ಕೃಷಿ ಪ್ರೋತ್ಸಾಹ ಯೋಜನೆ ಯಶಸ್ವಿಗೆ ಸಹಕರಿಸಿ
ಶಿವಮೊಗ್ಗ: ಸರ್ಕಾರದ ಹಲವಾರು ಉಪಯುಕ್ತ ಯೋಜನೆಗಳಲ್ಲಿ ಕೃಷಿ ಪ್ರೋತ್ಸಾಹ ಯೋಜನೆ ಒಂದಾಗಿದ್ದು, ಇದರಿಂದ ಪ್ರತಿ ಸಸಿಗೆ 45 ರುಪಾಯಿ ಪ್ರೋತ್ಸಾಹಧನ ರೈತರಿಗೆ ನೇರವಾಗಿ ದೊರೆಯುತ್ತದೆ. ಹೀಗಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ಈ ಯೋಜನೆಯಡಿ ನೆಡಲು ಮುಂದೆ ಬರಬೇಕು ಎಂದು ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್ ಕರೆ ನೀಡಿದ್ದಾರೆ.
ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಏರ್ಪಪಡಿಸಿದ್ದ ವೃತ್ತ ಮಟ್ಟದ ಕೃಷಿ ಪ್ರೋತ್ಸಾಹ ಯೋಜನೆಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರೈತರು ಅಪೇಕ್ಷಿಸುವ ವಿವಿಧ ರೀತಿಯ ಸಸಿಗಳನ್ನು ಅರಣ್ಯ ಇಲಾಖೆಯಿಂದ ನೀಡಲಾಗುತ್ತದೆ. ರೈತರು ಯೋಜನೆ ಸದುಪಯೋಗಪಡೆದುಕೊಳ್ಳುವ ಜೊತೆಗೆ ಸಮಾಜಕ್ಕೆ ವಿಶೇಷ ಕೊಡುಗೆ ನೀಡಬೇಕೆಂದು ಹೇಳಿದರು.
ಕೃಷಿ ಪ್ರೋತ್ಸಾಹ: ಬೆಂಗಳೂರಿನ ಅರಣ್ಯ ಸಂರಕ್ಷಣಾಧಿಕಾರಿ ಗೀತಾಂಜಲಿ ಮಾತನಾಡಿ, ಮನುಷ್ಯನ ಅತಿಯಾಸೆಗೆ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಅರಣ್ಯವನ್ನು ಸ್ಥಳೀಯ ರೈತರ ಸಹಯೋಗದಿಂದ ಬೆಳೆಸುವುದು ಪ್ರತಿಯೊಬ್ಬರ ಸಹಕಾರದಿಂದ ಸಾಧ್ಯ ಎಂದರು. ಅರಣ್ಯದ ಬೆಳವಣಿಗೆಗೆ ಕೃಷಿ ಪ್ರೋತ್ಸಾಹ ಯೋಜನೆ ಅಗತ್ಯವಾಗಿದ್ದು, ಸಾರ್ವಜನಿಕರ ಸಹಕಾರದಿಂದ ಯೋಜನೆ ಯಶಸ್ವಿಯಾಗಲು ಸಾಧ್ಯ. ಮುಂದಿನ ಪೀಳಿಗೆಗೋಸ್ಕರ ಗಿಡ ಮರಗಳನ್ನು ಬೆಳೆಸಿ ಪ್ರೋತ್ಸಾಹಿಸಲು ಪ್ರತಿಯೊಬ್ಬರು ಮುಂದೆ ಬರಬೇಕೆಂದು ತಿಳಿಸಿದರು.
ಕೃಷಿ ಉಪಕರಣ: ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಮೂರ್ತಪ್ಪ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ 2 ಲಕ್ಷ 60ಸಾವಿರ ಹೆಕ್ಟೇರ್ ಕೃಷಿ ಭೂಮಿಯಿದೆ. 2ಲಕ್ಷ ರೈತರಿದ್ದು, ಈಗಲೂ ಕೃಷಿ ಉಪಕರಣಗಳಿಗೆ ಅರಣ್ಯವನ್ನೇ ಅವಲಂಬಿಸಿದ್ದಾರೆ. ಈ ರೈತರ ಉಪಕರಣಗಳಿಗೆ ಉಪಯುಕ್ತ ಗಿಡಗಳನ್ನು ರೈತರು ತಮ್ಮ ಹೊಲಗದ್ದೆ ಬದುಗಳ ಮೇಲೆ ಬೆಳೆಸಲು ಮುಂದೆ ಬರಬೇಕು ಎಂದರು.
ಪ್ರಕೃತಿ ಅಸಮತೋಲನ: ಹೋಬಳಿಗೊಂದರಂತೆ 40 ಕೃಷಿ ಕೇಂದ್ರಗಳಿದ್ದು, ಇವುಗಳ ಮೂಲಕ ರೈತರಿಗೆ ಸಸಿ ವಿತರಿಸಲು ಇಲಾಖೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ನವುಲೆ ಕೃಷಿ ವಿಜ್ಞಾನ ಕಾಲೇಜ್ನ ಡಾ.ಟಿ.ಎಚ್. ಗೌಡ, ಅರಣ್ಯ ನಾಶದಿಂದಾಗಿರುವ ಅನಾಹುತ ಪ್ರಕೃತಿ ಅಸಮತೋಲನದ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ತಾಪಮಾನದ ಬಗ್ಗೆ ಆತಂಕ ವ್ಯಕ್ತಪಡಿಸಿ, ಕೃಷಿಗೆ ಪೂರಕವಾಗಿ ಆರ್ಥಿಕ ಭದ್ರತೆ ಅವಶ್ಯಕತೆಯಿದೆ. ಹಿಂದಿನ ರಾಜ ಮಹಾರಾಜರು ಸಾಲುಮರಗಳಲ್ಲಿ ಹೆಚ್ಚು ಹುಣಸೆ, ಮಾವು, ಹತ್ತಿ, ಆಲ ಇತ್ಯಾದಿಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುತ್ತಿದ್ದರು ಎಂದು ಹೇಳಿದರು.
ಶ್ಲಾಘನೀಯ: ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ರವೀಂದ್ರ ಮಾತನಾಡಿ, ಮರಗಳ ಅತಿಯಾದ ನಾಶದಿಂದ ಜಾಗತಿಕ ತಾಪಮಾನವಾಗಿ ಪ್ರಕೃತಿಯ ಮೇಲೆ ವ್ಯತ್ಯಾಸವಾಗುತ್ತದೆ. ಪ್ರಕೃತಿಯ ಸಮತೋಲನಕ್ಕೆ ಮರಗಿಡಗಳನ್ನು ಬೆಳೆಸಲು ಮುಂದೆ ಬರಬೇಕು. ಜಾನುವಾರುಗಳ ಮೇವಿಗಾಗಿ ಬಳಕೆಯಾಗಬಲ್ಲ ಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ ಈ ಯೋಜನೆಯ ಮೂಲಕ ಮುಂದೆ ಬಂದಿರುವುದು ಶ್ಲಾಘನೀಯವಾದುದು ಎಂದು ತಿಳಿಸಿದರು.
ಮಾದರಿ ಕೃಷಿಕ ವಿಶುಕುಮಾರ್, ಹಿಟ್ಟೂರ್ ರಾಜಣ್ಣ ತಮ್ಮ ಅನುಭವವನ್ನು ಹಂಚಿಕೊಂಡರು. ಶಿವಮೊಗ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ಮಲ್ಲಿಕಾರ್ಜುನ, ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಪಾಟೀಲ್, ಬ್ಯಾನರ್ಜಿ, ಎಸಿಎಫ್ ಅಬ್ದುಲ್ ರವೂಪ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಟಿ.ಎಚ್. ಮಲ್ಲಿಕಾರ್ಜುನ ಕೃಷಿ ಪ್ರೋತ್ಸಾಹ ಯೋಜನೆಯ ರೂಪುರೇಷಗಳ ಬಗ್ಗೆ ವಿವರವಾಗಿ ತರಬೇತಿಯನ್ನು ನೀಡಿದರು. ಆಯನೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್. ರಾಮಾನಾಯ್ಕ ಪ್ರಾರ್ಥಿಸಿದರು. ಡಿಸಿಎಫ್ಕೆಎಸ್ ಪಾಟೀಲ್ ಸ್ವಾಗತಿಸಿದರು. ಎಸಿಎಫ್ ಚಂದ್ರಶೇಖರ್ ನೀರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

