ಶಿವಮೊಗ್ಗ

ಬಿಎಸ್‌ವೈ ಗೆಲವು: ಕಾರ್ಯಕರ್ತರ ಹರ್ಷ

Published On :

ಕ.ಪ್ರ.ವಾರ್ತೆ, ಶಿಕಾರಿಪುರ ಮೇ 8
ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಭರ್ಜರಿ ಗೆಲವು ಸಾಧಿಸಿದ್ದು, ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಮಾಳೇರಕೇರಿಯಲ್ಲಿನ ಕಚೇರಿಗೆ ಆಗಮಿಸಿ ಹರ್ಷ ವ್ಯಕ್ತಪಡಿಸಿದರು.
ಮತಎಣಿಕೆ ಕಾರ್ಯ ಬುಧವಾರ ಬೆಳಿಗ್ಗೆ ಆರಂಭವಾಗುತ್ತಿದ್ದಂತೆ ಮಾಳೇರಕೇರಿಯಲ್ಲಿನ ಪಕ್ಷದ ಕಚೇರಿಗೆ ನಿಧಾನವಾಗಿ ಆಗಮಿಸುತ್ತಿದ್ದ ಕಾರ್ಯಕರ್ತರು, ಅಭಿಮಾನಿಗಳಿಗೆ ದೂರದರ್ಶನದ ಮೂಲಕ ಫಲಿತಾಂಶ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಎಣಿಕೆ ಆರಂಭದಿಂದಲೂ ಮುನ್ನಡೆಯನ್ನು ಸಾಧಿಸಿದ್ದ ಯಡಿಯೂರಪ್ಪನವರಿಗೆ ಜೈಕಾರ ಮುಗಿಲು ಮುಟ್ಟಿತ್ತು.
ಯಡಿಯೂರಪ್ಪನವರ ಗೆಲುವಿನ ಜತೆಗೆ ಈಶ್ವರಪ್ಪನವರ ಹಿನ್ನಡೆಯ ಬಗ್ಗೆ ಹೆಚ್ಚು ಸಂತಸ ವ್ಯಕ್ತಪಡಿಸುತ್ತಿದ್ದ ಕಾರ್ಯಕರ್ತರು ತಮ್ಮ ಮುಖಂಡರ ಬಗ್ಗೆ ಹಗುರವಾಗಿ ಟೀಕೆ ಮಾಡುತ್ತಿದ್ದ ವ್ಯಕ್ತಿಗೆ ಸೂಕ್ತ ಉತ್ತರವನ್ನು ಶಿವಮೊಗ್ಗ ಜನತೆ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಧ್ಯಾಹ್ನದ ವೇಳೆಗೆ ಗೆಲುವು ನಿಚ್ಚಳವಾಗುತ್ತಿದ್ದಂತೆ ಕಾರ್ಯಕರ್ತರು ಪಕ್ಷದ ಬಾವುಟ, ಟೋಪಿ ಧರಿಸಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ಯಡಿಯೂರಪ್ಪನವರಿಗೆ ಜೈಕಾರ ಹಾಕಿ ಸಂಭ್ರಮಿಸಿದರು.
ಪಟ್ಟಣದ ಪ್ರಮುಖ ಬೀದಿಯಲ್ಲಿ ಕಾರ್, ಬೈಕ್ ರ್ಯಾಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಯಡಿಯೂರಪ್ಪನವರು ಪುತ್ರ ಸಂಸದ ರಾಘವೇಂದ್ರ ಸಹಿತ ಕುಟುಂಬದ ಎಲ್ಲಾ ಸದಸ್ಯರು ಶಿವಮೊಗ್ಗಕ್ಕೆ ತೆರಳಿದ್ದರು.
6ನೇ ಜಯ ದಾಖಲು
ಶಿವಮೊಗ್ಗ: ಶಿಕಾರಿಪುರ ಕ್ಷೇತ್ರದಿಂದ ಬಿ.ಎಸ್. ಯಡಿಯೂರಪ್ಪ ಸತತವಾಗಿ ಏಳು ಬಾರಿ ಸ್ಪರ್ಧಿಸಿದ್ದು, ಈಗ 6ನೇ ಜಯ ದಾಖಲಿಸಿದ್ದಾರೆ. 1983ರಿಂದ 2008ರವರೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇವರು, 1999ರಲ್ಲಿ ಕಾಂಗ್ರೆಸ್ ಪಕ್ಷದ ಮಹಾಲಿಂಗಪ್ಪ ಅವರಿಂದ ಪರಾಜಿತಗೊಂಡಿದ್ದರು. ಆಗ ಅವರನ್ನು ಪಕ್ಷ ವಿಧಾನಪರಿಷತ್‌ಗೆ ಕಳುಹಿಸಿಕೊಟ್ಟಿತ್ತು. ಈ ಬಾರಿ ಯಡಿಯೂರಪ್ಪ ಕೆಜೆಪಿಯಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದಾರೆ.
--
ಮತ್ತೆ ಗೆಲವಿನ ಶಿಕಾರಿ...

ಶಿವಮೊಗ್ಗ: 2008ರ ಚುನಾವಣೆಯಲ್ಲಿ 45 ಸಾವಿರ ಅಂತರದಿಂದ ಬಂಗಾರಪ್ಪ ವಿರುದ್ಧ ಗೆಲುವು ಸಾಧಿಸಿದ್ದ ಬಿ.ಎಸ್. ಯಡಿಯೂರಪ್ಪ ಈ ಬಾರಿಯೂ ಗೆಲವಿನ ಶಿಕಾರಿ ಮುಂದುವರಿಸಿದ್ದಾರೆ. ಆದರೆ ಗೆಲುವಿನ ಅಂತರ ಮಾತ್ರ ಕಡಿಮೆಯಾಗಿದೆ. ತಮ್ಮ ಒಂದು ಕಾಲದ ಸ್ನೇಹಿತ ಶಾಂತಣ್ಣರನ್ನು 24 ಸಾವಿರ ಮತಗಳಿಂದ ಸೋಲಿಸಿದ್ದಾರೆ.
ಯಡಿಯೂರಪ್ಪನವರಿಗೆ ಈ ಚುನಾವಣೆ ಸುಲಭವಲ್ಲ ಎಂದೇ ಹೇಳಲಾಗುತ್ತಿತ್ತು. ಬಿಎಸ್‌ವೈ ಅವರನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ಇನ್ನಿಲ್ಲದ ತಂತ್ರಗಾರಿಕೆ ಮಾಡಿದ್ದರೂ ಅವೆಲ್ಲವನ್ನೂ ಮೆಟ್ಟಿನಿಂತ ಬಿಎಸ್‌ವೈ ಜನರ ಮನಗೆಲ್ಲುವಲ್ಲಿ ಸಫಲರಾದರು.
ಗೆಲುವಿಗೆ ಕಾರಣ: ತಾಲೂಕಿನಲ್ಲಿ ಕೈಗೊಂಡ ವ್ಯಾಪಕ ಅಭಿವೃದ್ಧಿ ಹಿನ್ನೆಲೆಯಲ್ಲಿ ಮತದಾರರು ಅವರನ್ನು ಜನತೆ ಈ ಬಾರಿ ಬೆಂಬಲಿಸಿದ್ದಾರೆ. ಶಿಕಾರಿಪುರವನ್ನು ಜಿಲ್ಲೆ ಮಾಡಬೇಕೆಂದು ನಿರ್ಮಿಸಲಾದ ಕಟ್ಟಡ, ಕುಡಿಯುವ ನೀರಿನ ಸೌಲಭ್ಯ, ರಸ್ತೆಗಳು ಹಾಗೆಯೇ ಶಿರಾಳಕೊಪ್ಪ ಪಟ್ಟಣವನ್ನು ತಾಲೂಕು ಕೇಂದ್ರ ಮಾಡಬೇಕೆಂದು ಕಚೇರಿಗಳ ಸ್ಥಾಪನೆ ಕಾಲೇಜು ಹಾಗು ಇತರ ಕಟ್ಟಡ ಜನರ ಮನಸ್ಸಿನಲ್ಲಿ ಉಳಿಯಿತು.
ರಾಜ್ಯದಲ್ಲಿ ಚುನಾವಣೆ ನಂತರ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದಾಗ ಕೆಜೆಪಿ ರಾಜ್ಯ ಸರ್ಕಾರದಲ್ಲಿ
ಕೆಜೆಪಿ ಪಾಲುದಾರರಾಗ ಬಹುದು ಎಂಬ ಆಸೆ ತಾಲೂಕಿನ ಮತದಾರರಲ್ಲಿ ಇತ್ತು. ಹಾಗೆಯೇ ಕರ್ನಾಟಕದಲ್ಲಿಯೂ ಪ್ರಾದೇಶಿಕ ಪಕ್ಷ ಬರಬಹುದು ಎಂಬ ಕಲ್ಪನೆ ಇಲ್ಲಿಯ ಮತದಾರರಲ್ಲಿ ಮನದಲ್ಲಿ ಮೂಡಿಬಂದಿತ್ತು.
ವ್ಯಕ್ತಿಗತವಾಗಿ ಗೆಲವು: ಶಿಕಾರಿಪುರ ತಾಲೂಕಿನಲ್ಲಿ ಪ್ರಮುಖ ಕೋಮಿನ ಜನಾಂಗವೆಂದರೆ ಲಿಂಗಾಯತರು. ಮೊದಲಿನಿಂದಲೂ ಯಡಿಯೂರಪ್ಪನವರನ್ನು ಬೆಂಬಲಿಸುತ್ತಾ ಬಂದಿರುವ ಲಿಂಗಾಯತ ಜನಾಂಗ ಹೆಚ್ಚಾಗಿ ಅವರನ್ನು ಕೈ ಹಿಡಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯು ಲಿಂಗಾಯತ ಕೋಮಿಗೆ ಸೇರಿದ್ದರೂ ವ್ಯಕ್ತಿಗತವಾಗಿ ಯೋಚಿಸಿ ಯಡಿಯೂರಪ್ಪನವರನ್ನು ಬೆಂಬಲಿಸಿದ್ದಾರೆ ಎಂಬ ಮಾತು ಕೇಳಿ ಬಂದಿವೆ.
ಬಗರ್‌ಹುಕುಂ ಸಾಗುವಳಿದಾರರ ಜ್ವಲಂತ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.