ಶಿವಮೊಗ್ಗ

ಭೂ ಸುಧಾರಣೆಯಿಂದ ಸ್ಪೀಕರ್‌ವರೆಗೆ...

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 31
ಉಳುವವನೇ ಹೊಲದೊಡೆಯ ಎಂಬ ಘೋಷಣೆ ಮೊಳಗಿಸಿ ಇಡೀ ದೇಶದ ಗಮನ ಸೆಳೆದಿದ್ದ ಸಾಗರ ತಾಲೂಕಿನ ಕುಗ್ರಾಮ ಕಾಗೋಡಿನಲ್ಲಿ ಜನಿಸಿದ ಗೇಣಿ ಹೋರಾಟಗಾರ ಕಾಗೋಡು ತಿಮ್ಮಪ್ಪ ಈಗ ಕರ್ನಾಟಕ ವಿಧಾನಸಭೆಯ 19ನೇ ಸ್ಪೀಕರ್.
ಕಾಗೋಡು ಹೋರಾಟ ನಡೆಯುತ್ತಿದ್ದ ವೇಳೆ ತಿಮ್ಮಪ್ಪ ಅವರು ಇನ್ನೂ ವಿದ್ಯಾರ್ಥಿ. ಈ ಹೋರಾಟ, ಈ ಸಂಬಂಧ ನಡೆಯುತ್ತಿದ್ದ ಚರ್ಚೆಗಳಿಂದ ತೀವ್ರವಾಗಿ ಪ್ರಭಾವಿತರಾದ ಕಾಗೋಡು ತಿಮ್ಮಪ್ಪ ಕಾನೂನು ಪದವಿ ಪಡೆದಿದ್ದು ಕಡಿಮೆ ಸಾಧನೆಯೇನಲ್ಲ. ಈಡಿಗ ಸಮುದಾಯದಲ್ಲಿ ಪದವಿ ಪಡೆದ ಮೊದಲ ವ್ಯಕ್ತಿ ಕಾಗೋಡು ತಿಮ್ಮಪ್ಪ.
ಸಮಾಜವಾದಿ ಪಕ್ಷದ ಸೆಳೆತಕ್ಕೆ ಒಳಗಾದ ಕಾಗೋಡು ತಿಮ್ಮಪ್ಪ ಅವರು 1960ರಲ್ಲಿ ಆ ಪಕ್ಷಕ್ಕೆ ಸೇರಿದರು. 62ರ ಚುನಾವಣೆಯಲ್ಲಿ ಮೊಟ್ಟಮೊದಲ ಬಾರಿಗೆ ಸಾಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡರು. 1967ರ ಚುನಾವಣೆಯಲ್ಲಿ ಮತ್ತೆ ಅದೃಷ್ಟ ಪರೀಕ್ಷೆ ನಡೆಸಿದರಾದರೂ ಗೆಲವು ಸಾಧ್ಯವಾಗಲಿಲ್ಲ. ಆದರೆ ಇದೇ ವೇಳೆ ನಡೆದ ತಾಲೂಕು ಬೋರ್ಡ್ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 15ರಲ್ಲಿ 12 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂದಿತ್ತು. ಆಗ ತಾಲೂಕು ಬೋರ್ಡ್ ಅಧ್ಯಕ್ಷರಾದರು.
ಲೆವಿ ವಿರುದ್ಧ ಹೋರಾಟ, ಭೂಗ್ರಹಣ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿದ್ದ ಕಾಗೋಡು ತಿಮ್ಮಪ್ಪ ಅವರು 1972ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದಲೇ ವಿಧಾನಸಭೆಗೆ ಸ್ಪರ್ಧಿಸಿ ಗೆಲವು ಪಡೆದರು. 1978ರ ಚುನಾವಣೆ ವೇಳೆಗೆ ಸಮಾಜವಾದಿ ಪಕ್ಷ ವಿಘಟನೆಯಾಗುತ್ತಾ ನಡೆದಿತ್ತು. ಈ ಚುನಾವಣೆಯಲ್ಲಿ ತಿಮ್ಮಪ್ಪ ಅವರು ಅನಿರೀಕ್ಷಿತ ಸೋಲು ಅನುಭವಿಸಿದರು.
ಕಾಂಗ್ರೆಸ್ ಸೇರ್ಪಡೆ: 1980ರಲ್ಲಿ ಮುಖ್ಯಮಂತ್ರಿ ಗುಂಡೂರಾವ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಕಾಗೋಡು ತಿಮ್ಮಪ್ಪ ಅವರು ವಿಧಾನಪರಿಷತ್ ಸದಸ್ಯರಾಗಿಯೂ ಆಯ್ಕೆಯಾಗಿ ಪರಿಷತ್ತಿನ ಸಭಾನಾಯಕದರು. ವಿಧಾನಮಂಡಲದ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷರೂ ಆಗಿ ನೇಮಕವಾದ ಇವರು ನಂತರ ಆಹಾರ ಮತ್ತು ಅರಣ್ಯ ಖಾತೆ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. ಇವರ ಅವಧಿಯಲ್ಲಿಯೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ವ್ಯವಸ್ಥೆ ಬಂದಿದ್ದು. ಬಳಿಕ ಲೋಕೋಪಯೋಗಿ ಇಲಾಖೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.
1983ರ ಚುನಾವಣೆ ಸೋತರು. 1985ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಲ್.ಟಿ. ತಿಮ್ಮಪ್ಪ ಅವರಿಗೆ ಸ್ಥಾನ ಬಿಟ್ಟುಕೊಟ್ಟರು. 1986ರವರೆಗೂ ವಿಧಾನಪರಿಷತ್ ಸದಸ್ಯರಾಗಿಯೇ ಮುಂದುವರಿದರು.
ಕೆಎಚ್‌ಬಿ ಅಧ್ಯಕ್ಷ: 1989ರ ಚುನಾವಣೆಯಲ್ಲಿ ಮತ್ತೆ ಗೆದ್ದ ಕಾಗೋಡು ತಿಮ್ಮಪ್ಪ ಅವರು ವೀರೇಂದ್ರ ಪಾಟೀಲರ ಸರ್ಕಾರದಲ್ಲಿ ಕೆಎಚ್‌ಬಿ ಅಧ್ಯಕ್ಷರಾದರು. ನಂತರ ವೀರಪ್ಪ ಮೊಯ್ಲಿ ಅವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವರಾಗಿದ್ದರು.
1999ರ ಚುನಾವಣೆಯಲ್ಲಿ ಮತ್ತೆ ಗೆಲವು ಪಡೆದು ಎಸ್.ಎಂ. ಕೃಷ್ಣ ಅವರ ಮಂತ್ರಿಮಂಡಲದಲ್ಲಿ ಸಮಾಜ ಕಲ್ಯಾಣ, ತೋಟಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವಾರ್ತಾ ಇಲಾಖೆ ಸಚಿವರಾಗಿ ವಿವಿಧ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದರು.
ನಂತರ 2004 ಹಾಗೂ 2008ರ ಚುನಾವಣೆಯಲ್ಲಿ ಸೋಲುಂಡರು. ಆದರೆ 2013ರ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಆರಿಸಿ ಬಂದ ಕಾಗೋಡು ತಿಮ್ಮಪ್ಪ ಅವರು ವಿಧಾನಸಭೆಯ ಸ್ಪೀಕರ್ ಆಗಿ ನೇಮಕವಾಗಿದ್ದಾರೆ.

ಹೋರಾಟದ ಬದುಕು
ಗೇಣಿ ಹೋರಾಟದ ಮೂಲಕ ಸಾಮಾಜಿಕ ಬದುಕನ್ನು ಆರಂಭಿಸಿದ ಕಾಗೋಡು ತಿಮ್ಮಪ್ಪ ಅವರು ತಮ್ಮ ಕ್ಷೇತ್ರದಲ್ಲಿ ಈಗಲೂ ಮನೆಮಾತಾಗಿರುವುದು ಅವರ ಧಣಿವರಿಯದ ಹೋರಾಟದಿಂದಲೇ.
ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದಾಗ ಲೆವಿ ಹೋರಾಟ, ಭೂಗ್ರಹಣ ಚಳವಳಿಯಿಂದ ರೈತರಿಗೆ ಇನ್ನಷ್ಟು ಹತ್ತಿರವಾದರು. ಸೊರಬ ತಾಲೂಕು ಮಾಗಡಿ ಗ್ರಾಮದ ಗೇಣಿ ರೈತರ ಪರ ಹೋರಾಟ ನಡೆಸಿದ್ದ ಇವರು ಸಾಗರ ತಾಲೂಕಿನ ಗ್ರಾಮವೊಂದರಲ್ಲಿ ಜಮೀನ್ದಾರರು ರೈತರನ್ನು ಒಕ್ಕಲೆಬ್ಬಿಸಿದ ಕಾರಣ ಸತತ ಒಂದು ತಿಂಗಳು ಪ್ರತಿಭಟನೆ ನಡೆಸಿದ್ದರು.
1973ರಲ್ಲಿ ಸಂಡೂರು ಭೂವಿಮೋಚನಾ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸವನ್ನೂ ಅನುಭವಿಸಿದರು. ಈ ಹೋರಾಟದ ಕಾರಣವಾಗಿಯೇ ಇನಾಂ ಭೂಮಿ ರದ್ದು ಮಾಡುವ ಕಾಯ್ದೆ ಜಾರಿಗೆ ಬಂದಿತ್ತು.
ಕಾಗೋಡು ಹೋರಾಟವನ್ನು ಹತ್ತಿರದಿಂದ ಕಂಡಿದ್ದ ಕಾಗೋಡು ತಿಮ್ಮಪ್ಪ ಅವರು ಮುಖ್ಯಮಂತ್ರಿ ದೇವರಾಜ ಅರಸು ಅವರು 1974ರಲ್ಲಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಸೂಚಿಸಲು ರಚಿಸಿದ್ದ ಸಮಿತಿಯ ಸದಸ್ಯರಾಗಿ ದುಡಿದು, ಊಳುವವನೇ ಹೊಲದೊಡೆಯ ಎಂಬ ಆಶಯವನ್ನು ವಾಸ್ತವಕ್ಕೆ ತಂದರು.
- ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.