ಶಿವಮೊಗ್ಗ

ರೇಣು ಉಚ್ಚಾಟನೆ ಇದೇ ಮೊದಲಲ್ಲ

Published On :

 ಹೊನ್ನಾಳಿ ಚಂದ್ರಶೇಖರ್
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಮಾ.27
ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಬಿಜೆಪಿಯಿಂದ ಉಚ್ಚಾಟನೆಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಹ ಒಮ್ಮೆ ಅವರು ಪಕ್ಷದಿಂದ ಬಿಜೆಪಿಯಿಂದ ಉಚ್ಚಾಟನೆಯಾಗಿದ್ದರು. ಆಗ ಬಿ.ಎಸ್. ಯಡಿಯೂರಪ್ಪ ಅವರೇ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು ಎಂಬುದು ವಿಶೇಷ.
ರೇಣುಕಾಚಾರ್ಯ ಅವರು ಹೊನ್ನಾಳಿಯಲ್ಲಿ ಬುಧವಾರ ಬಿಜೆಪಿ ಮುಖಂಡರ ವಿರುದ್ಧ ಮಾತನಾಡಿದ ಹಿನ್ನಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ  ಅವರು ಈ ಘಟನೆಯಾದ ಕೆಲವೇ ಗಂಟೆಗಳಲ್ಲಿ ಉಚ್ಚಾಟನೆ ಕ್ರಮ ಕೈಗೊಂಡಿದ್ದು, ಹಿಂದಿನ ಘಟನೆ ಈಗ ಮತ್ತೆ ಚರ್ಚೆಗೆ ಬಂದಿದೆ.
1998ರಲ್ಲಿ ರೇಣುಕಾಚಾರ್ಯ ಅವರು ಪಕ್ಷದಿಂದ ಅಮಾನತು ಆಗಿದ್ದಾಗ ಜಿಲ್ಲಾ ಸಮಿತಿ ಸದಸ್ಯರಾಗಿದ್ದರು. -ಹೊನ್ನಾಳಿ ತಾಲೂಕು ಬಿಜೆಪಿ ಅಧ್ಯಕ್ಷರ ವಿರುದ್ಧ ಪಕ್ಷದ ವರ್ಚಸ್ಸಿಗೆ ಅಗೌರವವಾಗುವ ರೀತಿಯಲ್ಲಿ ಬಹಿರಂಗ ಹೇಳಿಕೆ ನೀಡುತ್ತಿರುವುದಲ್ಲದೇ, ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಈ ಕಾರಣದಿಂದ ತಮ್ಮನ್ನು ಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ- ಎಂದು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಆದೇಶ ನೀಡಿದ್ದರು.
ಅವತ್ತೂ ಸಹ ರೇಣುಕಾಚಾರ್ಯ ಅವರು ಬಿಜೆಪಿಯಿಂದ ಹೊರಹೋಗಲು ಕಾರಣವಾಗಿದ್ದು ಅಶಿಸ್ತು ಚಟುವಟಿಕೆಯೇ ಆಗಿತ್ತು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಆಗಿದ್ದು ಹೀಗೆ: ಇಡೀ ಘಟನೆ ಆರಂಭವಾಗಿದ್ದು 1997ರಲ್ಲಿ. ಅಂದು ಹೊನ್ನಾಳಿ ತಾಲೂಕು ಅವಿಭಜಿತ ಶಿವಮೊಗ್ಗ ಜಿಲ್ಲೆಯಲ್ಲಿತ್ತು. ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರಾಗಿ ಡಾ. ರಾಜ್‌ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ರೇಣುಕಾಚಾರ್ಯ ಕಾರ್ಯನಿರ್ವಹಿಸುತ್ತಿದ್ದರು. ತಾಲೂಕು ಅಧ್ಯಕ್ಷರೊಂದಿಗೆ ರೇಣುಕಾಚಾರ್ಯ ಅವರಿಗೆ ಭಿನ್ನಮತವಿತ್ತು.
ಹಾಗಾಗಿ ಪದೇಪದೇ ಅವರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದರು. ಅಲ್ಲದೇ ಜಿಲ್ಲಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ (ಹಾಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ) ಹಾಗೂ ಜಿಲ್ಲಾ ಕಾರ್ಯದರ್ಶಿ ದೇವದಾಸ ನಾಯ್ಕ್ ಅವರು ಹೊನ್ನಾಳಿಯಲ್ಲಿ ಸಭೆ ನಡೆಸಿದಾಗ ರೇಣುಕಾಚಾರ್ಯ ಅವರ ವರ್ತನೆ ಮುಖಂಡರ ಬೇಸರಕ್ಕೆ ಕಾರಣವಾಗಿತ್ತು.
ಆಗ ಪಕ್ಷದ ಶಿವಮೊಗ್ಗ ಜಿಲ್ಲಾ ಸಮಿತಿಯು ರೇಣುಕಾಚಾರ್ಯ ಅವರಿಗೆ ನೋಟಿಸ್ ನೀಡಿ 15 ದಿನದಲ್ಲಿ ಜಿಲ್ಲಾ ಕಚೇರಿಗೆ ಆಗಮಿಸಿ ವಿವರಣೆ ನೀಡುವಂತೆ ಸೂಚಿಸಿತ್ತು. ಆದರೆ ರೇಣುಕಾಚಾರ್ಯ ಬರಲಿಲ್ಲ. ಈ ಬಗ್ಗೆ ಜಿಲ್ಲಾ ಸಮಿತಿಯು ರಾಜ್ಯ ಸಮಿತಿಗೆ ವರದಿ ನೀಡಿತ್ತು.
ಇದನ್ನು ಆಧರಿಸಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ರೇಣುಕಾಚಾರ್ಯ ಅವರನ್ನು ಅಮಾನತು ಮಾಡಿ ಆದೇಶಿಸಿದ್ದರು. ಈ ಆದೇಶ ಹೊರಬಿದ್ದಿದ್ದು ಗಾಂಧಿ ಜಯಂತಿ ದಿನವಾದ 1998ರ ಅಕ್ಟೋಬರ್ 2ರಂದು ಎಂಬುದು ವಿಶೇಷ. ಆದರೆ ಈ ಆದೇಶ ಬಹು ಕಾಲ ಊರ್ಜಿತವಾಗಿರಲಿಲ್ಲ. ಚುನಾವಣೆ ಹತ್ತಿರವಿದ್ದುದರಿಂದ ಆದೇಶ ವಾಪಸು ಪಡೆಯಲಾಗಿತ್ತು.
ಮತ್ತೊಮ್ಮೆ ನೋಟಿಸ್: ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಬಂಡಾಯವೆದ್ದು ಹೈದ್ರಾಬಾದ್ ರೆಸಾರ್ಟ್ ರಾಜಕೀಯ ಮಾಡಿದ್ದ ರೇಣುಕಾಚಾರ್ಯ ಅವರಿಗೆ ಆಗಲೂ ಪಕ್ಷ ನೋಟಿಸ್ ನೀಡಿತ್ತು. ಅಮಾನತು ಮಾಡುವ ಮಟ್ಟಕ್ಕೆ ಹೋಗಿರಲಿಲ್ಲ.
ಪಕ್ಷಕ್ಕೆ ಪದೇಪದೇ ಮುಜುಗರವನ್ನುಂಟು ಮಾಡುತ್ತಿದ್ದ ರೇಣುಕಾಚಾರ್ಯ ಅವರು ಈಗ ಪಕ್ಷದಿಂದ ಹೊರಗೆ ಕಾಲಿಟ್ಟಿದ್ದಾರೆ. ಸುಮಾರು 15 ವರ್ಷಗಳ ಅಶಿಸ್ತಿನ ಪರಂಪರೆ ಒಂದು ಪಾಠಕ್ಕೆ ಈಗ ತೆರೆ ಬಿದ್ದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.