ಅಧಿಕ ಶುಲ್ಕ ವಸೂಲು: ಪ್ರತಿಭಟನೆ
ಕ.ಪ್ರ. ವಾರ್ತೆ,ಶಿವಮೊಗ್ಗ,ಮಾ.20:
ನಗರದ ಆಚಾರ್ಯತುಳಸಿ ನ್ಯಾಷನಲ್ ಕಾಮರ್ಸ್ ಕಾಲೇಜಿನಲ್ಲಿ ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ವಸೂಲು ಮಾಡಲಾಗುತ್ತಿದೆ ಎಂದು ಆರೋಪಿಸಿ ಎನ್‌ಎಸ್‌ಯುಐ ಸಂಘಟನೆ ಕಾರ್ಯಕರ್ತರು ಕಾಲೇಜು ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಎಟಿಎನ್‌ಸಿಸಿಯಲ್ಲಿ ಪ್ರಥಮ ಮತ್ತು ಬಿಬಿಎಂ ವಿದ್ಯಾರ್ಥಿಗಳಿಂದ ರು. 1,714 ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ಶುಲ್ಕ ಎಂದು ವಸೂಲಿ ಮಾಡಲಾಗುತ್ತಿದ್ದು, ಅದರೊಂದಿಗೆ ವಿದ್ಯಾರ್ಥಿಗಳಿಂದ ಬೋಧನಾ ಶುಲ್ಕ ಕೂಡ ವಸೂಲಿ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಾಲೇಜಿನಲ್ಲಿರುವ ಅರೆಕಾಲಿಕ ಉಪನ್ಯಾಸಕರಿಗೆ ವೇತನ ನೀಡಲು ಕಾಲೇಜು ಆಡಳಿತ ಮಂಡಳಿ ಬಳಿ ಹಣವಿಲ್ಲವೆಂದು, ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ ರು. 10,500, ಎಸ್ಸಿ, ಎಸ್‌ಟಿ ವಿದ್ಯಾರ್ಥಿಗಳಿಂದ ರು. 5,800 ಹಾಗೂ ಇತರೆ ವಿದ್ಯಾರ್ಥಿಗಳಿಂದ ರು. 6,300 ಸಂಗ್ರಹಿಸಲಾಗಿದೆ ಎಂದು ಆಪಾದಿಸಿದರು.
ಆತಂಕದಲ್ಲಿ ವಿದ್ಯಾರ್ಥಿಗಳು: ವಿದ್ಯಾರ್ಥಿಗಳು ನಿಗದಿತ ಶುಲ್ಕವನ್ನು ಕಡ್ಡಾಯವಾಗಿ ಕಟ್ಟಲೇಬೇಕು ಎಂದು ಎನ್‌ಇಎಸ್ ಆಡಳಿತ ಮಂಡಳಿ ಆದೇಶಿಸಿದೆ. ವಿದ್ಯಾರ್ಥಿಗಳು ಶುಲ್ಕ ಕಟ್ಟದಿದ್ದಲ್ಲಿ, ಒಂದು ತಿಂಗಳೊಳಗೆ ಕಟ್ಟುವುದಾಗಿ ಬರೆದುಕೊಡುವಂತೆ ಒತ್ತಾಯ ಮಾಡಲಾಗುತ್ತಿದೆ. ಅಲ್ಲದೆ, ಶುಲ್ಕ ಕಟ್ಟದಿದ್ದ ಪಕ್ಷದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಬೆದರಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸರ್ಕಾರದ ನಿಯಮಾವಳಿ ಪ್ರಕಾರ ಯಾವುದೇ ಕಾಲೇಜಿನಲ್ಲಿ ಕ್ಯಾಪಿಟಲ್ ಶುಲ್ಕ ಪಡೆಯುವಂತಿಲ್ಲ. ಅಲ್ಲದೆ ಕೆಲ ಕಾಲೇಜುಗಳಲ್ಲಿ ಪ್ರಥಮ ಸೆಮಿಸ್ಟರ್‌ಗೆ ಪ್ರವೇಶ ನೀಡುವ ಸಂದರ್ಭದಲ್ಲೇ ಎರಡು ಸೆಮಿಸ್ಟರ್‌ಗಳ ಬೋಧನಾ ಶುಲ್ಕ ಪಡೆಯುತ್ತಿದ್ದಾರೆ. ಆದರೆ, ಆಚಾರ್ಯ ತುಳಸಿ ನ್ಯಾಷನಲ್ ಕಾಮರ್ಸ್ ಕಾಲೇಜಿನಲ್ಲಿ ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ವಿದ್ಯಾರ್ಥಿಗಳಿಂದ ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ ಎಂದರು.
ಸೂಕ್ತ ಕ್ರಮ ಕೈಗೊಳ್ಳಿ: ಕಾಲೇಜಿನಲ್ಲಿ ಬಡ, ದಲಿತ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ವಿಧಿಸಿರುವ ಹೆಚ್ಚುವರಿ ಶುಲ್ಕ ಕಟ್ಟಲಾಗದೆ ಪರೀಕ್ಷೆಯಿಂದ ದೂರ ಉಳಿಯುತ್ತಾರೆ. ಆದ್ದರಿಂದ ಇಂತಹ ನೀತಿ ಜಾರಿ ಮಾಡಿರುವ ಕಾಲೇಜಿನ ಆಡಳಿತ ಮಂಡಳಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಧುಸೂದನ್, ಜಿಲ್ಲಾಧ್ಯಕ್ಷ ಚೇತನ್, ಶ್ರೀಜಿತ್, ವಿಕಾಸ್, ವಿನಯ್, ಶಿವಶಂಕರ್, ಗಿರೀಶ್, ಸತೀಶ್, ಸಂದೀಪ್ ಇತತರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

