ಶಿವಮೊಗ್ಗ

ದಿಗ್ಗಜರಿಗೆ ಚುನಾವಣೆ ಗೆಲ್ಲುವುದು ಸುಲಭವಿಲ್ಲ

Published On :

ಶಿವಮೊಗ್ಗ: ಅನೇಕ ಚುನಾವಣೆ ಎದುರಿಸಿ ರಾಜಕೀಯವನ್ನು ಕರತಲಾಮಲಕ ಮಾಡಿಕೊಂಡಿರುವ, ರಾಜ್ಯ ರಾಜಕೀಯನ್ನು ಪಳಗಿಸಿರುವ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳಿಗೆ ಈ ಬಾರಿ ಗೆಲುವೆಂಬುದು ಅಷ್ಟು ಸುಲಭವಿಲ್ಲ.
 ಹೆಗಲಿಗೆ ಹೆಗಲು ಕೊಡಲು ನೂರಾರು ಮುಖಂಡರಿದ್ದಾರೆ, ಸಾವಿರಾರು ಕಾರ್ಯಕರ್ತರಿದ್ದಾರೆ. ಕೆಲವರಿಗೆ ಹಣಬಲವೂ ಉಂಟು. ಆದರೆ, ಚುನಾವಣೆಯಲ್ಲಿ ಸುಲಭವಾಗಿ ಎದುರಿಸುವ ಸ್ಥಿತಿ ಮಾತ್ರ ಜಿಲ್ಲೆಯ ಪ್ರಭಾವಿಗಳಿಗಿಲ್ಲ. ಅಭಿವೃದ್ಧಿ, ಜಾತಿ, ಸಂಘಟನೆ ಯಾವುದನ್ನೂ ಈ ಪ್ರಭಾವಿ ಅಭ್ಯರ್ಥಿಗಳು ಪೂರ್ಣಪ್ರಮಾಣದಲ್ಲಿ ನಂಬಿಕುಳಿತುಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ.
 ಪ್ರಭಾವಿಗಳೆಂಬ ಹಣಪಟ್ಟಿ ಹೊಂದಿದರೂ ಅನೇಕ ಋಣಾತ್ಮಕ ಅಂಶಗಳು ಅವರ ಹೆಗಲೇರಿವೆ, ಅಧಿಕಾರ ಸಿಕ್ಕಾಗ ಗುಮ್ಮನಂತಿದ್ದು ಈಗ ಬೀದಿ ಬೀದಿ ಸುತ್ತಲಾರಂಭಿಸಿದ್ದಾರೆ. ಕೆಲವರಂತೂ ಹಳ್ಳಿಗಳಿಗೆ ಪ್ರಚಾರಕ್ಕೆ ತೆರಳಿದಾಗ ಸ್ಥಳೀಯ ಜನರಿಂದ ಬಹಿರಂಗವಾಗಿ ವಾಚಾಮಗೋಚರವಾಗಿ ಬೈಸಿಕೊಂಡು ವಾಪಾಸು ಓಡಿಬಂದಿದ್ದೂ ಇದೆ. ಸ್ಥಳೀಯ ಮುಖಂಡರ ಪಕ್ಷಾಂತರಗಳು, ಪೈಪೋಟಿ ರಾಜಕೀಯ, ಜಾತಿ ಸಂಘಟನೆಗಳ ಆಡಂಬೋಲ, ಅಪಪ್ರಚಾರಗಳು, ಭ್ರಷ್ಟಾಚಾರ ಎಲ್ಲವೂ ದಿಗ್ಗಜರೆನಿಸಿಕೊಂಡವರನ್ನು ತಬ್ಬಿಬ್ಬು ಮಾಡಿರುವುದಂತೂ ಸುಳ್ಳಲ್ಲ.
ಯಾರಕಥೆ ಏನು?
1. ಕೆ.ಎಸ್. ಈಶ್ವರಪ್ಪ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಹಿಂದಿನ ಯಾವುದೇ ಚುನಾವಣೆಯಲ್ಲಿ ಈಶ್ವರಪ್ಪ ಪಡದಷ್ಟು ಶ್ರಮ ಈ ಬಾರಿ ವಿನಿಯೋಗವಾಗುತ್ತಿದೆ. ಇನ್ನೊಂದೆಡೆ ಸಂಘಟನೆಯ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿದೆ. ವೈಯಕ್ತಿಕವಾಗಿ ಸಂಘಟನೆಯ ಸಭೆಯಲ್ಲೇ ಅಸಮಾಧಾನವನ್ನು ಈಶ್ವರಪ್ಪ ಎದುರಿಸಿದ್ದಾಗಿದೆ. ಈಶ್ವರಪ್ಪ ಗೆದ್ದಮೇಲೆ ಮಾಡಿದ್ದಾದರೂ ಏನು, ಶಿವಮೊಗ್ಗಕ್ಕೆಂದು ಯಾವ ಯೋಜನೆ ತಂದಿದ್ದಾರೆ, ಹಿಂದುತ್ವದ ಪರವಾಗಿ ಕೈಗೊಂಡ ನಿರ್ಧಾರವಾದರೂ ಏನು, ಒಂದೇ ಒಂದು ಕಸಾಯಿಖಾನೆ ಮುಚ್ಚಿಸಲಾಗದ ಈಶ್ವರಪ್ಪನವರ ಪರವಾಗಿ ಯಾವ ತಳಹದಿಯ ಮೇಲೆ ನಾವು ಓಟು ಕೇಳಬೇಕು ಎಂಬ ಪ್ರಶ್ನೆಗಳನ್ನು ಅವರು ಸಂಘಟನೆಯ ಕಾರ್ಯಕರ್ತರೇ ಸಭೆಗಳಲ್ಲಿ ಈಶ್ವರಪ್ಪನವರನ್ನು ಪ್ರಶ್ನಿಸಿದ್ದಾರೆ.
 ಈ ಅಸಮಾಧಾನ ಯಾವ ಮಟ್ಟಿಗೆ ತಾರಕಕ್ಕೆ ಹೋಗಿದೆ ಎಂದರೆ, ಈಶ್ವರಪ್ಪ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪಕ್ಷದ ಪ್ರಮುಖ ಕಾರ್ಯಕರ್ತರೆನೆಸಿಕೊಂಡವರು ಬಿಜೆಪಿಯ ಶಾಲು ಹಾಕಿಕೊಳ್ಳದೇ ದೂರ ಉಳಿದರು. ಸಂಘಟನೆಗಾಗಿ ಕೆಲಸ ಮಾಡಬೇಕಾಗಿದೆಯೇ ಹೊರತು ಅಭ್ಯರ್ಥಿಗಾಗಿ ಮತ ಕೇಳುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಹಿರಿಯ ಕಾರ್ಯಕರ್ತರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.
 ಅಕ್ರಮ ಆಸ್ತಿ ಗಳಿಕೆ, ಭ್ರಷ್ಟಾಚಾರ ಆರೋಪ, ಅಭಿವೃದ್ಧಿಗೆ ಅಡ್ಡಗಾಲು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಮತ ಕೇಳಲು ಕಾರ್ಯಕರ್ತರು ಹಿಂದೇಟು ಹಾಕಿರುವ ಪ್ರಸಂಗವೂ ನಡೆದಿದೆ. ಬಿಜೆಪಿ ಪ್ರಮುಖ ಅಂಗ ಸಂಸ್ಥೆಗಳ ಕಾರ್ಯಕರ್ತರೇ ಈ ಬಾರಿ ಚುನಾವಣೆಯಲ್ಲಿ ತಟಸ್ಥ ಧೋರಣೆ ಅನುಸರಿಸುತ್ತಿರುವುದೂ ಸುಳ್ಳಲ್ಲ.
 ಈಶ್ವರಪ್ಪನವರ ಎದುರಾಳಿಗಳೇನು ಪ್ರಬಲರಲ್ಲ. ಆದರೆ, ಈಶ್ವರಪ್ಪನವರ ಋಣಾತ್ಮಕ ಅಂಶಗಳೇ ಅವರ ಗೆಲುವಿನ ಓಟಕ್ಕೆ ಅಡ್ಡಗಾಲಾಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿದೆ.
2. ಕಾಗೋಡು ತಿಮ್ಮಪ್ಪ: ನಾಮಪತ್ರ ಸಲ್ಲಿಕೆ ವರೆಗೆ ಎಷ್ಟು ಲೀಡ್‌ನಲ್ಲಿ ಗೆಲುವು ಎಂದು ಲೆಕ್ಕಾಚಾರ ಹಾಕುತ್ತಿದ್ದ ಸಾಗರದ ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪನವರಿಗೆ ಈಗ ಪರಿಸ್ಥಿತಿ ಮುಂಚಿನಂತಿಲ್ಲ. ತಮ್ಮ ಸೋದರಳಿಯ ಬೇಳೂರು ಗೋಪಾಲಕೃಷ್ಣ ಎಷ್ಟು ಮತಗಳನ್ನು ಪಡೆಯುತ್ತಾರೆಂಬುದರ ಮೇಲೆ ಕಾಗೋಡು ಭವಿಷ್ಯ ಅಡಗಿದೆ. ಅಷ್ಟೇ ಅಲ್ಲದೇ, ತಮ್ಮ ವಯಸ್ಸನ್ನು ಪ್ರಸ್ತಾಪಿಸಿ ಎದುರಾಳಿ ಕೆಲ ಪಕ್ಷಗಳು ಪ್ರಚಾರ ನಡೆಸುತ್ತಿರುವುದರಿಂದ ತಿಮ್ಮಪ್ಪನವರಿಗೆ ನುಂಗಲಾರದ ತುತ್ತಾಗಿದ್ದು, ಅದುರಿದ್ದಾರೆ. ಈ ನಡುವೆಯೇ ತಮ್ಮ ಶಿಷ್ಯ ಕೆಜೆಪಿ ಅಭ್ಯರ್ಥಿ ಬಿ.ಆರ್. ಜಯಂತ್ ಅವರ ಸೌಮ್ಯ ಸ್ವಭಾವ ಕಾಗೋಡು ಗೆಲುವಿನ ಹಾದಿಯನ್ನು ದಿನದಿಂದ ದಿನಕ್ಕೆ ದುರ್ಗಮಗೊಳಿಸುತ್ತಿದೆ.
3. ಬಿ.ಎಸ್.ಯಡಿಯೂರಪ್ಪ: ಕಳೆದ ಚುನಾವಣೆಯಲ್ಲಿ ಎದುರಾಳಿಯಾಗಿದ್ದ ಎಸ್. ಬಂಗಾರಪ್ಪನವರನ್ನೇ ಮಣ್ಣುಮುಕ್ಕಿಸಿದ್ದ ಬಿ.ಎಸ್. ಯಡಿಯೂರಪ್ಪನವರು ಈ ಚುನಾವಣೆಯನ್ನು ಅಷ್ಟು ಸುಲಭವಾಗಿ ಪರಿಗಣಿಸಿಲ್ಲ. ಎದುರಾಳಿ ಪಾಳಯದ ಎಲ್ಲಾ ಅಭ್ಯರ್ಥಿಗಳನ್ನು ಆಪೋಶನ ತೆಗೆದುಕೊಂಡು ಕೆಜೆಪಿಗೆ ಸೇರಿಸಿಕೊಳ್ಳುತ್ತಿರುವ ಬಿಎಸ್‌ವೈ, ಗೆಲುವಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ತಮ್ಮ ಒಂದು ಕಾಲದ ಸ್ನೇಹಿತ ಶಾಂತವೀರಪ್ಪಗೌಡರನ್ನು ಹೆಣೆಯಲು ಸರ್ಕಸ್ ಮಾಡುತ್ತಿರುವ ಯಡಿಯೂರಪ್ಪ, ಜಾತಿ ಓಟು ವಿಭಜನೆಯಾಗದಂತೆ ತಡೆಯುವುದೇ ಒಂದು ಸಾಹಸವಾಗಿದೆ.
4. ಆರಗ, ಕುಮಾರ್: ತೀರ್ಥಹಳ್ಳಿಯ ಹ್ಯಾಟ್ರಿಕ್ ಶಾಸಕ ಆರಗ ಜ್ಞಾನೇಂದ್ರ ಗೆಲುವು ಸುಲಭವಿಲ್ಲ. ಸಾಗರದಲ್ಲಿ ಕಾಂಗ್ರೆಸ್, ಕೆಜೆಪಿ ಅಬ್ಬರದ ನಡುವೆ ಬೇಳೂರು ಗೆಲುವಿಗಾಗಿ ಹಾತೊರೆಯುತ್ತಿದ್ದಾರೆ. ಅದೇ ರೀತಿ ಸೊರಬದಲ್ಲಿ ಬಂಗಾರಪ್ಪ ಪುತ್ರರಾದ ಕುಮಾರ್ ಬಂಗಾರಪ್ಪ (ಕಾಂಗ್ರೆಸ್), ಮಧುಬಂಗಾರಪ್ಪ (ಜೆಡಿಎಸ್) ಪೈಪೋಟಿ ಮಧ್ಯೆ ಹರತಾಳು ಹಾಲಪ್ಪ ಸದ್ದಿಲ್ಲದೇ ಚುನಾವಣೆ ಗೆಲುವಿಗಾಗಿ ಯಡಿಯೂರಪ್ಪ ಟ್ರಂಪ್‌ಕಾರ್ಡ್ ಬಳಸುತ್ತಿದ್ದಾರೆ.
 ಭದ್ರಾವತಿ ಕ್ಷೇತ್ರವನ್ನು ಗೆಲ್ಲುವ ಸಿಎಂ ಇಬ್ರಾಹಿಂ ಅವರ ಆಶಯಕ್ಕೆ ಇಂಬುಕೊಡುವಂತಹ ಪರಿಸ್ಥಿತಿಯೂ ಅಲ್ಲಿಲ್ಲ. ಅರ್ಧದಶಕದಿಂದ ರಾಜಕೀಯದಲ್ಲೇ ಇರುವ ಮಾಜಿ ಸಚಿವ ಬಸವಣ್ಯಪ್ಪನವರಿಗೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಕೈ ಹಿಡಿಯುವುದೂ ಸುಲಭವಲ್ಲ. ಒಟ್ಟಾರೆ ವಿವಿಧ ಕಾರಣಗಳಿಂದಾಗಿ ದಿಗ್ಗರೆನಿಸಿಕೊಂಡವರು ಪಡಿಪಾಟಲು ಪಡುತ್ತಿದ್ದಾರೆ.
-ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.