ಹೊಂದಾಣಿಕೆಯಿಂದ ಜೀವನ ಯಶಸ್ಸು
ಶಿವಮೊಗ್ಗ: ವೈವಾಹಿಕ ಜೀವನದಲ್ಲಿ ಪತಿ, ಪತ್ನಿ ಇಬ್ಬರು ತಮ್ಮನ್ನು ತಾವು ಅರ್ಥಮಾಡಿಕೊಂಡು ಜೀವನ ನಡೆಸುವಂತಾಗಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಕಾಲಭೈರವೇಶ್ವರ ದೇವಾಲಯದ ವಾರ್ಷಿಕೋತ್ಸವ, ಉಚಿತ ಸಾಮೂಹಿಕ ವಿವಾಹ ಹಾಗೂ ಹಿರಿಯ ದಂಪತಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಜೀವನವೆಂಬ ನೌಕೆಯಲ್ಲಿ ಎಂದಿಗೂ ವಿರಸವೆಂಬ ಅಲೆ ಬರಬಾರದು. ಸ್ವಾಮರಸ್ಯ ಹಾಗೂ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಜವಾಬ್ದಾರಿ ಇಬ್ಬರಿಗೂ ಇದೆ: ಸಂಸಾರದಲ್ಲಿ ಏರುಪೇರುಗಳು ಸಾಮಾನ್ಯ. ಆದರೆ, ಅದನ್ನು ಸರಿದೂಗಿಸಿಕೊಂಡು, ಸಂಸಾರ ಎಂಬ ನೌಕೆಯನ್ನು ನಡೆಸುವ ಜವಾಬ್ದಾರಿ ಇಬ್ಬರಲ್ಲಿಯೂ ಇರಬೇಕು ಹಾಗೂ ಕುಟುಂಬ ವರ್ಗದವರೂ ಕೂಡ ಪತಿ, ಪತ್ನಿಯ ಆಶೋತ್ತರಗಳಿಗೆ ಸ್ಪಂದಿಸುವಂತಿರಬೇಕು ಎಂದು ತಿಳಿಸಿದರು.
ಪ್ರಸ್ತುತ ನಡೆಯುತ್ತಿರುವ ವಿವಾಹ ಕಾರ್ಯಕ್ರಮಗಳು ಹೆಚ್ಚು ಆಡಂಬರತೆ ಹಾಗೂ ದುಂದುವೆಚ್ಚಗಳಿಂದ ಕೂಡಿದ್ದು, ಅಂತಹ ಸಮಾರಂಭಗಳನ್ನು ನಡೆಸುವ ವ್ಯಕ್ತಿಗಳು, ತಮ್ಮ ಅಂತಸ್ತನ್ನು ತೋರ್ಪಡಿಸಿಕೊಳ್ಳುವ ಸಮಾರಂಭಗಳಾಗಿವೆ ಎಂದು ವಿಷಾದಿಸಿದರು.
ಇಂತಹ ದುಬಾರಿ ವಿವಾಹ ಸಮಾರಂಭಗಳನ್ನು ನಡೆಸುವ ಬದಲಾಗಿ, ಸಾಮೂಹಿಕ ವಿವಾಹ ಸಮಾರಂಭಗಳಿಗೆ ಹೆಚ್ಚಿನ ಒತ್ತನ್ನು ಪ್ರತಿಯೊಬ್ಬನಿರೂ ನೀಡಿದಾಗ ಮಾತ್ರ ವಿವಾಹಗಳಿಗೆ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳು ಹಾಗೂ ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರ ಮತ್ತು ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಶ್ರೀ ನಿರ್ಮಾಲಾನಂದ ಸ್ವಾಮೀಜಿಗಳನ್ನು ಭೇಟಿ ಮಾಡಿ ಆರ್ಶೀವಾದ ಪಡೆದರು. ಸಂಸದ ಬಿ.ವೈ. ರಾಘವೇಂದ್ರ, ಮುಖಂಡ ಎಸ್.ಎಸ್. ಜ್ಯೋತಿಪ್ರಕಾಶ್, ರುದ್ರೇಗೌಡ ಇದ್ದರು.
ವೇದಿಕೆಯಲ್ಲಿ ಶಾಸಕ ಕೆ.ಬಿ ಪ್ರಸನ್ನಕುಮಾರ್, ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀಪ್ರಸನ್ನನಾಥ ಸ್ವಾಮೀಜಿ, ಪುರುಷೋತ್ತಮಾನಂದ ಸ್ವಾಮೀಜಿ, ಶ್ರೀಯೋಗಿ ಜಗದೀಶ್ವರನಾಥ ಸ್ವಾಮೀಜಿ, ಹಾಸನ ಮಠದ ಶಂಭುನಾಥ ಸ್ವಾಮೀಜಿ, ಆದಿಹಳ್ಳಿ ಮಠದ ಶಿವರುದ್ರನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರದ ಶ್ರೀ ಮಂಗಳನಾಥ ಸ್ವಾಮೀಜಿ, ಲಕ್ಷ್ಮಣ್ನಾಥ್ ಭಾರತ್ ಜೀ, ರಾಜೇಶ್ನಾಥ್ ಜೀ ಸ್ವಾಮೀಜಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

