ಭದ್ರಾ ನಾಲೆಗೆ ಇನ್ನಷ್ಟು ದಿನ ನೀರು
ಶಿವಮೊಗ್ಗ: ಭದ್ರಾ ನಾಲೆಗೆ ನೀರು ಹರಿಸುವ ಸಂಬಂಧ ತುರ್ತು ಸಭೆ ಸೇರಿದ್ದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರಾವರಿ ಸಲಹಾ ಸಮಿತಿ ನಾಲೆಗಳಿಗೆ ನೀರು ಹರಿಸುವುದನ್ನು ಮುಂದುವರಿಸಲು ನಿರ್ಧರಿಸಿದೆ.
ಪ್ರಾಧಿಕಾರದ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷ ಗಿರೀಶ್ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭದ್ರಾ ವ್ಯಾಪ್ತಿಯ ನೂತನ ಶಾಸಕರೆಲ್ಲರೂ ಭಾಗವಹಿಸಿದ್ದು, ಅವರ ಉಪಸ್ಥಿತಿಯಲ್ಲಿ ಭದ್ರಾ ಬಲ ನಾಲೆಗೆ ಮೇ 23ರ ವರೆಗೆ ಹಾಗೂ ಎಡನಾಲೆಗೆ ಮೇ 28ರ ವರೆಗೆ ನೀರು ಹರಿಸಲು ನಿರ್ಧರಿಸಲಾಗಿದೆ.
ಈ ಹಿಂದಿನ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಬಲದಂಡೆ ನಾಲೆಗೆ ಹರಿಸುತ್ತಿರುವ ನೀರನ್ನು ಮಂಗಳವಾರ ಮಧ್ಯರಾತ್ರಿ ನಿಲ್ಲಿಸಬೇಕಿತ್ತು. ಆದರೆ, ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬತ್ತದ ಬೆಳೆಗೆ ಇನ್ನೂ ನೀರು ಬೇಕಾಗಿದ್ದು, ಈ ಹಂತದಲ್ಲಿ ನೀರು ನಿಲ್ಲಿಸಿದಲ್ಲಿ ತೆನೆ ಕಾಳು ಕಟ್ಟದೆ ಒಣಗಿ ಜೊಳ್ಳಾಗುತ್ತದೆ. ಹೀಗಾಗಿ ಮೇ ಅಂತ್ಯದವರೆಗೆ ನೀರು ಹರಿಸಬೇಕೆಂದು ಸಮಿತಿ ಸದಸ್ಯರು ಮತ್ತು ನೂತನ ಶಾಸಕರು ಮನವಿ ಮಾಡಿದರು.
23ರ ವರೆಗೆ ನೀರು: ಭದ್ರಾ ಜಲಾಶಯದಲ್ಲಿ ಮಂಗಳವಾರ 118 ಅಡಿ ನೀರಿತ್ತು. ಬಲದಂಡೆ ನಾಲೆ ಜಲಾಶಯದ 116 ಅಡಿ ಮಟ್ಟದಲ್ಲಿದ್ದು ಈಗಾಗಲೇ ನಾಲೆಗೆ ಹರಿಯುತ್ತಿರುವ ನೀರಿನ ವೇಗ ಕಡಿಮೆಯಾಗಿದೆ. ಮೇ 23ರ ವರೆಗೆ ಮಾತ್ರ ನೀರು ಹರಿಸಬಹುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಈ ನಾಲೆ ವ್ಯಾಪ್ತಿಯ ಬೆಳೆ ಒಣಗುವುದನ್ನು ತಪ್ಪಿಸಲು ಅಲ್ಲಿವರೆಗಾದರೂ ನೀರು ಹರಿಸಿ ಎಂದು ಎಲ್ಲಾ ಸದಸ್ಯರು ಒತ್ತಾಯಿಸಿದ್ದರಿಂದ ಅದಕ್ಕೆ ಅಧಿಕಾರಿಗಳು ಸಮ್ಮತಿಸಿದರು.
ಎಡದಂಡೆ ನಾಲೆಯು 57ನೇ ಅಡಿ ಮಟ್ಟದಲ್ಲಿದೆ. ಇನ್ನಷ್ಟು ದಿನ ನೀರು ಹರಿಸುವ ಅವಕಾಶವಿದೆ. ಆದರೂ ಮೇ 28ರ ವರೆಗೆ ಮಾತ್ರ ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ನೂತನ ಶಾಸಕರಾದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾರದಾ ಪೂರ್ಯಾನಾಯ್ಕ, ಭದ್ರಾವತಿಯ ಎಂ.ಜೆ. ಅಪ್ಪಾಜಿ, ತರೀಕೆರೆಯ ಶ್ರೀನಿವಾಸ್, ಚನ್ನಗಿರಿ ವಡ್ನಾಳ್ ರಾಜಣ್ಣ, ಹೊನ್ನಾಳಿ ಡಿ.ಜಿ. ಶಾಂತನಗೌಡ ಭಾಗವಹಿಸಿದ್ದರು. ಆಡಳಿತಾಕಾರಿ ಅಣ್ಣಯ್ಯ, ಸದಸ್ಯ ಕಾರ್ಯದರ್ಶಿ ಫಣಿರಾಜ್, ಡಾ. ಮಂಜಪ್ಪ, ಡಾ. ಗೊಲ್ಲರ್ ಸೇರಿದಂತೆ ಹಲವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

