪಂದನ ವೇದಿಕೆ ರಾಜ್ಯಾಧ್ಯಕ್ಷ ಬಿ.ಆರ್. ಮನೋಹರ ಗೌಡ ಅವರನ್ನು ಶನಿವಾರ ದೊಡ್ಡಪೇಟೆ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.
ಈ ಪ್ರಕರಣಕ್ಕೆ, ಮನೋಹರಗೌಡ ಅವರನ್ನು ದೊಡ್ಡಪೇಟೆ ಪೊಲೀಸರು ಶನಿವಾರ ಬಂಧಿಸಿ, ಜೆಎಂಎಫ್ಸಿ ನ್ಯಾಯಾಲಯ ನ್ಯಾಯಾಧಿಶರಾದ ವಿಜಯಲಕ್ಷ್ಮೀ ಎದುರು ಹಾಜರುಪಡಿಸಿದರು. ಈ ವೇಳೆ ಮನೋಹರಗೌಡ ಅವರು ಚೆಕ್ಬೌನ್ಸ್ನ ಮೊತ್ತವನ್ನು ಪಾವತಿ ಮಾಡಲು ಸಿದ್ದನಿದ್ದೇನೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. 67 ಸಾವಿರ ರುಪಾಯಿಗಳನ್ನು ಕಟ್ಟಿದ ಅವರು ಉಳಿದ ಮೂರು ಸಾವಿರ ರುಪಾಯಿ ನ್ಯಾಯಾಲಯಕ್ಕೆ ಮಾ.11 ರಂದು ಪಾವತಿ ಮಾಡುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅವರನ್ನು ಬಂಧಮುಕ್ತಗೊಳಿಸಿದರು.
2002ರಲ್ಲಿ ಸೊಸೈಟಿಯೊಂದರಿಂದ ಮನೋಹರ ಗೌಡ 45 ಸಾವಿರ ರುಪಾಯಿ ಸಾಲ ಪಡೆದಿದ್ದರು. ಆದರೆ, ಅದನ್ನು ಮರುಪಾವತಿ ಮಾಡಿರಲಿಲ್ಲ. ಅಲ್ಲದೇ, ನೋಟಿಸ್ ಜಾರಿ ಮಾಡಿದ ನಂತರ ಅವರು ಚೆಕ್ ನೀಡಿದ್ದರು. ಚೆಕ್ ಬೌನ್ಸ್ ಆಗಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಕೂಡಲೇ 70 ಸಾವಿರ ರುಪಾಯಿ ಹಣ ಪಾವತಿ ಮಾಡದಿದ್ದರೆ ಆರು ತಿಂಗಳು ಜೈಲು ಶಿಕ್ಷೆಗೆ ಒಳಪಡಿಸಬೇಕೆಂದು ನ್ಯಾಯಾಲಯ ಆದೇಶ ನೀಡಿತ್ತು. ಆದ್ದರಿಂದ ದೊಡ್ಡಪೇಟೆ ಪೊಲೀಸರು ಅವರನ್ನು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

