ಶಿವಮೊಗ್ಗ

ಪರ್ಯಾಯ ಇಂಧನ ಅನುಷ್ಠಾನಕ್ಕೆ ಚಂತನೆ

Published On :

ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.14
ಗ್ರಾಮೀಣ ಭಾಗದಲ್ಲಿ ಗೋಬರ್‌ಗ್ಯಾಸ್ ಪದ್ಧತಿ ಇರುವಂತೆ ನಗರ ಭಾಗದಲ್ಲಿನ ದೊಡ್ಡ ದೊಡ್ಡ ಹೊಟೇಲ್ ತ್ಯಾಜ್ಯ, ಕಲ್ಯಾಣ ಮಂಟಪಗಳ ತ್ಯಾಜ್ಯಗಳನ್ನು ಬಳಸಿ ಜೈವಿಕ ಅನಿಲ ಪದ್ಧತಿಯ ಪರ್ಯಾಯ ಇಂಧನ ಕ್ರಮವನ್ನು ಅನುಷ್ಠಾನಗೊಳಿಸುವ ಸಂಬಂಧ ಪಶ್ಚಿಮಘಟ್ಟ ಕಾರ್ಯಪಡೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿದೆ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 15 ಸಾವಿರ ಇಂತಹ ಘಟಕಗಳನ್ನು ಅನುಷ್ಠಾಗೊಳಿಸಲು ಸಿದ್ಧತೆ  ನಡೆಸಲಾಗಿದೆ. ಈ ಪೈಕಿ ಸುಮಾರು 4 ಸಾವಿರಕ್ಕೂ ಹೆಚ್ಚು ಘಟಕಗಳನ್ನು ಶಿವಮೊಗ್ಗ ಸೇರಿದಂತೆ ವಿವಿಧ ಮಲೆನಾಡಿನ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಹೊಸನಗರ ತಾಲೂಕಿನ ಹನಿಯಾ ಗ್ರಾಮವನ್ನು ಸಂಪೂರ್ಣ ಸೌರ ಗ್ರಾಮವಾಗಿ ಪರಿವರ್ತಿಸಲಾಗಿದೆ. ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಸಹಜ ಪ್ರಕೃತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಚಿಸಲಾದ ಪಶ್ಚಿಮಘಟ್ಟ  ಕಾರ್ಯಪಡೆಯ ಉದ್ದೇಶವನ್ನು ಸಮರ್ಪಕವಾಗಿ ನಿರ್ವಹಿಸಿದ ತೃಪ್ತಿ ತಮಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಅರಣ್ಯ ಇಲಾಖೆ ಮೂಲಕ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಅಲ್ಲದೆ, ಪಶ್ಚಿಮಘಟ್ಟಗಳ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತಂತೆ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಮಾಡಲಾಗಿದ್ದು  ಅನುಷ್ಠಾನದ ಹಂತದಲ್ಲಿದೆ ಎಂದರು.
ಸಹಭಾಗಿತ್ವ ಮುಖ್ಯ: ಪ್ರಮುಖವಾಗಿ ಪಶ್ಚಿಮಘಟ್ಟ ಪ್ರದೇಶದ ಸಂರಕ್ಷಣೆ ಕುರಿತಂತೆ ಕಾರ್ಯಪಡೆ ಕೆಲಸ ಮಾಡುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಇದೆ. ಈ ನಿಟ್ಟಿನಲ್ಲಿ ಹಸಿರು ಸಮೃದ್ಧಿಗ್ರಾಮ, ಕರಾವಳಿ ಹಸಿರು ಕವಚ, ದೇವರಕಾಡು  ಸಂರಕ್ಷಣೆ, ಬದಲಿ ಇಂಧನಮೂಲ ಅಭಿವೃದ್ಧಿ, ಔಷಧಿ ಗಿಡಮೂಲಿಕೆ ಸಂರಕ್ಷಣೆ, ಜೇನು ಸಂರಕ್ಷಣೆ ಮುಂತಾದ  ಯೋಜನೆಗಳನ್ನು ಅರಣ್ಯ ಇಲಾಖೆ ಮೂಲಕ ಕಾರ್ಯರೂಪಕ್ಕೆ ತರಲಾಗಿದೆ. ಈ ವಿಷಯದಲ್ಲಿ ಸಾರ್ವಜನಿಕರ ಸಹಭಾಗಿತ್ವ ಮುಖ್ಯವಾಗಿತ್ತು ಎಂದು ಆಶೀಸರ ತಿಳಿಸಿದರು.
ಸಹ್ಯಾದ್ರಿಯ ಸಸ್ಯ ಸಂಕುಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹಲವಾರು ಸಸ್ಯೋದ್ಯಾನಗಳ ವನಗಳನ್ನು ನಿರ್ಮಿಸಲಾಗಿದೆ. ಈ ಕುರಿತಾಗಿ ವ್ಯಾಪಕ ಜನಶಿಕ್ಷಣ ನೀಡಲಾಗಿದೆ. ನದಿಮೂಲ ಸಂರಕ್ಷಣೆ ಅಭಿಯಾನ, ಅರಣ್ಯ  ಸಂರಕ್ಷಣೆ ಅಭಿಯಾನ, ಹಸಿರು ಆರೋಗ್ಯ ಶಿಬಿರಗಳು ಮುಂತಾದ ಯೋಜನೆಗಳನ್ನು ಗ್ರಾಮ ಅರಣ್ಯ ಸಮಿತಿಗಳ ಮೂಲಕ ಜಾರಿಗೊಳಿಸಲಾಗಿದೆ ಎಂದರು.
ಸಕಾರಾತ್ಮಕ ಹೆಜ್ಜೆ: 2008ರಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದ ಪಶ್ಚಿಮಘಟ್ಟ ಕಾರ್ಯಪಡೆ ಕಳೆದ ನಾಲ್ಕು ವರ್ಷಗಳಲ್ಲಿ ಪಶ್ಚಿಮಘಟ್ಟ ಅರಣ್ಯ ಪ್ರದೇಶವನ್ನು ವ್ಯವಸ್ಥಿತವಾಗಿ ಸಂರಕ್ಷಿಸಿ, ಅಭಿವೃದ್ಧಿಪಡಿಸುವಲ್ಲಿ ಸಕಾರಾತ್ಮಕ ಹೆಜ್ಜೆಗಳನ್ನಿಟ್ಟಿದೆ ಎಂದು ಆಶೀಸರ ತಿಳಿಸಿದರು.
ಪಶ್ಚಿಮಘಟ್ಟ  ಕಾರ್ಯಪಡೆ ಸದಸ್ಯ ಪ್ರೊ. ಕುಮಾರಸ್ವಾಮಿ, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಕಟ್ಟಿಗೆ ರಹಿರ ಆಲೆಮನೆ ನಿರ್ಮಿಸಿರುವ ರೈತ ದರೋಡೆಕಾನು ಮಂಜುನಾಥ್ ದಂಪತಿಯನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.