ನಕ್ಸಲರ ಕರೆ ತಿರಸ್ಕರಿಸಿದ ಮತದಾರ
-ಶ್ರೀಕಾಂತ ಭಟ್
ತಲ್ಲೂರಂಗಡಿ (ತೀರ್ಥಹಳ್ಳಿ): ಏಪ್ರಿಲ್ 18ರಂದು ನಕ್ಸಲ್ ಪಡೆ ಮತದಾನದ ಬಹಿಷ್ಕಾರಕ್ಕೆ ಕರೆ ನೀಡಿತ್ತು. ನಕ್ಸಲ್ ಪ್ರಭಾವಿತ ಪರಿಧಿಯಲ್ಲಿ ಬರುವ ಹುಲಸೆಯಲ್ಲಿ (ಜಿಲ್ಲಾ ಗಡಿ) ಕರಪತ್ರ ಹಂಚಿ, ಪೋಸ್ಟರ್ ಅಂಟಿಸಿ ಜನರಲ್ಲಿ ಭೀತಿ ಹುಟ್ಟಿಸಿದ್ದು ಈಗ ಇತಿಹಾಸ. ಆದರೆ, ನಕ್ಸಲರ ಈ ಕರೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ ಮಲೆನಾಡ ಮಂದಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸುವ ಮೂಲಕ ಪ್ರತ್ಯುತ್ತರ ಕೊಟ್ಟಿದ್ದಾರೆ.
2008ರಲ್ಲಿ ನಕ್ಸಲರು ರಾಜ್ಯ ರಸ್ತೆ ಸಾರಿಗೆ ಬಸ್ಗೆ ಬೆಂಕಿ ಇಟ್ಟ ಸ್ಥಳ ಗುಬ್ಬಿಗ. 2010ರಲ್ಲಿ ಅರುಣ ಎಂಬುವರ ಮನೆಯ ಅಡಕೆ ಗೋದಾಮಿಗೆ ನಕ್ಸಲರು ಬೆಂಕಿಕೊಟ್ಟ ಸ್ಥಳ ಹಳ್ಳಿ ಬಿದರಗೋಡು. ಪೊಲೀಸ್ ಎಎಸ್ಐ ವೆಂಕಟೇಶ್ ಎನ್ಕೌಂಟರ್ ಆದ ಸ್ಥಳ ಹಂದಲಸು. ವಿಶೇಷವೆಂದರೆ ಈ ಘಟನೆಗಳು ನಡೆದ ಸಮೀಪದ ಮತಗಟ್ಟೆಗಲ್ಲಿ ಹೆಚ್ಚಿನ ಮತದಾನ ನಡೆದಿದೆ.ನಕ್ಸಲರು ಆಗಿಂದಾಗ್ಗೆ ಕಾಣಿ ಸಿಕೊಂಡ ನಾಬಳದಲ್ಲಿ ಮಧ್ಯಾಹ್ನ 2.30ರ ಹೊತ್ತಿಗೆ ಶೇ.72ಕ್ಕಿಂತ ಹೆಚ್ಚು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಗೆ ಕೆಂದಾಳುಬೈಲು ಮತಗಟ್ಟೆಯಲ್ಲಿ ಶೇ.75 ಮತದಾನವಾಗಿದ್ದು ವಿಶೇಷ. ಹೊಸಗದ್ದೆ, ತಲ್ಲೂರು, ಹಳ್ಳಿ ಬಿದರಗೋಡು, ಬಿದರಗೋಡು, ಹಂದಲಸು, ಆಗುಂಬೆ, ಹೊನ್ನೆತಾಳು, ಚೆಂಗಾರು, ಗುಡ್ಡೆಕೇರಿ ಸೇರಿದಂತೆ ಬಹುತೇಕ ನಕ್ಸಲ್ ಪೀಡಿತ ಎಲ್ಲಾ ಗ್ರಾಮಗಳಲ್ಲೂ ಉತ್ತಮ ಮತದಾನ ನಡೆಯಿತು.
ಬಿಎಸ್ಎಫ್ ನಿಯೋಜನೆ: ನಕ್ಸಲರ ಮತದಾನ ಬಹಿಷ್ಕಾರದ ಹಿನ್ನೆಲೆಯಲ್ಲಿ ಈ ಗ್ರಾಮಗಳಲ್ಲಿ ಶಸ್ತ್ರ ಸಜ್ಜಿತ ಬಿಎಸ್ಎಫ್ ಯೋಧರೊಂದಿಗೆ, ಎಎನ್ಎಫ್ (ನಕ್ಸಲ್ ನಿಗ್ರಹ ಪಡೆ), ಎಎನ್ಎಸ್ (ನಕ್ಸಲ್ ನಿಗ್ರಹ ದಳ) ಹಾಗೂ ಸ್ಥಳೀಯ ಪೊಲೀಸರು ಬಿಗಿ ಕಾವಲಿದ್ದು ಸ್ಥಳೀಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವಂತೆ ಮಾಡಿದರು. ಬೂತ್ ಪಕ್ಕದಲ್ಲೇ ಮನೆ ಇದ್ದರೂ ಮತ ಚಲಾಯಿಸಲು ಉದಾಸೀನ ಮಾಡುವುದು ನಗರ ಪ್ರದೇಶದ ಅಕ್ಷರಸ್ಥರ ಸಂಪ್ರದಾಯ. ಆದರಿಲ್ಲಿ ಸರಿಸುಮಾರು 5- 6 ಕಿಲೋಮೀಟರ್ ದೂರದಿಂದ ಮತ ಕೇಂದ್ರಕ್ಕೆ ಬಂದು ಮತ ಚಲಾಯಿಸಿ ಹೆಮ್ಮೆ ಪಟ್ಟವರೆಷ್ಟೋ. ಮತ ಕೇಂದ್ರಗಳಿಂದ 4 ಕಿಲೋಮೀಟರ್ ದೂರದಲ್ಲಿರುವ ಉಲ್ಮಡಿ, ತಲ್ಲೂರಂಗಡಿ, 5 ಕಿಲೋಮೀಟರ್ ಅಂತರದಲ್ಲಿರುವ ಮಾಕೋಡು ಮುಂತಾದ ಕಡೆಯಿಂದ ಹಳ್ಳಿಹೈದರು ಜಾತ್ರೆಗೆ ಬಂದವರಂತೆ ಮತಚಲಾಯಿಸಲು ಬಂದಿದ್ದರು.
ಚುನಾವಣಾ ವಿಷಯಗಳು: ನಕ್ಸಲ್ ಪೀಡಿತ ಗ್ರಾಮಗಳ ಪ್ರಮುಖ ಚುನಾವಣಾ ವಿಷಯಗಳೇ ಅಚ್ಚರಿ ಮೂಡಿಸುತ್ತವೆ. ಸ್ವಾತಂತ್ರ್ಯ ಬಂದು 66 ವರ್ಷಗಳಾದರೂ ಇಲ್ಲಿನ ಅನೇಕ ಗ್ರಾಮಗಳಿಗೆ ರಸ್ತೆಯ ಕುರುಹೂ ಇಲ್ಲ. ನಮ್ಮ ಗ್ರಾಮಗಳಿಗೆ ರಸ್ತೆಗಳನ್ನು ಮಾಡಿಸಿಕೊಡಿ ಎಂಬುದು ಪ್ರಧಾನ ವಿಷಯಾಗಿತ್ತು. ಪ್ರಮುಖವಾಗಿ ತಲ್ಲೂರಂಗಡಿ- ಮಾಸ್ತಿಕಟ್ಟೆ ರಸ್ತೆ, ಬಿದರಗೋಡು- ಆಗುಂಬೆ ರಸ್ತೆ ಅಭಿವೃದ್ಧಿಯಾಗಬೇಕು. ಅದೇ ರೀತಿ ದಕ್ಷಿಣದ ಚಿರಾಪುಂಜಿ ಎನಿಸಿಕೊಂಡರೂ ಆಗುಂಬೆ ಭಾಗದ ಗ್ರಾಮಗಳು ಬೇಸಿಗೆಯಲ್ಲಿ ಇನ್ನಿಲ್ಲದಂತೆ ನೀರಿಗೆ ಹಾಹಾಕಾರ ಎದುರಿಸುತ್ತಿವೆ. ಹೀಗಾಗಿ ಆದ್ಯತೆ ಮೇಲೆ ಕುಡಿವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಅಭ್ಯರ್ಥಿಗಳ ಮುಂದೆ ಬೇಡಿಕೆ ಇಟ್ಟಿದ್ದೇವೆ ಎಂದು ಶರತ್ ಕನ್ನಡಪ್ರಭಕ್ಕೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

