ಜಿಲ್ಲೆಯ ನಿಗಮ- ಮಂಡಳಿಗೆ ಸಜ್ಜಾಗುತ್ತಿರುವ ನಾಯಕರು
ಶಿವಮೊಗ್ಗ: ನಿಗಮ- ಮಂಡಳಿಗೆ ನಾಮನಿರ್ದೇಶಿತರಾಗಿರುವ ಅಧ್ಯಕ್ಷರು, ಸದಸ್ಯರು ರಾಜಿನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ನ ಹಲವು ಹಿರಿಕಿರಿ ರಾಜಕಾರಣಿಗಳು ಹೊಸ ಬಟ್ಟೆ ಹೊಲಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ.
ಜಿಲ್ಲೆಯ ವ್ಯಾಪ್ತಿಯಲ್ಲಿ ಎರಡು ಪ್ರಾಧಿಕಾರಗಳು, ಒಂದು ಮಂಡಳಿ, ಒಂದು ಕಾರ್ಖಾನೆ ಹಾಗೂ ಹಲವು ಎಪಿಎಂಸಿಗಳಿವೆ. ಜತೆಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ನಾಮನಿರ್ದೇಶನವೂ ಸರದಿಯಲ್ಲಿದೆ. ಕಳೆದ 7 ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿದ್ದ ಕಾಂಗ್ರೆಸ್ಸಿಗರು ಅವಕಾಶ ಸಿಕ್ಕಿರುವ ಈ ಸಂದರ್ಭದಲ್ಲಿ ಚಾಪೆ ಹಾಸಲು ಮುಂದಾಗಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರ, ಅಚ್ಚುಕಟ್ಟು ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನ ಜಿಲ್ಲೆಯ ಮಟ್ಟಿಗೆ ಪ್ರತಿಷ್ಠಿತ ಸ್ಥಾನ. ಹೊಸ ಸರ್ಕಾರ ಬಂದ ನಂತರ ಈ ಹಿಂದಿನ ಸರ್ಕಾರ ನೇಮಿಸಿದ್ದ ನಿಗಮ-ಮಂಡಳಿಗಳ ಮುಖ್ಯಸ್ಥರಿಂದ ರಾಜಿನಾಮೆ ಪಡೆಯುವುದು ಸಂಪ್ರದಾಯ. ಆದರೆ ಹೊಸ ನಾಮನಿರ್ದೇಶನ ಸದ್ಯಕ್ಕಂತೂ ನಡೆಯುವುದು ಅನುಮಾನವೇ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹೇಳುವಂತೆ, ಇನ್ನಾರು ತಿಂಗಳಲ್ಲಿ ಲೋಕಸಭೆ ಚುನಾವಣೆ ಇದೆ. ಅಷ್ಟರೊಳಗೆ ಕೆಲವು ಮುಖ್ಯ ನಿಗಮ-ಮಂಡಳಿಗಳಿಗೆ ನಾಮನಿರ್ದೇಶನ ನಡೆಯಬಹುದೇ ಹೊರತು ಸಂಪೂರ್ಣ ಭರ್ತಿ ಮಾಡುವುದು ಅಸಾಧ್ಯ. ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಇರುವುದು ಇದೊಂದೇ ಅಸ್ತ್ರ. ಹಾಗಾಗಿ ಖಾಲಿಯಾಗುವ ಸ್ಥಾನಕ್ಕೆ ಸದ್ಯಕ್ಕೆ ಭರ್ತಿಯಾಗುವ ಸಾಧ್ಯತೆ ಕಡಿಮೆ.
ಲೆಕ್ಕಾಚಾರ: 9 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರು ರಾಜ್ಯ ಸಚಿವರ ಸ್ಥಾನಮಾನ ಹೊಂದಿರುತ್ತಾರೆ. ಹಾಗಾಗಿ ಈ ಸ್ಥಾನದ ಮೇಲೆ ಹಲವರ ಕಣ್ಣು ಇರುವುದು ನಿಶ್ಚಿತ. ಅದೇ ರೀತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಖುರ್ಚಿಯು ಬಹು ಬೆಲೆಬಾಳುವ ಸ್ಥಾನವಾಗಿರುವುದರಿಂದ ಇದೂ ಬೇಡಿಕೆ ಸ್ಥಾನವೇ.
ಆದರೆ ಮೈಸೂರು ಪೇಪರ್ ಮಿಲ್ ಅಧ್ಯಕ್ಷ ಸ್ಥಾನ ಮುಳ್ಳಿನ ಖುರ್ಚಿಯಾಗಿದೆ. ಈಗಾಗಲೇ 280 ಕೋಟಿ ರು. ನಷ್ಟ ಅನುಭವಿಸುತ್ತಿರುವ ಈ ಸಂಸ್ಥೆ ಅಧ್ಯಕ್ಷರಾಗುವವರ ಎದುರು ಭಾರಿ ಸವಾಲುಗಳಿವೆ.
ಕಾಗೋಡು ಕೃಪೆ: ಕಾಂಗ್ರೆಸ್ನ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರು ಸಚಿವರಾಗುವುದು, ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗುವುದು ಬಹುತೇಕ ಖಚಿತ. ಹಾಗಾಗಿ ನಿಗಮ-ಮಂಡಳಿಗೆ ಆಯ್ಕೆ ನಡೆಯುವುದು ಬಹುತೇಕ ಕಾಗೋಡು ತಿಮ್ಮಪ್ಪ ಅವರ ನಿರ್ದೇಶನದಂತೆ. ಹಾಗಾಗಿ ಇವರ ಕೃಪಾಕಟಾಕ್ಷವೂ ಬೇಕು.
ಸದ್ಯ ಜಿಲ್ಲೆಯ ಕೆಲವು ಕಾಂಗ್ರೆಸ್ ನಾಯಕರು ಕಾಗೋಡು ತಿಮ್ಮಪ್ಪರತ್ತ, ರಾಜ್ಯ ನಾಯಕರತ್ತ ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಅವಕಾಶ ಈಗಲೇ ಸಿಗುತ್ತದೆಯೋ, ಸಂಸತ್ ಚುನಾವಣೆ ಮುಗಿಯುವವರೆಗೂ ಕಾಯಬೇಕೋ ಎಂಬ ಆತಂಕವೂ ಅವರಲ್ಲಿದೆ.
ಜಿಲ್ಲೆಯಲ್ಲಿರುವ ಸ್ಥಾನಗಳು
- ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ, ಶಿವಮೊಗ್ಗ
- ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಶಿವಮೊಗ್ಗ
- ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ, ಶಿವಮೊಗ್ಗ
- ಮೈಸೂರು ಪೇಪರ್ ಮಿಲ್, ಭದ್ರಾವತಿ
- ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಶಿಕಾರಿಪುರ, ಭದ್ರಾವತಿ, ಹೊಸನಗರ ಎಪಿಎಂಸಿಗಳು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

