ಶಿವಮೊಗ್ಗ

ಚಕ್ರಾನಗರಕ್ಕೆ ಹರಾಜು ತಂದ ಸಂಚಕಾರ

Published On :

ಕ.ಪ್ರ. ವಾರ್ತೆ, ಹೊಸನಗರ, ಮಾ.18
ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ ಚಕ್ರಾನಗರದಲ್ಲಿ ಹರಾಜು ಮಾಡಿದ್ದು ಕೇವಲ ವಸತಿ ಕಟ್ಟಡಗಳನ್ನು ಮಾತ್ರ. ಆದರೆ ಶೌಚಾಲಯದ ಗುಂಡಿ, ರಸ್ತೆ ಪಿಚ್ಚಿಂಗ್, ಕೊನೆಗೆ ಸಾರ್ವಜನಿಕ ತಂಗುದಾಣವನ್ನು ಬಿಡಲಿಲ್ಲ. ಹರಾಜು ನೆಪದಲ್ಲಿ ಎಲ್ಲವನ್ನು ದೋಚಿ ಇಡೀ ಚಕ್ರಾನಗರವನ್ನೆ ಧ್ವಂಸಗೊಳಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಚಕ್ರಾ-ಸಾವೇಹಕ್ಲು ಡ್ಯಾಂ ನಿರ್ಮಾಣ ಕಾರ್ಯಗತ ಸಂದರ್ಭದಲ್ಲಿ ಸುಂದರವಾಗಿದ್ದ ಚಕ್ರಾನಗರ ವಸಾಹತು ಪ್ರದೇಶದಲ್ಲಿ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು, ಪ್ರಸ್ತುತ ಅಂತಿಮ ಹಂತಕ್ಕೆ ಬಂದಿದೆ. ಹರಾಜಿಗೆ ಒಳಪಡದ ಲಕ್ಷಾಂತರ ರು. ಸಾಮಗ್ರಿಗಳನ್ನು ತೆರವುಗೊಳಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಏನಿದು ಪ್ರಕರಣ?: ಕರ್ನಾಟಕ ವಿದ್ಯುತ್ ನಿಗಮದವರು ಚಕ್ರಾ ಮತ್ತು ಸಾವೇಹಕ್ಲು ಡ್ಯಾಂ ನಿರ್ಮಾಣ ಸಂದರ್ಭದಲ್ಲಿ ಮನೆ, ಕಚೇರಿ, ನಾಗರೀಕ ಸೌಲಭ್ಯಗಳಿಗೆ ಪೂರಕವಾಗಿ ಸುಮಾರು 700ಕ್ಕು ಹೆಚ್ಚು ಕಟ್ಟಡಗಳ ವಸಾಹತು ನಿರ್ಮಿಸಿತ್ತು. ಯೋಜನೆ ಅಂತಿಮಗೊಳ್ಳುತ್ತಲೆ ಸಾಕಷ್ಟು ಕಟ್ಟಡಗಳನ್ನು ಕೆಪಿಸಿ ತೆರವುಗೊಳಿಸಿತ್ತು. ಯೋಜನೆ ಪೂರ್ಣಗೊಂಡ ಮೇಲೆ 252 ಕಟ್ಟಡಗಳನ್ನು ಹೊಂದಿದ್ದ ಈ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿತ್ತು.
ಜನರ ವಾಸದಿಂದ ದೂರವಾಗಿ ನೆನೆಗುದಿಗೆ ಬಿದ್ದಿದ್ದ ಕಟ್ಟಡಗಳನ್ನು ತೆರವುಗೊಳಿಸುವ ಕಾರಣದಿಂದ ಅರಣ್ಯ ಇಲಾಖೆ ಎರಡು ಹಂತವಾಗಿ 227 ಕಟ್ಟಡಗಳನ್ನು ಹರಾಜು ನೀಡಿತು. ಈಗಾಗಲೇ ಒಂದು ಹಂತದಲ್ಲಿ ತೆರವು ಕಾರ್ಯ ನವಂಬರ್ 2011ರಲ್ಲಿ ನಡೆದಿತ್ತು. ಎರಡನೆ ಹಂತದ ತೆರವು ಕಾರ್ಯ ಅಂತಿಮ ಹಂತದಲ್ಲಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಸ್ಥಳೀಯರ ಆಕ್ರೋಶ: ಮೊದಲ ಹಂತದಲ್ಲಿ 9.04 ಲಕ್ಷ, 2ನೇ ಹಂತದಲ್ಲಿ ಒಟ್ಟು 7.91ಕ್ಕೆ ಹರಾಜು ಮಾಡಲಾಗಿದೆ. ಈ ಸಂದರ್ಭದಲ್ಲಿ ಹರಾಜಿಗೆ ಒಳಪಡದ ತಂಗುನಿಲ್ದಾಣವನ್ನು ಪೂರ್ತಿಯಾಗಿ ತೆರವು ಗೊಳಿಸಿರುವುದು ಮತ್ತು 6 ಟೀಚರ್ಸ್‌ಕಟ್ಟಡಗಳ ಛಾವಣಿ ಮತ್ತು ವಿವಿಧ ಸಾಮಗ್ರಿಗಳನ್ನು ಕೊಂಡೊಯ್ದಿರುವುದು ಮತ್ತು ಶೌಚಾಲಯ ಗುಂಡಿ, ರಸ್ತೆ ಪಿಚ್ಚಿಂಗ್, ಡ್ರೈನೇಜ್ ಬಗೆದು ಕಲ್ಲು ಚಪ್ಪಡಿಗಳು, ಬೋಡ್ರಸ್‌ಗಳನ್ನು ಸಾಗಿಸಿರುವ ಆರೋಪ ಕೇಳಿ ಬರುತ್ತಿದ್ದು, ಸಾಕಷ್ಟು ಅನುಮಾನ ಮಾತ್ರವಲ್ಲ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ನಿಲ್ದಾಣ ಧ್ವಂಸ: ಹರಾಜಿನಲ್ಲಿ ಬಸ್ ತಂಗುದಾಣ ಕೈಬಿಡಲಾಗಿದ್ದರೂ ಕಟ್ಟಡ ಸಂಪೂರ್ಣವಾಗಿ ಧ್ವಂಸಗೊಳಿಸಿ ಅಲ್ಲಿಯ ಪೂರ್ತಿ ಸಾಮಗ್ರಿಗಳನ್ನು ಸಾಗಿಲಾಗಿದೆ. ಇದರಿಂದ ಕೆಪಿಸಿ ವಸಾಹತು ಸುತ್ತಮುತ್ತಲಿನ ಪ್ರದೇಶದ ಜನರು ವ್ಯವಸ್ಥಿತ ಬಸ್ ತಂಗುದಾಣವನ್ನೇ ಕಳೆದುಕೊಂಡಂತಾಗಿದೆ.
ನಿರ್ವಹಣೆ ಇಲ್ಲ: ಕಟ್ಟಡವನ್ನು ತೆರವುಗೊಳಿಸದ ಮೇಲೆ ಆ ಪ್ರದೇಶವನ್ನು ಸಮತಟ್ಟು ಮಾಡಬೇಕೆಂಬ ನಿಮಯವಿದ್ದರೂ ಅದನ್ನು ಪಾಲಿಸಲಾಗಿಲ್ಲ. ಕೆಲವಡೆ ಮನೆ ಕಟ್ಟಡ ತೆರವುಗೊಳಿಸುವಾಗ ಹೊಂಡ ಗುಂಡಿಗಳಾಗಿದ್ದು ಹಾಗೆಯೇ ಬಿಡಲಾಗಿದೆ. ಅಲ್ಲದೆ ನಿಯಮ ಉಲ್ಲಂಘಿಸಿ ಶೌಚಾಲಯ ಗುಂಡಿಗಳನ್ನು ಅಗೆದು ಅಲ್ಲಿದ್ದ ಕಲ್ಲುಗಳು, ಚಪ್ಪಡಿಗಳನ್ನು ದೋಚಲಾಗಿದ್ದು ಒಂದಡೆಯಾದರೆ, ಮತ್ತೊಂದಡೆ ಗುಂಡಿಗಳನ್ನು ಹಾಗೆ ಬಿಟ್ಟಿದ್ದು ಅಪಾಯಕ್ಕೆ ಎಡೆಮಾಡಿ ಕೊಡಲಾಗಿದೆ.
ಒಟ್ಟಾರೆ ಕಟ್ಟಡ ತೆರವುಗೊಳಿಸುವ ಸಂದರ್ಭದಲ್ಲಿ ಇನ್ನಿತರಭಾಗದಲ್ಲಿದ್ದ ಬೆಲೆಬಾಳುವ ಸಾಮಗ್ರಿಗಳು ಕಣ್ಮರೆಯಾಗಿವೆ. ಅಲ್ಲದೆ ವಸಾಹತು ಖಾಲಿಯಾದ ಮೇಲೆ ಹಾಳುಕೊಂಪೆಯಂತಾಗಿದ್ದ ಚಕ್ರಾನಗರವನ್ನು ಇನ್ನಷ್ಟು ಹಾಳು ಮಾಡಲಾಗಿದೆ ಎಂಬುದು ಅಸಮದಾನಕ್ಕೆ ಎಡೆಮಾಡಿಕೊಟ್ಟಿದೆ.
ನಾಟಾ ವಹಿವಾಟು: ಕಟ್ಟಡಗಳಲ್ಲಿದ್ದ ಮರದ ನಾಟಗಳ ಪರ್ಮಿಟ್ ಬಳಸಿ ಅಕ್ರಮ ನಾಟಾ ವಹಿವಾಟು ನಡೆಸಲಾಗುತ್ತಿದೆ ಎಂಬ ಸಂಶಯ ಮನೆಮಾಡಿದೆ. ಕಟ್ಟಡ ತೆರವು ಜಾಗದಿಂದಲೇ ನಾಟಾ ವಿಲೇವಾರಿ ಆಗಬೇಕು ಇಲ್ಲವೆ ಬೇರೆಡೆ ವರ್ಗಾಹಿಸಿದರೆ ಹೊಸ ಪರ್ಮಿಟ್ ಪಡೆಯಬೇಕು.
ಮತ್ತಿಮನೆ ವ್ಯಾಪ್ತಿಗೆ ಚಕ್ರಾನಗರ ಸೇರಿದ್ದು, ಇಲ್ಲಿಗೆ ಸೇರಿದ ನಾಟಾಗಳನ್ನು ನಗರ ನೂಲಿಗ್ಗೇರಿ ಪ್ರದೇಶಕ್ಕೆ ಸಾಗಿಸಲಾಗಿದೆ. ಇದು ಅಕ್ರಮವಾಗಿದ್ದು ಅಲ್ಲಿಂದ ವಿಲೇವಾರಿ ಆಗುತ್ತಿರುವ ನಾಟ ಅಸಲಿಯೋ ಇಲ್ಲ ಅಕ್ರಮವೋ ಎಂಬುದರ ಬಗ್ಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.
ಕಟ್ಟಡ ತೆರವು ಪ್ರಕರಣದ ಕುರಿತಾಗಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
 -ರವಿ ಬಿದನೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.