ಶಿವಮೊಗ್ಗ

ಪ್ರತಿಷ್ಠೆಯ ಕಣದಲ್ಲಿ ಹೊಸ ಮುಖ

Published On :

ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಮಾ.21
ಹಾಲಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಕ್ಷೇತ್ರದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ರಾಜಕೀಯ ಕ್ಷೇತ್ರದ ಹೊಸ ಮುಖ ಎಸ್. ರುದ್ರೇಗೌಡರನ್ನು ತಮ್ಮ ಪಕ್ಷದಿಂದ ಕಣಕ್ಕಿಳಿಸಿ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ. ಇದರ ಜತೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಸಮಾಜವಾದಿ, ಮಾಜಿ ಸಚಿವ ಜಿ. ಬಸವಣ್ಯಪ್ಪ ಅವರಿಗೆ ಅವಕಾಶ ನೀಡಿದ್ದರೆ, ಸೊರಬ ಕ್ಷೇತ್ರದಲ್ಲಿ ಅವರ ಕಟ್ಟಾ ಬೆಂಬಲಿಗ ಮಾಜಿ ಸಚಿವ ಹರತಾಳು ಹಾಲಪ್ಪ ಅವರನ್ನು ನೆಚ್ಚಿಕೊಂಡಿದ್ದಾರೆ.
ಯಾವತ್ತೂ ಹೇಳುತ್ತಿದ್ದಂತೆ ಶಿಕಾರಿಪುರ ಕ್ಷೇತ್ರದಿಂದ ಸ್ವತಃ ಯಡಿಯೂರಪ್ಪ ಅವರೇ ಕಣಕ್ಕಿಳಿದಿದ್ದಾರೆ.
ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳು ಸೇರಿವೆ. ತೀರ್ಥಹಳ್ಳಿ, ಸಾಗರ ಹಾಗೂ ಭದ್ರಾವತಿ ಅಭ್ಯರ್ಥಿಗಳ ಹೆಸರು ಎರಡನೇ ಪಟ್ಟಿಯಲ್ಲಿ ಹೊರಬೀಳುವ ನಿರೀಕ್ಷೆ ಇದೆ.
ಉದ್ಯಮಿ: ಎಸ್. ರುದ್ರೇಗೌಡ ಅವರು ಮೂಲತಃ ಕೈಗಾರಿಕೋದ್ಯಮಿ. ಶಾಂತಲಾ ಸ್ಪೆರೋ ಕ್ಯಾಸ್ಟ್ ಸಂಸ್ಥೆ ಸ್ಥಾಪಿಸಿ ಆಟೋಮೊಬೈಲ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರುದ್ರೇಗೌಡ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ಮಾಡಿದ್ದರು. ಇದೊಂದೇ ಅವರು ಅನುಭವಿಸಿದ ರಾಜಕೀಯ ಸ್ಥಾನಮಾನ. ಈ ಅವಧಿಯಲ್ಲಿ ಅವರು ಉತ್ತಮ ಹೆಸರನ್ನೂ ಸಂಪಾದಿಸಿದ್ದಾರೆ. ಶುದ್ಧಹಸ್ತರೆಂದೇ ಕರೆಯಿಸಿಕೊಳ್ಳುತ್ತಾರೆ.
ಈಗ ರಾಜಕೀಯ ಕ್ಷೇತ್ರ ಅವರನ್ನು ಸಂಪೂರ್ಣ ಒಳಗೆಳೆದುಕೊಂಡಿದೆ. ಬಿಜೆಪಿಗೆ ಪ್ರತಿಷ್ಠೆಯ ಕ್ಷೇತ್ರವಾಗಿರುವ ಶಿವಮೊಗ್ಗದಿಂದ ಉಪಮುಖ್ಯಮಂತ್ರಿ ಈಶ್ವರಪ್ಪ ಅವರು ಸ್ಪರ್ಧೆಗಿಳಿಯುವುದು ಖಚಿತ. ಅವರ ವಿರುದ್ಧ ಹೊಸಮುಖವನ್ನು ಕಣಕ್ಕಿಳಿಸುವ ಮೂಲಕ ಯಡಿಯೂರಪ್ಪ ಅವರು ಹೊಸ ರೀತಿಯ ಜೂಜಿಗೆ ಸಿದ್ಧರಾಗಿದ್ದಾರೆ.
ಮತ್ತೆ ಬಸು: ರಾಜಕೀಯ ಕ್ಷೇತ್ರದ ಹಳೇ ಹುಲಿ ಜಿ. ಬಸವಣ್ಯಪ್ಪ. ಸಮಾಜವಾದಿ ಚಿಂತನೆಯ ಮೂಲಕ ರಾಜಕೀಯಕ್ಕೆ ಬಂದವರು. ವಿಶೇಷವೆಂದರೆ 1967ರ ಚುನಾವಣೆಯಲ್ಲಿ ಇವರು ಸಂಯುಕ್ತ ಸೋಷಿಯಲಿಸ್ಟ್ ಪಕ್ಷದಿಂದ ಶಿಕಾರಿಪುರದಲ್ಲಿ ಸ್ಪರ್ಧಿಸಿ ಗೆಲವು ಪಡೆದಿದ್ದರು. ಆಗ ಶಿಕಾರಿಪುರ ಮೀಸಲು ಕ್ಷೇತ್ರವಾಗಿತ್ತು. ಇದು ಸಾಮಾನ್ಯ ವರ್ಗಕ್ಕೆ ಬದಲಾದ ನಂತರ ಮೀಸಲು ಕ್ಷೇತ್ರವಾಗಿ ಬದಲಾದ ಹೊಳೆಹೊನ್ನೂರಿಗೆ ಕಾಲಿಟ್ಟರು.
ಹೊಳೆಹೊನ್ನೂರು ಕ್ಷೇತ್ರ ರೂಪುಗೊಂಡಾಗ 1978ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಿ. ಬಸವಣ್ಯಪ್ಪ ಅವರು ಗೆದ್ದಿದ್ದರು. ನಂತರ ಇದೇ ಕ್ಷೇತ್ರದಿಂದ ಅವರು 1983, 1985ರಲ್ಲಿ ಜನತಾ ಪಕ್ಷದಿಂದ ಗೆದ್ದಿದ್ದರು. 1989ರಲ್ಲಿ ಇವರು ಸ್ಪರ್ಧಿಸಿರಲಿಲ್ಲ. ನಂತರ 1994ರಲ್ಲಿ ಜನತಾದಳದಿಂದ ಗೆದ್ದಿದ್ದರು.
1999ರಲ್ಲಿ ಜೆಡಿಯುನಿಂದ ಸ್ಪರ್ಧಿಸಿ ಸೋತರು. ಆದರೆ, 2004ರಲ್ಲಿ ಬಿಜೆಪಿಯಿಂದ ಮತ್ತೆ ಆರಿಸಿ ಬಂದರು. ಈ ಹೊಳೆಹೊನ್ನೂರು ಕ್ಷೇತ್ರ ಕಳೆದ ಚುನಾವಣೆ ವೇಳೆ ಮರುವಿಂಗಡಣೆಯಾದ ನಂತರ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾಯಿತು.
ಆಗ 2008ರ ಚುನಾವಣೆಯಲ್ಲಿ ಅವರಿಗೆ ಯಾವ ಪಕ್ಷದ ಟಿಕೆಟ್ಟೂ ಸಿಗಲಿಲ್ಲ. ನಂತರ ಯಡಿಯೂರಪ್ಪ ಅವರನ್ನು ಹಿಂಬಾಲಿಸಿದ ಅವರು ಈಗ 2013ರಲ್ಲಿ ಕೆಜೆಪಿ ಅಭ್ಯರ್ಥಿ. ವಿವಿಧ ಪಕ್ಷಗಳಿಂದ ಒಟ್ಟು ಐದು ಬಾರಿ ಗೆಲವು ಸಾಧಿಸಿರುವ ಬಸವಣ್ಯಪ್ಪ ಈಗ ಮತ್ತೆ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.
ಹಾಲಪ್ಪಗೆ ಮಣೆ: ಸೊರಬ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ಕೆಜೆಪಿ ಟಿಕೆಟ್ ಸಿಗುವುದು ಬಹುತೇಕ ಖಚಿತವಿತ್ತು. ಯಡಿಯೂರಪ್ಪ ಅವರ ಕಾರಣದಿಂದಲೇ ಸಚಿವರಾಗಿದ್ದ ಹಾಲಪ್ಪ ಅವರು ನಂತರ ಅತ್ಯಾಚಾರ ಆರೋಪ ಎದುರಿಸಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಆದರೆ, ಯಾವತ್ತೂ ಯಡಿಯೂರಪ್ಪ ಅವರ ಜತೆಗಿದ್ದ ಹಾಲಪ್ಪ ಅವರು ಕೆಜೆಪಿ ಸ್ಥಾಪನೆಯಾದಾಗ ಬಿಜೆಪಿ ಬಿಟ್ಟು ಹೊರನಡೆದರು.
2004ರಲ್ಲಿ ಹೊಸನಗರ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬಂದಿದ್ದ ಇವರು 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಆದ ನಂತರ ಸೊರಬ ಕ್ಷೇತ್ರಕ್ಕೆ ಕಾಲಿಟ್ಟರು. ಬಂಗಾರಪ್ಪ ಅವರ ಪುತ್ರರ ಭಾರಿ ಪೈಪೋಟಿ ನಡುವೆಯೂ ಗೆದ್ದು ಬಂದರು.
ಈಗ ಇದೇ ಕೇತ್ರದಿಂದ ಕೆಜೆಪಿ ಪಕ್ಷದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಮತ್ತೆ ಶಿಕಾರಿಗೆ ಬಿಎಸ್‌ವೈ
ರಾಜಕೀಯ ಜನ್ಮ ನೀಡಿದ ಶಿಕಾರಿಪುರ ಕ್ಷೇತ್ರವನ್ನು ಯಾವತ್ತೂ ಬಿಡುವುದಿಲ್ಲ ಎನ್ನುತ್ತಿದ್ದ ಬಿ.ಎಸ್. ಯಡಿಯೂರಪ್ಪ ಅವರು ಮತ್ತೆ ಅದೇ ಕ್ಷೇತ್ರದಿಂದ ಶಿಕಾರಿಗೆ ಹೊರಟಿದ್ದಾರೆ. ಆದರೆ, ಅವರ ಶಿಕಾರಿಗೆ ಎದುರಾಗುವವರು ಯಾರು ಎಂದು ಯಾವ ಪಕ್ಷವೂ ಇನ್ನೂ ದೃಢವಾಗಿ ನಿರ್ಧರಿಸಿಲ್ಲ.
ಯಡಿಯೂರಪ್ಪ ಅವರು 1983ರಿಂದ ಇದೂವರೆಗೆ ನಡೆದ ಎಲ್ಲಾ ಚುನಾವಣೆಯಲ್ಲೂ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಒಮ್ಮೆ ಮಾತ್ರ (1999) ಸೋಲನುಭವಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ವಿರುದ್ಧ ಭಾರಿ ಗೆಲವು ಪಡೆದಿದ್ದರು. ಈ ಬಾರಿ ಒಂದು ಬದಲಾವಣೆ ಎಂದರೆ ಅವರು ಮತದಾರರ ಬಳಿ ಕಮಲಕ್ಕೆ ಮತ ನೀಡಿ ಎಂದು ಕೇಳುವಂತಿಲ್ಲ. ಪಕ್ಷ ಬದಲಾಗಿದೆ. ಕೆಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಯಡಿಯೂರಪ್ಪ ಅವರಿಗೆ ಈ ಬಾರಿ ಅಳಿವು- ಉಳಿವಿನ ಚುನಾವಣೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.