ಶಿವಮೊಗ್ಗ

ಆಗುಂಬೆ ಭಾಗದಲ್ಲಿ ಹಣದ ಭೋರ್ಗರೆತ

Published On :

- ಸತ್ಯನಾರಾಯಣ
ಕ.ಪ್ರ.ವಾರ್ತೆ, ತೀರ್ಥಹಳ್ಳಿ,  ಮೇ 5
ಆಗುಂಬೆ ಮಳೆಗೆ ಫೇಮಸ್ಸು. ಇಲ್ಲಿನ ಮಳೆಯ ಭೋರ್ಗರೆತವೇ ಒಂದು ವಿಶೇಷ. ಆದರೆ, ಮತದಾನದ ದಿನ ಮೇ 5ರಂದು ಇಲ್ಲಿನ ಜನ ಹಣದ ಭೋರ್ಗರೆತ ಕಂಡು ಅವಕ್ಕಾಗಿ ಹೋಗಿದ್ದರು.  ಮಳೆಯಿಂದ ಬೆಚ್ಚಿಬೀಳದ ಜನ ಕುರುಡು ಕಾಂಚಾಣದ ನೆಗೆತ ಕಂಡು ದಂಗಾಗಿಹೋಗಿದ್ದರು. ಅಷ್ಟೇ ಅಲ್ಲ ರಾಜಕೀಯದವರ ಅಬ್ಬರಕ್ಕೆ ಚುನಾವಣಾ ಸಿಬ್ಬಂದಿಯೂ ಏನೂ ಮಾಡಲಾಗದೇ ಹೋದರು.
ಹೊಸಗದ್ದೆ ಬೂತ್ ಮುಂಭಾಗವೇ ಭಾನುವಾರ ಮುಂಜಾನೆ ಕೆಲ ರಾಜಕೀಯ ಪಕ್ಷದ ಕಾರ್ಯಕರ್ತರು ಮತದಾರರ ಜೇಬಿಗೆ ಹಣ ತುರುಕಿ ಮತ ಕೇಳುತ್ತಿದ್ದುದು ಕಂಡುಬಂತು. ಇದನ್ನು ತಡೆಯುವ ಪ್ರಯತ್ನ ನಡೆಯಿತಾದರೂ ಉಳಿದ ಪಕ್ಷದವರೂ ಸಹ ಕೈಚೆಲ್ಲಿ ಕುಳಿತರು. ಪ್ರಮುಖವಾಗಿ ಕೆಜೆಪಿ ಮೇಲೆ ಗಂಭೀರ ಆರೋಪ ಕೇಳಿಬಂತು.
ಚುನಾವಣೆಗೆ ಎರಡು, ಮೂರು ದಿನಗಳ ಮುನ್ನ ಒಂದು ಸುತ್ತಿನಲ್ಲಿ ಹಣ ಹಂಚಲಾಗಿತ್ತು. ಈಗ ಮತ್ತೆ ಹಣ ಕೊಡುತ್ತಿದ್ದಾರೆ. ಮನೆಗೆ ಹಣ, ಸೀರೆ ಕೊಡಲು ಬಂದಾಗ ಧರ್ಮಸ್ಥಳ ಮಂಜುನಾಥ ಸ್ವಾಮಿ, ಸಿಗಂಧೂರೇಶ್ವರಿ, ಮಂದರ್ತಿ ದೇವರ ಫೋಟೋವನ್ನು ಮುಂದಿಟ್ಟು ಪ್ರಮಾಣ ಮಾಡಿಸಿಕೊಂಡಿದ್ದೂ ನಡೆದಿದೆ ಎಂದು ಮತದಾರರೇ ಕನ್ನಡಪ್ರಭಕ್ಕೆ ವಿವರಿಸಿದರು.
ನಕಲಿ ಬಂಗಾರ: ಪ್ರಾದೇಶಿಕ ಪಕ್ಷವೊಂದರ ಕಾರ್ಯಕರ್ತರು ಹಂಚಿದ ಬೆಳ್ಳಿ ತಟ್ಟೆ- ಬಟ್ಟಲು ನಕಲಿ ಎಂಬುದು ಬಹಿರಂಗವಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಯಿತು. ಅಲ್ಲದೇ, ಪಕ್ಷದ ಅಭ್ಯರ್ಥಿ ವಿರುದ್ಧ ತೀವ್ರ ಅಸಮಾಧಾನವೂ ವ್ಯಕ್ತವಾಯಿತು.
ಅರಿಶಿಣ, ಕುಂಕುಮ ತುಂಬಿದ ಬಟ್ಟಲು ಕೊಟ್ಟಿದ್ದು, ಅದನ್ನು ಚಿನ್ನ, ಬೆಳ್ಳಿ ಅಂಗಡಿಯಲ್ಲಿ ಪರಿಶೀಲನೆಗೊಳಪಟ್ಟಾಗ ಅದು ವೈಟ್‌ಮೆಟಲ್ ಎಂದು ಗೊತ್ತಾಗಿದೆ. ಮತದಾರರನ್ನು ಮೋಸಗೊಳಿಸಿರುವುದಕ್ಕೆ ಆ ಪಕ್ಷ ಬೆಲೆ ತೆರಬೇಕಾಗುತ್ತದೆ ಎಂದು ತಲ್ಲೂರಂಗಡಿಯಲ್ಲಿ ಮತದಾರರೊಬ್ಬರು ತಿಳಿಸಿದರು. ಇನ್ನು ಕುಂದಾದ್ರಿ ಭಾಗದ ಮತಗಟ್ಟೆಯಲ್ಲಿ ಪ್ರತಿ ಮತ ಒಂದು ಸಾವಿರ ರುಪಾಯಿವರೆಗೆ ಬಿಕರಿಯಾಗಿದ್ದನ್ನು ಮತದಾರರೇ ಒಪ್ಪಿಕೊಂಡರು. ಭ್ರಷ್ಟಾಚಾರ ಮಾಡಿದ ಹಣವನ್ನು ನಾವು ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ ಎನಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಇರುವುದರಿಂದ ಮೂಲತಃ ಈ ಭಾಗದವರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಮತದಾನಕ್ಕೆ ಕರೆತರುವ ಕೆಲಸವಾಗಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದರು. ವಾಹನ ಪ್ರಯಾಣ ಭತ್ಯೆ, ಪ್ರತಿ ಮತಕ್ಕೆ ಇಂತಿಷ್ಟು ಎಂದು ಹಣ ನಿಗದಿ ಮಾಡಿ ಮತದಾರರನ್ನು ಬೆಂಗಳೂರಿಂದ ಕರೆಸಲಾಗಿದೆ ಎಂದು ವಿವರಿಸಿದರು.
ಕೆಜೆಪಿ ಮೇಲೆ ಗುಡುಗು: ಸಹಕಾರ ಸಂಘಗಳು ನೀಡುವ ಸಾಲದ ವಿಚಾರವನ್ನು ಕೆಜೆಪಿ ಪ್ರಸ್ತಾಪಿಸಿ ಮತ ಸೆಳೆಯಲು ಅಸ್ತ್ರವಾಗಿ ಬಳಸಿಕೊಂಡಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಗಂಭೀರ ಆರೋಪವಾಗಿತ್ತು. ಸೊಸೈಟಿಗಳಲ್ಲಿ ಸಾಲ ಬೇಕಿದ್ದರೆ ಕೆಜೆಪಿಗೆ ಮತ ಹಾಕಿ. ಹೆಚ್ಚು ಸಾಲ ಬೇಕಿದ್ದರೂ ಕೆಜೆಪಿಗೆ ಓಟುಹಾಕಬೇಕು ಎಂದು ಸೊಸೈಟಿ ಸದಸ್ಯರನ್ನೇ ಪಕ್ಷದ ಮುಖಂಡರು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಟೀಕಿಸಿದರು.
ಶಾಂತವೇರಿ ಗೋಪಾಲಗೌಡರು, ಕಡಿದಾಳು ಮಂಜಪ್ಪನವರ ಹೆಸರನ್ನು ಅಭ್ಯರ್ಥಿಗಳು ಪ್ರಚಾರ ಸಂದರ್ಭದಲ್ಲಿ ಬಳಸಿಕೊಂಡಿದ್ದೂ ಸಹ ಪ್ರಜ್ಞಾವಂತ ಮತದಾರರ ಕೆಂಗಣ್ಣಿಗೆ ಗುರಿಯಾಗಿದೆ. ಸೀರೆ ಹಣ ಹಂಚುವವರು ಗೋಪಾಲಗೌಡರ ಹೆಸರನ್ನು ಪ್ರಚಾರದಲ್ಲಿ ಪ್ರಸ್ತಾಪಿಸುವುದು ಎಷ್ಟು ಸರಿ ಎಂಬುದು ಮಂಜಪ್ಪನವರ ಪ್ರಶ್ನೆ.
ಒಟ್ಟಾರೆ ಈ ಚುನಾವಣೆಯಲ್ಲಿ ಹರಿದಾಡಿದ ಹಣದ ಬಗ್ಗೆ ಸಾರ್ವಜನಿಕ ವಲಯದಲ್ಲೇ ಗಂಭೀರ ಅಸಮಾಧಾನ ವ್ಯಕ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.