ರಾಯರ ಮಠದಲ್ಲಿ ವಿಶೇಷ ಪೂಜೆ
ಶಿಕಾರಿಪುರ: ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ಅತ್ಯಂತ ಶ್ರೇಷ್ಠವಾದ ಅಕ್ಷಯ ತೃತೀಯ ಅಂಗವಾಗಿ ಸೋಮವಾರ ಪಟ್ಟಣದ ಶ್ರೀ ಹುಚ್ಚೂರಾಯಸ್ವಾಮಿ ಕೆರೆಯ ದಡದಲ್ಲಿರುವ ನಂಜನಗೂಡು ಶಾಖಾ ಮಠದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು. ಅಲ್ಪಸಂಖ್ಯಾತ ಭಕ್ತರು ಶ್ರೀ ಮಠಕ್ಕೆ ಧಾವಿಸಿ ರಾಯರ ದರ್ಶನ ಪಡೆದು ಪುನೀತರಾದರು.ಅಕ್ಷಯ ತೃತೀಯ ಅಂಗವಾಗಿ ಪ್ರಾತಃಕಾಲದಲ್ಲಿ ರಾಯರ ವೃಂದಾವನಕ್ಕೆ ನೈರ್ಮಲ್ಯ ಪೂಜೆ, ಅಷ್ಟೋತ್ತರ ಸಹಿತ ಅರ್ಚನೆ, ಪಂಚಾಮೃತ ಅಭಿಷೇಕ,ಶ್ರೀಗಂಧ ಲೇಪನದಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಧಾರ್ಮಿಕ ಕಾರ್ಯದ ನಂತರದಲ್ಲಿ ಸಂಜೆ ಸ್ವಸ್ತಿ ವಾಚನ ಉಪನ್ಯಾಸವು ಪಂಡಿತ ವಾದಿರಾಜಾಚಾರ್ಯರವರಿಂದ ನಡೆಯಿತು. ರಾಯರ ವೃಂದಾವನಕ್ಕೆ ಪ್ರಧಾನ ಅರ್ಚಕ ರಾಘವೇಂದ್ರಾಚಾರರವರ ಗಂಧ ಲೇಪನ ಅಲಂಕಾರ ಭಕ್ತರಿಂದ ವಿಶೇಷ ಪ್ರಶಂಸೆಗೊಳಗಾಯಿತು. ಹಿರಿಯ ಗುರುರಾಘವೇಂದ್ರಾರಾವ್, ನರಸಿಂಹಮೂರ್ತಿ, ಸಿಬ್ಬಂದಿ ರಮೇಶ,ಪ್ರವೀಣ ಮತ್ತಿತರರು ಹಾಜರಿದ್ದರು.
ಬಸವ ಜಯಂತಿ ಕಾರ್ಯಕ್ರಮ
ಶಿವಮೊಗ್ಗ: ಬಸವಣ್ಣನವರ ಜಯಂತ್ಯುತ್ಸವದ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಬಸವ ಯುವಸೇನೆಯಿಂದ ಸೋಮವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿನ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಂಘಟನೆಯ 30 ಕಾರ್ಯಕರ್ತರು ರಕ್ತದಾನ ಮಾಡಿದರಲ್ಲದೇ, ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ವಿತರಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಸೇನೆಯ ಜಿಲ್ಲಾಧ್ಯಕ್ಷ ಎಚ್.ಪಿ. ಗಿರೀಶ್ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಸುಪ್ರೀತ್ ರುದ್ರಮುನಿ, ಪ್ರಧಾನ ಕಾರ್ಯದರ್ಶಿ ಜಿ.ಎಸ್. ಚೇತನ್, ಎಸ್.ಪಿ.ಪ್ರದೀಪ್ ಕುಮಾರ್, ಮಧು, ಎನ್.ಎಸ್. ಪ್ರಕಾಶ್, ಶಿವಕುಮಾರ್, ರುದ್ರಸ್ವಾಮಿ, ಸಿದ್ದು ಮೊದಲಾದವರು ಇದ್ದರು.
ಸಂಭ್ರಮಿಸಿದ ಕಾಂಗ್ರೆಸ್ಕಾರ್ಯಕರ್ತರು
ಸೊರಬ: ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮುಖಂಡ ಎಲ್. ಗಿರೀಶ್ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪದವಿ ದೊರೆತಿದ್ದು ಹರ್ಷ ತಂದಿದೆ. ಕುಮಾರ್ ಬಂಗಾರಪ್ಪ ಗೆಲ್ಲದಿದ್ದರೂ ಮುಖ್ಯಮಂತ್ರಿಗಳ ಮೂಲಕ ತಾಲೂಕು ಅಭಿವೃದ್ಧಿಗೋಸ್ಕರ ಶ್ರಮಿಸುತ್ತಾರೆ. ಪ್ರಸಕ್ತ ಚುನಾವಣೆಯಲ್ಲಿನ ಜೆಡಿಎಸ್ ಗೆಲವು ಕೇವಲ ಅನುಕಂಪದ ಗೆಲವು ಅಷ್ಟೆ ಎಂದರು. ಪಪಂ ಸದಸ್ಯ ಎಂ.ಡಿ. ಉಮೇಶ್ ಮಾತನಾಡಿ, ನೂತನ ಮುಖ್ಯಮಂತ್ರಿಗಳ ಅವಧಿಯಲ್ಲಿ ರಾಜ್ಯ ಅಭಿವೃದ್ಧಿ ಪಥದತ್ತ ಸಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು. ತಾಲೂಕು ಕಾಂಗ್ರೆಸ್ ಮುಖಂಡ, ಕಾರ್ಯಕರ್ತರನೇಕರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಅಭಿನಂದನೆ
ಶಿವಮೊಗ್ಗ: ಶಿವಮೊಗ್ಗ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಶಿವಮೊಗ್ಗದ ನೂತನ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು.
ಈ ಸಂದರ್ಭದಲ್ಲಿ ಎಕೆಬಿಎಂಎಸ್ ಸಂಘಟನಾ ಕಾರ್ಯದರ್ಶಿ ಮ.ಸ. ನಂಜುಂಡಸ್ವಾಮಿ, ಸಂಘದ ಅಧ್ಯಕ್ಷ ಆರ್. ಅಚ್ಯುತರಾವ್, ಉಪಾಧ್ಯಕ್ಷ ಯು.ಎಸ್. ಕೇಶವಮೂರ್ತಿ, ಕಾರ್ಯದರ್ಶಿ ಜಿ.ಎಸ್. ಅನಂತ, ಖಜಾಂಚಿ ಎಚ್.ಎನ್. ಛಾಯಾಪತಿ, ಸಂಘಟನಾ ಕಾರ್ಯದರ್ಶಿ ಎನ್.ಡಿ. ಶೇಷಗಿರಿ, ಎಚ್.ಸಿ. ರವಿಕುಮಾರ್ ಮೊದಲಾದವರು ಇದ್ದರು.
ಶೃಂಗೇರಿ ಸುತ್ತಮುತ್ತ ಧಾರಾಕಾರ ಮಳೆ
ಶೃಂಗೇರಿ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಕೆಲವೆಡೆ ಭಾನುವಾರ ಭಾನುವಾರ ಸಂಜೆ ಗುಡುಗು ಸಹಿತ ಧಾರಾಕರ ಮಳೆ ಸುರಿಯಿತು. ಬೆಳಿಗ್ಗೆಯಿಂದ ಉರಿ ಬಿಸಿಲ ವಾತಾವರಣ ಉಂಟಾಗಿತ್ತು. ಕಳೆದ ಕೆಲದಿನಗಳಿಂದ ಬಿಸಿಲು ಉಂಟಾಗಿತ್ತು. ಭಾನುವಾರದ ಮಳೆ ತಂಪೆರೆದು ಹೋಯಿತು.
ವಿಜಯೋತ್ಸವ
ಕ.ಪ್ರ.ವಾರ್ತೆ ನ.ರಾ.ಪುರ ಮೇ 13
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಪಟ್ಟಣದ ಕಾಂಗ್ರೆಸ್ ಕಚೇರಿಯಿಂದ ಹಳೇ ಮಂಡಗದ್ದೆ ಸರ್ಕಲ್ವರೆಗೆ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ವಾಟರ್ ಟ್ಯಾಂಕ್ ಸರ್ಕಲ್ ಸಮೀಪ ಪಟಾಕಿ ಸಿಡಿಸಿ ಸಂಭ್ರಮಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

