ಶಿವಮೊಗ್ಗ

ಹಣ, ಸೀರೆ ಹಂಚಿಕೆ ಕೀಳುಮಟ್ಟದ ರಾಜಕೀಯ

Published On :

ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳು ಮತದಾರರಿಗೆ ಹಣ, ಹೆಂಡ, ಸೀರೆ ಹಂಚುವುದರ ಮೂಲಕ ಕೀಳು ಮಟ್ಟದ ರಾಜಕೀಯ ಮಾಡುತ್ತಿವೆ ಎಂದು ಎಸ್‌ಡಿಪಿಐನ ನಗರ ವಿಧಾನ ಕ್ಷೇತ್ರದ ಅಭ್ಯರ್ಥಿ ಕೆ.ಬಿ. ಬಷೀರ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ರಾಷ್ಟ್ರೀಯ ಪಕ್ಷಗಳ ಬಗ್ಗೆ ಚುನಾವಣಾ ಆಯೋಗ ಹದ್ದಿನ ಕಣ್ಣಿಡಬೇಕು. ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ನಗರದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಅಚ್ಚರಿಯ ಫಲಿತಾಂಶ ನೀಡಲಿದ್ದಾರೆ. ಹಣ ಮತ್ತಿತರ ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾರರು ತಮ್ಮನ್ನು ಗೆಲ್ಲಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಷ್ಟು ದಿನ ಕೆಲ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳು ಕೆಲ ವರ್ಗದ ಮತದಾರರನ್ನು ತಮ್ಮ ಮತ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡಿದ್ದವು. ಇದೀಗ ಈ ವರ್ಗದ ಮತದಾರರು ಜಾಗೃತರಾಗಿದ್ದಾರೆ. ನಗರದ 170 ಬೂತ್‌ಗಳಲ್ಲಿ ಈಗಾಗಲೇ ಉತ್ತಮ ಬೆಂಬಲ ವ್ಯಕ್ತವಾಗಿದೆ. ಶೇ.90ರಷ್ಟು ಮತದಾರರಿಂದ ಒಳ್ಳೆಯ ಅಭಿಪ್ರಾಯ ಕೇಳಿಬಂದಿದೆ ಎಂದರು.
ನಮಗೆ ನಿಜವಾದ ಪ್ರತಿ ಸ್ಪರ್ಧಿ ಬಿಜೆಪಿ, ಕೆಜೆಪಿ ಮಾತ್ರ. ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಾಲಸುಬ್ರಹ್ಮಣ್ಯ, ಉಪಾಧ್ಯಕ್ಷ ಎಜಾಜ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಅಲ್ಲಾ ಬಕ್ಷ್ ಮತ್ತಿತರರು ಇದ್ದರು.
ನಾಗನಗೌಡ ಕೆಜೆಪಿ ಸೇರ್ಪಡೆ
ಶಿರಾಳಕೊಪ್ಪ: ಮುಳಕೊಪ್ಪ ನಾಗನಗೌಡ ಹಾಗು ಮಳೂರ ಗ್ರಾಮದ ಕಾಂಗ್ರೆಸ್ ಮುಖಂಡ ಜಗದೀಶ್ ತಮ್ಮ ಹಿಂಬಾಲಕರೊಂದಿಗೆ ಬುಧವಾರ ಕೆಜೆಪಿ ಸೇರಿದರು.
  ಶಿರಾಳಕೊಪ್ಪದ ಕೆಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಹಲಿಂಗಪ್ಪ ಹಾಗು ಅಗಡಿ ಅಶೋಕ ಅವರ ನೇತೃತ್ವದಲ್ಲಿ ಪಕ್ಷ ಸೇರಿದ ಅವರನ್ನು ಹಾರ ಹಾಕಿ ಪಕ್ಷದ ಶಾಲು ಹಾಕಿ ಬರಮಾಡಿ ಕೊಳ್ಳಲಾಯಿತು.
  ಈ ಹಿಂದೆ ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ನಂತರ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದ ನಾಗನಗೌಡ ತಾಲೂಕು ಉಪಾಧ್ಯಕ್ಷರಾಗಿದ್ದರು. ಬೆಜೆಪಿಯಲ್ಲಿ ಸಹಕಾರ ಸಿಗಲಿಲ್ಲವೆಂದು ಬೇಸತ್ತು, ಕಳೆದ ತಿಂಗಳು ಬಿಜೆಪಿಗೆ ರಾಜಿನಾಮೆ ನೀಡಿದ್ದರು.
  ಮಹಲಿಂಗಪ್ಪನವರ ಆಪ್ತರಾದ ಮಳೂರ ಜಗದೀಶ್ ಕೆಜೆಪಿಗೆ ಸೇರಿದರು. ಮುಂಬರುವ ದಿನಗಳಲ್ಲಿ ಇನ್ನೂ ಹಲವಾರು ಪ್ರಮುಖರು ತಾಲೂಕಿನಾದ್ಯಂತ ಕಾಂಗ್ರೇಸ್ ತೊರೆದು ಕೆಜೆಪಿ ಸೇರಲಿದ್ದಾರೆ ಎಂದು ನಾಗನಗೌಡ ಹಾಗು ಜಗದೀಶ್ ತಿಳಿಸಿದರು.
  ಕೆಜೆಪಿ ಮುಖಂಡ ಅಗಡಿ ಅಶೋಕ, ಮಾಜಿ ಶಾಸಕ ಮಹಲಿಂಗಪ್ಪ, ಪಪಂ ಮಾಜಿ ಅಧ್ಯಕ್ಷ ಲೋಕೇಶ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.