ಅಪಘಾತ: ಜನರಿಂದ ಬಸ್ಸಿಗೆ ಬೆಂಕಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 28
ರಸ್ತೆ ಅಪಘಾತದಲ್ಲಿ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ನಾಗರಿಕರು ಕೆಎಸ್ಆರ್ಟಿಸಿ ಬಸ್ಗೆ ಬೆಂಕಿ ಇಟ್ಟ ಪ್ರಸಂಗ ಊರುಗಡೂರು ಬೈಪಾಸ್ ರಸ್ತೆಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಈ ಘಟನೆಯಿಂದಾಗಿ ಕೆಲ ಹೊತ್ತಿನವರೆಗೆ ಊರುಗಡೂರು ವ್ಯಾಪ್ತಿಯಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ನೂರಾರು ಸಂಖ್ಯೆಯಲ್ಲಿ ನಾಗರಿಕರು ಜಮಾಯಿಸಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರಲ್ಲದೇ, ಬಸ್ಗೆ ತಗುಲಿದ್ದ ಬೆಂಕಿ ನಂದಿಸಲು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳಕ್ಕೂ ಅಡ್ಡ ಹಾಕಿ, ಪೊಲೀಸರೊಂದಿಗೆ ವಾಗ್ವಾದವನ್ನೂ ನಡೆಸಿದರು.
ಘಟನೆ ಹಿನ್ನೆಲೆ: ತಡರಾತ್ರಿ ಬೈಪಾಸ್ ರಸ್ತೆಯ ಊರಗಡೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ಭದ್ರಾವತಿ ಕಡೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಬೈಕ್ ಹಿಂಬದಿ ಕುಳಿತಿದ್ದ ಜಿಷಾನ್ ಅಲಿ (21)ಎಂಬವರು ತೀವ್ರ ಗಾಯಗೊಂಡರು, ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲು: ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಜಮೀರ್ ಅಹ್ಮದ್ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ರಾತ್ರಿ ಸ್ಥಳಕ್ಕಾಗಮಿಸಿದ್ದ ಪೂರ್ವ ಸಂಚಾರಿ ಠಾಣೆ ಪೊಲೀಸರು ಕೆಎಸ್ಆರ್ಟಿಸಿ ಬಸ್ಸನ್ನು ತಮ್ಮ ವಶಕ್ಕೆ ಪಡೆದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಬಸ್ಗೆ ಬೆಂಕಿ: ಸೋಮವಾರ ಬೆಳಿಗ್ಗೆ ಅಪಘಾತದ ವಿಷಯ ತಿಳಿದ ವಾದಿ-ಎ-ಹುದಾ, ಊರಗಡೂರು ಹಾಗೂ ಸುತ್ತಮುತ್ತಲಿನ ಬಡಾವಣೆಯ ಒಂದು ಕೋಮಿಗೆ ಸೇರಿದ ನಿವಾಸಿಗಳು ಅಪಘಾತ ನಡೆದ ಸ್ಥಳದಲ್ಲಿ ಜಮಾಯಿಸಲಾರಂಭಿಸಿದರು. ಟೈರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಶಿವಮೊಗ್ಗ ಬಸ್ ನಿಲ್ದಾಣದಿಂದ ಭದ್ರಾವತಿಯೆಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ವೊಂದನ್ನು ನಿಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಸ್ಸಿನ ಮೇಲೆ ಕಲ್ಲು ತೂರಾಟವೂ ನಡೆಯಿತು. ನಂತರ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಗೆ ಬೆಂಕಿಹಚ್ಚಿ ಸುಟ್ಟು ಹಾಕಿದರು. ವಿಷಯ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದಾರೆ. ಆದರೆ ಬಸ್ಗೆ ತಗುಲಿದ್ದ ಬೆಂಕಿ ನಂದಿಸಲು ಪ್ರತಿಭಟನಾಕಾರರು ಅವಕಾಶ ನೀಡಲಿಲ್ಲ. ಅವರೊಂದಿಗೆ ವಾಗ್ವಾದಕ್ಕಿಳಿದರು.
ಈ ರಸ್ತೆಯಲ್ಲಿ ದಿನೆ ದಿನೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಹಂಪ್ ಹಾಕಬೇಕು. ಮೃತ ಹಾಗೂ ಗಾಯಾಳುವಿನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸ್ಥಳಕ್ಕೆ ಭೇಟಿ ನೀಡಿದ್ದ ಹಿರಿಯ ಅಧಿಕಾರಿಗಳು ಈ ಕುರಿತಂತೆ ಚರ್ಚೆ ನಡೆಸಿ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ ನಂತರ ಉದ್ರಿಕ್ತರು ಶಾಂತರಾದರು.
ಸರಿಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಬೈಪಾಸ್ ರಸ್ತೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಶಾಸಕ ಕೆ.ಬಿ. ಪ್ರಸಸ್ನಕುಮಾರ್ ಭೇಟಿ ನೀಡಿ ವ್ಯಘ್ರಗೊಂಡ ಜನರ ಬೇಡಿಕೆಯನ್ನು ಆಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀರಂಗಯ್ಯ, ತಹಸೀಲ್ದಾರ್ ಕೊಟ್ರೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ್, ಡಿವೈಎಸ್ಪಿ ರಾಮಾನಾಯ್ಕ್ ಊರುಗಡೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

