ಶಿವಮೊಗ್ಗ

ಅತಿ ಅಪರೂಪದ ಬಿಳಿ ಶಿವಲಿಂಗ

Published On :

ಕ.ಪ್ರ.ವಾರ್ತೆ,ಜೋಗ್‌ಫಾಲ್ಸ್, ಮಾ.9
 ಸುತ್ತಲೂ ದಟ್ಟವಾದ ಪಶ್ಚಿಮ ಘಟ್ಟ, ಸದಾ ಹರಿಯುತ್ತಲಿರುವ ನೀರು, ಮನಸ್ಸಿಗೆ ಮುದ ನೀಡುವ ಹಕ್ಕಿಗಳ ಕಲರವ, ಜಗದ್ವಿಖ್ಯಾತ ಜೋಗ ಜಲಪಾತ ನೋಡಲು ಬರುವ ಪ್ರವಾಸಿಗರಿಗೆ ಅಲ್ಲಿಂದ ಕೇವಲ 2.5 ಕಿ.ಮೀ ಸಾಗಿದರೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಕಚೇರಿ ದೊರೆಯುತ್ತದೆ. ಕಚೇರಿಯಲ್ಲಿ ಅನುಮತಿ ಪಡೆದುಕೊಂಡು ಅಲ್ಲಿಂದ ಹೊರಟರೆ 8 ಕಿ.ಮೀ. ದೂರದಲ್ಲಿ ಸಿಗುವುದೇ ಗುಂಡಿಬೈಲಿನ ಪಂಚಲಿಂಗೇಶ್ವರ ದೇವಸ್ಥಾನ.
  ಇದರ ನಡುವೆ ಪ್ರಕೃತಿಯ ರಮಣೀಯ ವೈಭವ ಇಲ್ಲೇ ಉಳಿದುಕೊಂಡರೆ ಎಷ್ಟು ಚೆನ್ನ ಎಂಬ ಭಾವವನ್ನು ಉಂಟು ಮಾಡುವುದು ಸುಳ್ಳಲ್ಲ. ದಾರಿಯಲ್ಲಿ ಸಾಗುತ್ತಿರಬೇಕಾದರೆ ನಡುವೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಶರಾವತಿ ವಿದ್ಯುದಾಗಾರದ ನೋಟವೂ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.
 ಮಳೆಗಾಲದಲ್ಲಿ ಇಲ್ಲಿಗೆ ಆಗಮಿಸಿದರಂತೂ ಜಲಪಾತಗಳ ಸರಮಾಲೆ ನೋಡುವುದೇ ಚೆಂದ. ಆದರೆ ವೈಶಿಷ್ಟ್ಯವಿರುವುದು ಇಲ್ಲೇ ಇಲ್ಲಿರುವ ಶಿವಲಿಂಗ ರಾಜ್ಯದ ಎಲ್ಲ ಕಡೆಗಳಲ್ಲಿರುವಂತೆ ಕಪ್ಪು ಬಣ್ಣದ್ದಲ್ಲ. ರಾಜ್ಯದಲ್ಲಿಯೇ ಅತಿ ಅಪರೂಪವಾದ ಹಾಲಿನಂತಹ ಶುಭ್ರ ಬಿಳಿ ಬಣ್ಣದ ಶಿವಲಿಂಗ ದಿನದಿಂದ ದಿನಕ್ಕೆ ಸಾವಿರಾರು  ಭಕ್ತರನ್ನು ಆಕರ್ಷಿಸುತ್ತಿದೆ.
4 ಶತಮಾನಗಳ ಇತಿಹಾಸ: ನಾಲ್ಕು ಶತಮಾನ ಹಳೆಯದಾದ ಈ ಶಿವಲಿಂಗ ಕಾನೂನುಕೋಟೆ ಮೆಣಸಿನರಾಣಿ ಕಾಲದಲ್ಲಿ ಪ್ರತಿಷ್ಠಾಪಿಸಲಾಗಿತ್ತೆಂದು ತಿಳಿದು ಬಂದಿದೆ. ತಳಕಳಲೆ ಅಣೆಕಟ್ಟು ನಿರ್ಮಿಸಿದಾಗ ಇದೂ ಕೂಡಾ ಮುಳುಗಡೆಗೊಂಡಿತ್ತು. ನಂತರ ಗುಂಡಿಬೈಲು ಎಂಬಲ್ಲಿ ಅರಣ್ಯ ಇಲಾಖೆ ಅತಿಥಿ ಗೃಹದಲ್ಲಿ ಶಿವಲಿಂಗವನ್ನು ಇಡಲಾಗಿತ್ತು. ಪೂಜೆ- ಪುನಸ್ಕಾರ ನಡೆಯದ್ದಿದುದರಿಂದ ಕಾರ್ಗಲ್‌ನ ಚೌಡೇಶ್ವರಿ ದೇವಾಲಯದ ಸಂಸ್ಥಾಪಕ ದಿ.ಸುಭಾಷ್ ಮಹಾಲೆಯವರು ಚೌಡೇಶ್ವರಿ ದೇವಾಲಯದ ಸಂಕೀರ್ಣದಲ್ಲಿ ಶಿವಾಲಯ ನಿರ್ಮಿಸುವ ಇಚ್ಚೆಯಿಂದ ಗ್ರಾಮಸ್ಥರಲ್ಲಿ ಶಿವಲಿಂಗವನ್ನು ನೀಡುವಂತೆ ಮನವಿ ಮಾಡಿದರು.  
 ಆದರೆ ಇದಕ್ಕೊಪ್ಪದ ಗ್ರಾಮಸ್ಥರು ನಂತರ ಗುಂಡಿಬೈಲಿನಲ್ಲಿಯೇ ದೇವಾಲಯ ನಿರ್ಮಿಸಿ, ಲಿಂಗವನ್ನು ಪ್ರತಿಷ್ಠಾಪಿಸಿ ಸಮಿತಿ ರಚಿಸಿಕೊಂಡು ನಿತ್ಯವೂ ಪೂಜೆ ಸಲ್ಲಿಸುತ್ತಿದ್ದಾರೆ.
 ಪ್ರತಿ ಶಿವರಾತ್ರಿಯಂದು ಇಲ್ಲಿ ವಿಶೇಶ ಪೂಜೆ ಸಲ್ಲಿಸಲಾಗುತ್ತಿದ್ದು, ಈ ಬಾರಿಯೂ ಮಾ. 10 ರ ಭಾನುವಾರ ಶಿವರಾತ್ರಿಯಂದು ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
 ಸಂಜೆ ಪಂಚಲಿಂಗೇಶ್ವರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಏರ್ಪಡಿಸಲಾಗಿದ್ದು, ಭಕ್ತರು ಭಾಗವಹಿಸಿ, ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.