ತಾಪಂ ಅಧ್ಯಕ್ಷರಾಗಿ ನಾಗರತ್ನ ಆಯ್ಕೆ
ಕ.ಪ್ರ. ವಾರ್ತೆ, ಹೊಸನಗರ, ಮಾ.26
ತಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯ ಎದ್ದಿದ್ದ ನಾಗರತ್ನ ದೇವರಾಜ್ ಆಯ್ಕೆಯಾಗಿದ್ದಾರೆ.
ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ವೀರೇಶ್ ಆಲುವಳ್ಳಿ ಮತ್ತು ಬಿಜೆಪಿಯಿಂದ ಬಂಡಾಯವೆದ್ದಿದ್ದ ನಾಗರತ್ನ ದೇವರಾಜ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
11 ಸದಸ್ಯ ಬಲದ ತಾಪಂನಲ್ಲಿ 6 ಮತಗಳನ್ನು ಪಡೆಯುವುದರ ಮೂಲಕ ನಾಗರತ್ನ ಆಯ್ಕೆಗೊಂಡಿದ್ದು ವೀರೇಶ್ 5 ಮತಗಳನ್ನು ಪಡೆದರು. ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಎಸಿ ಉದಯಕುಮಾರಶೆಟ್ಟಿ ಆಯ್ಕೆಯನ್ನು ಘೋಷಿಸಿದರು.
ಚುನಾವಣೆ ರದ್ದಾಗಿತ್ತು: ಈ ಹಿಂದೆ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಸದಸ್ಯರ ಅನುಚಿತ ವರ್ತನೆಯಿಂದಾಗಿ ಚುನಾವಣೆ ರದ್ದಾಗಿತ್ತು ಮಾತ್ರವಲ್ಲ ಕೋರ್ಟ್ ಮೆಟ್ಟಿಲೇರಿತ್ತು. ನಂತರ ಉಪಾಧ್ಯಕ್ಷರ ಚುನಾವಣೆ ಮಾತ್ರ ನಡೆದು ಕಾಂಗ್ರೆಸ್ನ ಗೀತಾನಿಂಗಪ್ಪ ಆಯ್ಕೆಯಾಗಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಸುವಂತೆ ಆದೇಶ ಬಂದ ಹಿನ್ನೆಲೆಯಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲದೊಂದಿಗೆ ಬಂಡಾಯ ಬಿಜೆಪಿಯ ನಾಗರತ್ನ ಆಯ್ಕೆಯಾಗಿದ್ದಾರೆ. ಇದರಿಂದ 8 ಸದಸ್ಯರನ್ನು ಹೊಂದಿದ್ದ ಬಿಜೆಪಿಗೆ ತೀವ್ರ ಮುಖಭಂಗವಾದಂತಾಗಿದೆ. ಕಾಂಗ್ರೆಸ್ ವಿಜಯೋತ್ಸವ ಸಂಭ್ರಮದಲ್ಲಿದ್ದು ನೂತನ ಅಧ್ಯಕ್ಷರಿಗೆ ಅಭಿನಂಧನೆ ಸಲ್ಲಿಸಿದೆ. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ವಿಪ್ ಜಾರಿ: ಬಿಜೆಪಿ ಸದಸ್ಯರಿಗೆ ಬಿಜೆಪಿ ವಿಪ್ ಜಾರಿ ಮಾಡಿದ್ದರೂ ಯಾವುದೆ ಪ್ರಯೋಜನವಾಗದೆ, ಬಂಡಾಯವಾಗಿ ಗುರುತಿಸಿಕೊಂಡಿದ್ದ ಮೂವರು ಸದಸ್ಯರು ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸಿದರು.
ಸೋಲಿನಿಂದ ವಿಚಲಿತನಾಗಿಲ್ಲ: ತಾಪಂ ಸದಸ್ಯ ವೀರೇಶ್ ಆಲುವಳ್ಳಿ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋಲು ಅನುಭವಿಸಿರುವುದರಿಂದ ವಿಚಲಿತನಾಗಿಲ್ಲ. ಬಿಜೆಪಿಯಿಂದ ಗೆದ್ದು ವಿಪ್ ಉಲ್ಲಂಘಿಸಿದ ಮೂವರು ಸದಸ್ಯರು ಪಕ್ಷದ್ರೋಹ ಮಾಡಿದ ಹಿನ್ನೆಲೆಯಲ್ಲಿ ಸೋಲಾಗಿದೆ. ಅಲ್ಲದೆ ಕಾಗೋಡು ತಿಮ್ಮಪ್ಪನಂತ ಹಿರಿಯ ರಾಜಕಾರಣಿಗಳು ಉಪಾಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿ ಸದಸ್ಯರನ್ನು ದಿಕ್ಕುತಪ್ಪಿಸುವ ಸಣ್ಣತನ ಪ್ರದರ್ಶನ ಮಾಡಿದ್ದು ಮಾತ್ರ ಸರಿಯಲ್ಲ ಎಂದು ಆರೋಪಿಸಿದರು.
ವಿಪ್ ಉಲ್ಲಂಘಿಸಿದ ಸದಸ್ಯರ ಬಗ್ಗೆ ಪಕ್ಷ ಸೂಕ್ತ ಕ್ರಮ ಕೈಗೊಳ್ಳಲಿದೆ. ಮತ್ತು ಈ 3 ಬಗ್ಗೆ ಚುನಾವಣ ಆಯೋಗಕ್ಕೆ ದೂರು ನೀಡಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

