ವಾರದಲ್ಲಿ ಮನೆ ಮನೆ ಮುಟ್ಟಲಿದೆ ಡೆಂಘೀ ಜ್ವರದ ಜಾಗೃತಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 31
ರಾಜ್ಯದಲ್ಲೇ ಅತಿ ಹೆಚ್ಚು ಡೆಂಘೀ ಪ್ರಕರಣ ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಗಿದ್ದು, ಜಿಲ್ಲಾಡಳಿತ ಜನ ಜಾಗೃತಿಗೆ ಮುಂದಾಗಿದೆ.
ಡೆಂಘೀ ನಿಯಂತ್ರಣಕ್ಕಾಗಿ ಜಿಲ್ಲಾದ್ಯಂತ ಪ್ರತಿ ಮನೆ ಮನೆಗೂ ಭೇಟಿ ಮಾಡಿ ಸ್ವಚ್ಛತೆ ಹಾಗೂ ಕ್ರಮದ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿಪಲ್ ನ್ಸಾಲ್ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಜೂನ್ಲ್ಲಿ ಕೇವಲ 13 ಪ್ರಕರಣ ಪತ್ತೆಯಾಗಿತ್ತು. ಆದರೆ, ಪ್ರಸ್ತುತ 92 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ವ್ಯಾಪಕ ಕ್ರಮ ಕೈಗೊಂಡಿದ್ದು, ಪ್ರತಿ ತಾಲೂಕು ಮಟ್ಟದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿ ಜಿಲ್ಲಾದ್ಯಂತ ಪ್ರತಿ ಮನೆಗೂ ಭೇಟಿ ನೀಡುವ ಮೂಲಕ ಸುರಕ್ಷತಾ ಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಮನೆ ಮನೆಗೆ ಭೇಟಿ: ತಾಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ಪುರಸಭೆ, ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು, ಪಿಡಿಓಗಳು, ಬಿಇಓಗಳಿರುವ ತಂಡಗಳನ್ನು ರಚಿಸಲಾಗಿದ್ದು, ಇವರ ಮೂಲಕ ಜಿಲ್ಲಾದ್ಯಂತ ಪ್ರತಿ ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಡೆಂಘೀ ಸೊಳ್ಳೆಗಳು ಪ್ರಮುಖವಾಗಿ ಮನೆಯ ಒಳ ಭಾಗದಲ್ಲೇ ಉತ್ಪತ್ತಿಯಾಗುವುದರಿಂದ ಈ ಕಾರ್ಯಕ್ರಮ ರೂಪಿಸಲಾಗಿದ್ದು, ಮನೆಯ ಒಳಭಾಗದಲ್ಲಿ ಶೇಖರಿಸುವ ನೀರು, ಬಳಸುವ ಅಡುಗೆ ಪಾತ್ರೆಗಳು ಇನ್ನಿತರ ವಿಷಯಗಳ ಬಗ್ಗೆ ಮನೆಯವರಿಗೆ ಮಾಹಿತಿ ನೀಡಲಾಗುವುದು. ಮುಂದಿನ ಶುಕ್ರವಾರದ ಹೊತ್ತಿಗೆ ಜಿಲ್ಲಾದ್ಯಂತ ಎಲ್ಲಾ ಮನೆಗಳನ್ನು ಭೇಟಿ ಮಾಡುವ ಗುರಿ ಇದೆ ಎಂದು ಅವರು ತಿಳಿಸಿದರು.
ಜಾಗೃತಿ ತಂಡ ಪ್ರತಿ ಮನೆಯೊಳಗೆ ಸೊಳ್ಳೆ ನಿಯಂತ್ರಣಕ್ಕೆ ಕೈಗೊಳ್ಳಲಾದ ಕ್ರಮಗಳ ಬಗ್ಗೆಯೂ ಪರಿಶೀಲನೆ ನಡೆಸಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದರು.
ನಿರ್ಲಕ್ಷ್ಯ ಬೇಡ: ನೀರಿನ ಸಮಸ್ಯೆಯಿಂದ ಗ್ರಾಮಾಂತರ ಭಾಗದಲ್ಲಿ ನೀರು ಸಂಗ್ರಹ ಮಾಡುತ್ತಿರುವುದರಿಂದ ಡೆಂಘೀ ಹರಡಿರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರಕರಣ ಪತ್ತೆಯಾದ ನಂತರ ಆತಂಕಕ್ಕೊಳಗಾಗದೆ ಅಥವಾ ನಿರ್ಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ವಾರ್ಡ್ಗೊಂದು ಸಮಿತಿ: ತಾಲೂಕು ಮಟ್ಟದಲ್ಲಿ ರಚಿಸಿರುವ ತಂಡಗಳ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತರು, ಪಿಡಿಓ, ಸಂಘ ಸಂಸ್ಥೆ ಕಾರ್ಯಕರ್ತರು, ಸಮಾಜ ಸೇವಾ ಸಂಸ್ಥೆ ಪ್ರತಿನಿಧಿಗಳ ತಂಡ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಡೆಂಘೀ ನಿಯಂತ್ರಿಸುವ ಬಗ್ಗೆ ಜನರಿಗೆ ಮಾಹಿತಿ ನೀಡುವರು. ಅದೇ ರೀತಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್ಗೊಂದರಂತೆ ಸಮಿತಿ ರಚಿಸಲಾಗಿದೆ. ಈ ತಂಡದ ಮೇಲುಸ್ತುವಾರಿಯಲ್ಲಿ ಜಾಗೃತಿ ನಡೆಯಲಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಶಿವಣ್ಣ ರೆಡ್ಡಿ ಮಾತನಾಡಿ, ಡೆಂಘೀ ಬಗ್ಗೆ ಜೂನ್ 10ರಂದು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರತಿ ತಾಲೂಕಿಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು. ಈ ಮೂಲಕ ಪೋಷಕರಿಗೆ ಡೆಂಘೀ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ
ಡೆಂಘೀ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳನ್ನು ಕೋರಿದೆ. ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಯವರು ಖುದ್ದು ಮನವಿ ಮಾಡಿದ್ದು, ನಿರಂತರ ಮಾಹಿತಿ ನೀಡುವಂತೆಯೂ ಸೂಚನೆ ನೀಡಿದ್ದಾರೆ. ಈ ವರೆಗೆ ಬೆಳಕಿಗೆ ಬಂದ ಡೆಂಘೀ ಪ್ರಕರಣಗಳ ಪೈಕಿ ಶೇ.79ರಷ್ಟು ಖಾಸಗಿ ಆಸ್ಪತ್ರೆಯಿಂದಲೇ ಗೊತ್ತಾಗಿದೆ. ಹೀಗಾಗಿ ಪ್ರಮುಖ ಆಸ್ಪತ್ರೆಗಳವರು ಡೆಂಘಿ ನಿಯಂತ್ರಣಕ್ಕೆ ಜಿಲ್ಲಾಡಳಿತದ ಜೊತೆ ಕೈಜೋಡಿಸಬೇಕೆಂದು ಕೋರಲಾಗಿದೆ ಎಂದು ಡಿಸಿ ವಿಪುಲ್ ಬನ್ಸಲ್ ಕೋರಿದ್ದಾರೆ.
ಎಚ್ಚರಿಕೆ ಅಗತ್ಯ
ಸೊರಬ: ರಾಜ್ಯದ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡಿರುವ ಡೆಂಘೀ ಜ್ವರದ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಇಲ್ಲಿನ ಪಪಂ ಸಭೆ ಕರೆದು ಮಾಹಿತಿ ಒದಗಿಸಿದೆ.
ವಿವಿಧ ಸಂಘ-ಸಂಸ್ಥೆ, ಶಿಕ್ಷಣ ಇಲಾಖೆ ಮತ್ತಿತರರನ್ನು ಕರೆದಿದ್ದ ಸಭೆಯಲ್ಲಿ ಡೆಂಘೀ ಸ್ವರೂಪ, ಹತೋಟಿ, ಮುನ್ನೆಚ್ಚರಿಕೆ, ಜನರಲ್ಲಿ ಅರಿವು ಮೂಡಿಸುವ ವಿಧಾನಗಳ ಕುರಿತಂತೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ನಾಗೇಂದ್ರಪ್ಪ ಮಾಹಿತಿ ನೀಡಿದರು.
ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಗ್ರಾಮಾಂತರ ಪ್ರದೇಶ ಮತ್ತು ಪಟ್ಟಣಗಳಲ್ಲಿ ಎಚ್ಚರಿಕೆ ವಹಿಸುವುದು, ಮನೆಮನೆಗೆ ಡೆಂಘೀ ಕುರಿತು ಖುದ್ದು ಮಾಹಿತಿ ತಲುಪಿಸುವಂತೆ, ಹಗಲು ವೇಳೆ ಔಷಧ ಸಿಂಪಡಿಸುವುದು ಮುಂತಾದವುಗಳ ವ್ಯವಸ್ಥೆಯಾಗಬೇಕು ಎಂದು ಸೂಚನೆ ನೀಡಲಾಯಿತು. ತಹಸೀಲ್ದಾರ್ ತೇಜಸ್ ಕುಮಾರ್, ಪಪಂ ಆರೋಗ್ಯಾಧಿಕಾರಿ, ಮುಖ್ಯಾಧಿಕಾರಿ ಇದ್ದರು.
ಪ್ಲಾಸ್ಟಿಕ್ ಲೋಟ ಬಳಕೆ ನಿಷೇಧ
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಂದಿನ ಮೂರು ತಿಂಗಳ ಅವಧಿಗೆ ಸಂಪೂರ್ಣ ಪ್ಲಾಸ್ಟಿಕ್ ಲೋಟಗಳ ಬಳಕೆ ಹಾಗೂ ಮಾರಾಟವನ್ನು ನಿಷೇಧಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪ್ಲಾಸ್ಟಿಕ್ ಲೋಟ ಬಳಕೆಯಿಂದ ತ್ಯಾಜ್ಯವಾದ ನಂತರವೂ ಅದು ಕೊಳೆಯದೇ ನೀರು ನಿಲ್ಲುವುದರಿಂದ ಡೆಂಘೀ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಲೋಟಗಳನ್ನು 3 ತಿಂಗಳ ಕಾಲ ಸಂಪೂರ್ಣವಾಗಿ ನಿಷೇಧಿಸುವಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

