ಶಿವಮೊಗ್ಗ

ಶರಣ ಹೆಸರಲ್ಲಿ ಜಾತಿಗೊಂದು ಮಠ

Published On :

ಕ.ಪ್ರ.ವಾರ್ತೆ, ಚಿತ್ರದುರ್ಗ, ಮೇ 17
ಬಸವಣ್ಣನವರ ತತ್ವಾದರ್ಶಗಳನ್ನೇ ಮುಂದು ಮಾಡಿ ಶರಣರ ಹೆಸರಿನಲ್ಲಿ ಜಾತಿಗೊಂದು ಮಠ, ಮಠಕ್ಕೊಬ್ಬ  ಸ್ವಾಮಿಗಳು ಸೃಷ್ಟಿಯಾಗುತ್ತಿರುವುದು, ಮನುಷ್ಯರ ನಡುವೆ ಜಾತಿಯ ವಿಷ ಬೀಜ ಬಿತ್ತುತ್ತಿರುವುದು ದುರದೃಷ್ಟಕರ ಸಂಗತಿ ಎಂದು  ಡಾ. ಪಂಡಿತಾರಾಧ್ಯ ಶ್ರೀಗಳು ತಿಳಿಸಿದರು.
 ಹೊಸದುರ್ಗ ತಾಲೂಕಿನ ಸಾಣೆಹಳ್ಳಿಯಲ್ಲಿ ಶಿವಕುಮಾರ ಕಲಾಸಂಘ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಅಂತರ್ಜಾತೀಯ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾಜ ಕಲ್ಯಾಣ ಮುಖ್ಯ: ವಿಶ್ವವೇ ಬೆರಗುಗೊಳ್ಳುವ ವ್ಯಕ್ತಿತ್ವ ಬಸವಣ್ಣನವರದು. ಬಸವಣ್ಣನವರಿಗೆ ವ್ಯಕ್ತಿ ಕಲ್ಯಾಣಕ್ಕಿಂತ ಸಮಾಜ ಕಲ್ಯಾಣ ಮುಖ್ಯವಾಗಿತ್ತು. ಸಕಲ ಜೀವರಾಶಿಗಳಿಗೂ ಲೇಸನೇ ಬಯಸುವ, ಸಕಲ ಜೀವಜಂತುಗಳಲ್ಲೂ ದಯವಿರಿಸುವ, ಜಾತ್ಯತೀತ ಸಮಾಜದ ಕನಸು ಕಂಡು ಅದಕ್ಕಾಗಿ ತಮ್ಮ ಜೀವನವನ್ನೇ ಮುಡುಪಿಟ್ಟವರು ಬಸವಣ್ಣನವರು ಎಂದರು.
 ಜಾತಿಯಿಂದ ಯಾರೂ ದೊಡ್ಡವರಾಗುವುದಿಲ್ಲ. ದೊಡ್ಡವರಾಗುವುದು ಅವರವರ ವ್ಯಕ್ತಿತ್ವದಿಂದ. ಬಸವಣ್ಣ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ್ದರೂ ತಾನು ಮಾದಾರ ಚೆನ್ನಯ್ಯ ಮತ್ತು ಡೋಹರ ಕಕ್ಕಯ್ಯನವರ ಮನೆಯ ದಾಸ ಮತ್ತು ದಾಸಿಯರು ಬೆರಣಿಯ ಆಯಲು ಹೋಗಿ ಸಂಗವ ಮಾಡಿದಾಗ ಹುಟ್ಟಿದವನು ನಾನು ಎನ್ನುತ್ತಾರೆ ಎಂದರು.
ತಪ್ಪು ಹೆಜ್ಜೆ ಮಾರಕ: ಬಸವಣ್ಣನವರ ತತ್ವಗಳನ್ನು ಸರಿಯಾಗಿ ಗ್ರಹಿಸದೇ ತಪ್ಪು ಹೆಜ್ಜೆ ಇಡುತ್ತಿರುವುದು ಮನುಕುಲಕ್ಕೆ ಮಾರಕವಾದುದು. ಬಸವ ಜಯಂತಿಯಂದೇ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಸಿದ್ಧರಾಮಯ್ಯನವರು ಬಡತನ ರೇಖೆಗಿಂತ ಕೆಳಗಿರುವವರಿಗೆ ಕೆಜಿಗೆ ಒಂದು ರುಪಾಯಿನಂತೆ ಮೂವತ್ತು ಕೆಜಿ ಅಕ್ಕಿ ಕೊಡುವ  ಯೋಜನೆಯನ್ನು ಪ್ರಕಟಿಸಿದುದು ಮತ್ತು ಬಡವರ ಕೈಗೆ ಸಿಗುವಂತೆ ಅಗ್ಗದ ದರದಲ್ಲಿ ಮದ್ಯ ತಯಾರಿಕೆಗೆ ಮುಂದಾಗಿರುವುದು ದುರದೃಷ್ಟದ ಸಂಗತಿ ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದರು.
 ಇದು ಬಡವರಿಗೆ ದುಡಿಯುವುದು ಬೇಡ ಎಂದು ಪರೋಕ್ಷವಾಗಿ ಹೇಳಿದಂತೆ. ದುಡಿಮೆ ಬೇಡ ಎಂದರೆ ಬಡವ ಬಡವನಾಗಿ ಶ್ರೀಮಂತ ಶ್ರೀಮಂತನಾಗಿಯೇ ಇರುವುದು ಖಚಿತ. ಬಸವಣ್ಣ ಕಾಯಕವೇ ಕೈಲಾಸ ಎಂದು ಹೇಳಿದವರು. ಗುರುವಾದರೂ ಕಾಯಕದಿಂದಲೇ ಮುಕ್ತಿ ಎಂದವರು. ಹಣ್ಣು ಬೆಳೆಯುವುದನ್ನು ಕಲಿಸಬೇಕೇ ಹೊರತು ಕೇವಲ ಹಣ್ಣು ತಿನ್ನುವುದನ್ನಲ್ಲ. ಈ ವಿಷಯವಾಗಿ ಯಾರೊಬ್ಬ ಪ್ರಗತಿಪರರು, ಮಠಾಧೀಶರು ಸೊಲ್ಲೆತ್ತದಿರುವುದು ಸೋಜಿಗ ತಂದಿದೆ ಎಂದರು.
ಅವಿವೇಕದ ಕಾರ್ಯ: ಸರ್ಕಾರದ ಇಂತಹ ಅನಾಹುತಕಾರಿ, ಅವಿವೇಕದ ಕಾರ್ಯವನ್ನು ತಡೆಗಟ್ಟಿ ಕಿವಿ ಹಿಂಡುವ ಕೆಲಸ ಸಾರ್ವಜನಿಕರಿಂದ ಆಗಲಿ. ಬಸವ ಜಯಂತಿ ಒಂದು ದಿನಾಂಕಕ್ಕೆ ಮಾತ್ರ ಸೀಮಿತವಾಗದೇ ಬಸವ ತತ್ವದ ಆಚರಣೆ ನಿತ್ಯದ ಉಸಿರಾಗಬೇಕು ಎಂದವರು ಹೇಳಿದರು.
 ವಾಣಿಜ್ಯ ತೆರಿಗೆ ಅಧಿಕಾರಿ ಸಿ. ರುದ್ರಪ್ಪ ಮಾತನಾಡಿ ಬಸವಾದಿ ಶಿವಶರಣ ಬದುಕು ಬರಹಗಳನ್ನು ಸ್ವೀಕರಿಸಿ ಅದರಂತೆ ನಡೆದವರ ಬದುಕು ಸುಖಕರವಾಗಿರುವುದರಲ್ಲಿ ಯಾವ ಅನುಮಾನವೂ ಇಲ್ಲ. ಬಸವಣ್ಣನವರಂತೆ ಮನವರಿದು ಲಿಂಗ ಜಂಗಮಕ್ಕೆ ಪೂಜೆ ಸಲ್ಲಿಸುವುದೇ ನಿಜ ಭಕ್ತಿ ಎಂದರು.
 ಮಾಜಿ ಶಾಸಕ ಇಲ್ಕಲ್ ವಿಜಯಕುಮಾರ್, ಎ.ಸಿ. ಚಂದ್ರಣ್ಣ ಮಾತನಾಡಿದರು. ವಚನಗೀತೆ, ಜನಪದಗೀತೆ ಮತ್ತು ಸೋಬಾನೆ ಪದಗಳನ್ನು ಶಿವಸಂಚಾರದ ಕಲಾವಿದರಾದ ಕೆ. ದಾಕ್ಷಾಯಣಿ, ಎಚ್.ಎಸ್. ನಾಗರಾಜ್, ಮಂಜುಳಾ ಬದಾಮಿ, ಹೇಮಾಕ್ಷಮ್ಮ ಹಾಡಿದರು. ಸತೀಶ್ ತಬಲಾ ಬಾರಿಸಿದರು. ತಬಲಾ ವಾದಕ ಶರಣ್ ಹಾಗೂ ನಟಿ ಶ್ರುತಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಬಿ.ಎಸ್. ಶಿವಕುಮಾರ್ ಸ್ವಾಗತಿಸಿದರು. ಡಾ.ಓ. ಷಣ್ಮುಖಪ್ಪ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.