ಶಿವಮೊಗ್ಗ

ಡ್ಯಾಂ ಹೂಳೆತ್ತುವ ಕಾಮಗಾರಿ ಪ್ರಾರಂಭ

Published On :

ಕ.ಪ್ರ.ವಾರ್ತೆ, ಸಾಗರ, ಮೇ27
ಶಾಸಕ ಕಾಗೋಡು ತಿಮ್ಮಪ್ಪನವರ ಸೂಚನೆ ಮೇರೆಗೆ ನಗರಕ್ಕೆ ನೀರು ಪೂರೈಕೆ ಮಾಡುವ ಬಸವನಹೊಳೆ ಡ್ಯಾಂ ಹೂಳೆತ್ತುವ ಕಾಮಗಾರಿ ಕಳೆದ ಮೂರು ದಿನಗಳಿಂದ ಸಮರೋಪಾದಿಯಲ್ಲಿ ನಡೆಯುತ್ತಿದೆ.
ಮಳೆ ಇಲ್ಲದೆ ಒಂದು ತಿಂಗಳ ಹಿಂದೆಯೇ ಡ್ಯಾಂ ಸಂಪೂರ್ಣ ಬರಿದಾಗಿ ನಗರದಲ್ಲಿ ನಲ್ಲಿ ನೀರು ಪೂರೈಕೆಯನ್ನು ನಿಲ್ಲಿಸಲಾಗಿತ್ತು. ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಸ್ಥಳ ಪರಿಶೀಲನೆ ಮಾಡಿದ ಶಾಸಕ ಕಾಗೋಡು ತಕ್ಷಣ ಹೋಳೆತ್ತುವ ಕಾಮಗಾರಿ ಆರಂಭಿಸುವಂತೆ ಆದೇಶ ನೀಡಿದ್ದರು.
ಪ್ರಥಮ ಕಂತಿನ ಹಣ: ಹೂಳೆತ್ತುವ ಹಾಗೂ ಸುಮಾರು ಎಂಟು ಅಡಿಗಳಷ್ಟು ಆಳ ಮಾಡುವ ಕಾಮಗಾರಿ ಆರಂಭಗೊಂಡಿದ್ದು ಇದಕ್ಕಾಗಿ 1ಕೋಟಿ ರು. ವೆಚ್ಚ ತಗಲುವ ಅಂದಾಜು ಮಾಡಲಾಗಿದೆ. ಸದರಿ ಕಾಮಗಾರಿಗೆ ಬರಪರಿಹಾರ ನಿಧಿಯಿಂದ 25 ಲಕ್ಷ ರು. ಪ್ರಥಮ ಕಂತಿನ ಹಣ ಬಿಡುಗಡೆಯಾಗಿದ್ದು, ಉಳಿದ ಹಣವನ್ನು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳಿಸಲಾಗಿದೆ.
ನೀರಿನ ಸಮಸ್ಯೆ: ಕಾಮಗಾರಿಗೆ 3 ಜೆಸಿಬಿ, 15ಕ್ಕೂ ಹೆಚ್ಚು ಹಿಟಾಚಿ ಯಂತ್ರ, 64 ಟಿಪ್ಪರ್ ಹಾಗೂ 126 ಟ್ರ್ಯಾಕ್ಟರ್‌ಗಳನ್ನು ಬಳಸಿಕೊಳ್ಳಲಾಗಿದೆ. ಬಸವನಹೊಳೆ ಡ್ಯಾಂ ಹೂಳೆತ್ತಬೇಕು ಎನ್ನುವ ಕೂಗು ಕಳೆದ ಕೆಲ ವರ್ಷಗಳಿಂದ ಕೇಳಿಬಂದಿತ್ತು. ಆದರೆ ಆಗಿನ ಆಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ್ಗೆ ಹತ್ತುವರ್ಷಗಳ ಹಿಂದೆ ಬರ ಬಂದಾಗಲೂ ಡ್ಯಾಂ ಸಂಪೂರ್ಣ ಬರಿದಾಗಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿತ್ತು. ಈ ವರ್ಷ ಮತ್ತದೇ ಸ್ಥಿತಿ ನಿರ್ಮಾಣವಾಗಿ ನಗರದ ಬಹುತೇಕ ಎಲ್ಲ ವಾರ್ಡ್‌ಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಸದ್ಯ ಜನರ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಕಾಗೋಡು ತಿಮ್ಮಪ್ಪನವರು ತಕ್ಷಣ ಹೂಳೆತ್ತುವ ಕಾಮಗಾರಿಗೆ ಸೂಚನೆ ನೀಡಿದರು.
ಸಿಬ್ಬಂದಿ ನೇಮಕ: ಹಾಲಿ ಜನರಿಗೆ ಕುಡಿಯುವ ನೀರಿನ ಪೂರೈಕೆಗಾಗಿ ನಗರಸಭೆ ಸಮರೋಪಾದಿಯ ಕೆಲಸ ಮಾಡುತ್ತಿದ್ದು ಇದಕ್ಕಾಗಿ ನಗರಸಭೆಯಿಂದ 60ಕ್ಕೂ ಹೆಚ್ಚು ಸಿಬ್ಬಂದಿ ನೇಮಕ ಮಾಡಲಾಗಿದೆ. ನೀರು ಪೂರೈಕೆಗಾಗಿ 11 ದೊಡ್ಡ ಟ್ಯಾಂಕರ್‌ಗಳು ಹಾಗೂ 16 ಚಿಕ್ಕ ಟ್ಯಾಂಕರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರತಿ ವಾರ್ಡ್‌ಗೆ ಮೂರರಿಂದ ನಾಲ್ಕು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದ್ದು ನಗರಸಭೆಯ ಬಹುತೇಕ ಅಧಿಕಾರಿಗಳು ನೀರು ಸರಬರಾಜಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
 ಕಳೆದ ಒಂದು ವಾರಗಳ ಈಚೆಗೆ ನಗರವ್ಯಾಪ್ತಿಯಲ್ಲಿ ಒಟ್ಟು 15 ಕೊಳವೆಬಾವಿಯನ್ನು ತೆಗೆಯಲಾಗಿದ್ದು, ಅವುಗಳಲ್ಲಿ 5 ಕೊಳವೆಬಾವಿಗಳಲ್ಲಿ ಉತ್ತಮ ನೀರು ಬಂದಿದೆ. ಸ್ಥಳೀಯವಾಗಿ ನೀರು ಪೂರೈಕೆ ಮಾಡಲು ಇವುಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಖಾಸಗಿಯವರ ಕೊಳವೆಬಾವಿಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಒಟ್ಟಿನಲ್ಲಿ ಮಳೆಯ ತೀವ್ರ ಕೊರತೆಯಿಂದಾಗಿ ಸಾಗರದಲ್ಲಿ ಹಿಂದೆಂದೂ ಕಂಡರಿಯದಷ್ಟು ನೀರಿನ ಬರ ಉಂಟಾಗಿತ್ತು. ಈ ನಿಟ್ಟಿನಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ಜೊತೆಗೆ ಶಾಶ್ವತ ಪರಿಹಾರಕ್ಕಾಗಿ ಇರುವ ಬಸವನಹೊಳೆ ಡ್ಯಾಂ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಕೆಲಸವಂತೂ ಆರಂಭವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.