ಶಿವಮೊಗ್ಗ

ಮಾದರಿ ಕ್ಷೇತ್ರದ ಕನಸಿಗೆ ಕೊಡಲಿ ಪೆಟ್ಟು

Published On :

ಶಿಕಾರಿಪುರ: ಮೇ 24 ಮುಖ್ಯಮಂತ್ರಿಯಾಗಿದ್ದಾಗ ಸ್ವಕ್ಷೇತ್ರ ಶಿಕಾರಿಪುರವನ್ನು ಸಂಪೂರ್ಣ ಅಭಿವೃದ್ಧಿಗೊಳಿಸುವುದರ ಮೂಲಕ ರಾಜ್ಯದಲ್ಲಿಯೇ ಮಾದರಿಯಾಗಿಸುವ ಸಂಕಲ್ಪದಿಂದ ಪಟ್ಟಣದಲ್ಲಿ ಯಡಿಯೂರಪ್ಪನವರು ಕೈಗೊಂಡ ಹಲವು ಕಾಮಗಾರಿಗಳು ಇದೀಗ ತನ್ನ ಮೂಲ ಉದ್ದೇಶಕ್ಕೆ ದಕ್ಕೆಯಾಗಿ ಸಮಾಜಘಾತುಕ ಕೃತ್ಯಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸುವ ವೇದಿಕೆಯಾಗಿ ಬದಲಾಗತೊಡಗಿರುವುದು ಬಹು ದೊಡ್ಡ ವಿಪರ್ಯಾಸವಾಗಿದೆ.
 ಪಟ್ಟಣದ ಹುಚ್ಚೂರಾಯಸ್ವಾಮಿ ಕೆರೆ ಸಮೀಪದಲ್ಲಿ ಅಂದಾಜು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ ಇದೀಗ ಅನೈತಿಕ ಚಟುವಟಿಕೆಗೆ ತಾಣವಾಗಿರುವ ಯಾತ್ರಾತ್ರಿಗಳ ತಂಗುದಾಣ ಯಾತ್ರಿ ನಿವಾಸ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.    
ಯಾತ್ರಿ ನಿವಾಸ: ಕ್ಷೇತ್ರದ ಶಾಸಕ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜಕೀಯವಾಗಿ ಜನ್ಮ ನೀಡಿದ ಶಿಕಾರಿಪುರವನ್ನು ಸಂಪೂರ್ಣ ಮಾದರಿಯಾಗಿಸಿ ರಾಜ್ಯದ ನಕ್ಷೆಯಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳಬೇಕೆಂಬ ಮಹದಾಸೆಯಿಂದ ಪಟ್ಟಣದ ಆರಾದ್ಯದೈವ ಹುಚ್ಚೂರಾಯಸ್ವಾಮಿ ದೇವಸ್ಥಾನ, ಕೆರೆ, ಉದ್ಯಾನವನ ಮತ್ತಿತರ ಹಲವು ಕಾಮಗಾರಿ ಮಾಡಿ, ಪರಸ್ಥಳದ ಯಾತ್ರಾತ್ರಿಗಳು ತಂಗಲು ಅಂದಾಜು ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸವನ್ನು ನಿರ್ಮಿಸಲಾಗಿತ್ತು.
   ಉದ್ಘಾಟನೆಯಾಗಿ ಇದೀಗ ವರ್ಷ ಗತಿಸುವ ಮುನ್ನವೇ ಕಾವಲುಗಾರರಿಲ್ಲದೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯ ಸಂಪೂರ್ಣ ನಿರ್ಲಕ್ಷ್ಯದಿಂದಾಗಿ ಅನೈತಿಕ ಚಟುವಟಿಕೆಯ ತಾಣವಾಗಿ ಬದಲಾಗಿದೆ. ಸ್ಥಳದಲ್ಲಿ ನಿತ್ಯ ಮದ್ಯ, ಮಾಂಸ ಸೇವನೆ ಸಿಗರೇಟು, ಬೀಡಿ, ಮೊಟ್ಟೆ, ಗುಟ್ಕಾ ಮತ್ತಿತರ ವಸ್ತುಗಳು ಹೇರಳವಾಗಿ ಸಂಗ್ರಹವಾಗಿ ಸಮೀಪದ ಅತ್ಯುತ್ತಮ ಉದ್ಯಾನವನದ ಸುಂದರ ಸೊಬಗಿಗೆ ದಕ್ಕೆಯಾಗತೊಡಗಿದೆ.
ದೊಡ್ಡ ಪ್ರಯತ್ನಕ್ಕೆ ಪೆಟ್ಟು: ಪಟ್ಟಣದ ಅತ್ಯಂತ ಪ್ರಶಾಂತ ಸ್ಥಳವಾದ ಹುಚ್ಚೂರಾಯನ ಕೆರೆ ಸಮೀಪದಲ್ಲಿನ ಅತ್ಯುತ್ತಮ ಬೆಲೆಬಾಳುವ ರೈತರ ಜಮೀನನ್ನು ವಿರೋಧದ ಮಧ್ಯೆಯೂ ಖರೀದಿಸಿ ಸಂಪೂರ್ಣ ಪ್ರದೇಶವನ್ನು ಸುಂದರವಾಗಿಸಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ಮೂಲಕ ಶಿಕಾರಿಪುರವನ್ನು ರಾಜ್ಯದಲ್ಲಿಯೇ ವಿಶಿಷ್ಟವಾಗಿ ಗುರುತಿಸುವ ಯಡಿಯೂರಪ್ಪನವರ ಬಹುದೊಡ್ಡ ಪ್ರಯತ್ನಕ್ಕೆ ಇದೀಗ ಹಿನ್ನಡೆಯಾದಂತಾಗಿದೆ.
  ಯಾತ್ರಿ ನಿವಾಸದ ಸಂಪೂರ್ಣ ಆಗುಹೋಗು ನಿಯಂತ್ರಿಸಬೇಕಾದ ಪ್ರವಾಸೋದ್ಯಮ ಇಲಾಖೆ ದೂರದ ಜೋಗದಲ್ಲಿರುವುದರಿಂದ ಸಮಾಜಘಾತುಕ ಶಕ್ತಿಗಳು ನಿತ್ಯ ವಿಜೃಂಭಿಸಲು ಅವಕಾಶವಾಗಿದೆ ಎಂದು ವಿಹಿಂಪ ಉಪಾಧ್ಯಕ್ಷ ಪ್ರಕಾಶ್ ದೂರುತ್ತಾರೆ.
  ದೇವಸ್ಥಾನ, ಮಠ ಸಮೀಪದ ಕೋಟ್ಯಂತರ ವೆಚ್ಚದ ಸರ್ಕಾರಿ ಕಟ್ಟಡ ಅನಾಥವಾಗಿ ಅನೈತಿಕ ಚಟುವಟಿಕೆಗಾಗಿ ಬಳಕೆಯಾಗುತ್ತಿದ್ದರೂ ಈ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಿರುವ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಜವಾಬ್ದಾರಿಗೆ ತಲೆದೂಗಲೇಬೇಕಾದ ಪರಿಸ್ಥಿತಿ ಮಾತ್ರ ಶೋಚನೀಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.