ಶಾಂತಿ, ಸೌಹಾರ್ದದ ನಾಡು ನಮ್ಮದು
ಶಿವಮೊಗ್ಗ: ಕನ್ನಡಿಗರು ಎಂದಿಗೂ ಶಾಂತಿಪ್ರಿಯರು. ನೆಲ, ಜಲ, ಭಾಷೆ ವಿಷಯದಲ್ಲಿ ಸಣ್ಣ- ಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ, ನೆರೆಹೊರೆಯ ರಾಜ್ಯಗಳೊಂದಿಗೆ ಸಹೋದರ ಭಾವನೆ ಹೊಂದಿರುವುದು ಈ ನಾಡಿನ ಸಂಸ್ಕೃತಿಯ ದ್ಯೋತಕವಾಗಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅಭಿಪ್ರಾಯಪಟ್ಟರು.
ನಗರದ ಡಿಎಆರ್ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಎಂತಹುದೇ ಸಂದರ್ಭದಲ್ಲಿಯೂ ಈ ನಾಡಿನ ನೆಲ, ಜಲ, ಭಾಷೆ ಸಂರಕ್ಷಿಸುವ ಮೂಲಕ ಹಾಗೂ ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ ಹಾಗೂ ರಸ್ತೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಸರ್ಕಾರ ಸಮೃದ್ಧ ಕರ್ನಾಟಕ ನಿರ್ಮಾಣದತ್ತ ದಾಪುಗಾಲು ಇಟ್ಟಿದೆ ಎಂದರು.
ಸೌಹಾರ್ದತೆಯಿಂದ ಬದುಕುತ್ತಿರುವ ನಾಡು ನಮ್ಮದು. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಸಿಖ್ರಿಗೆ ಎಲ್ಲಾ ಧರ್ಮಿಯರು ಧರ್ಮ ಸಹಿಷ್ಣುತೆ, ಸಮನ್ವಯತೆಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದರು.
ನ. 1 ಕನ್ನಡಿಗರಿಗೆ ಹೆಮ್ಮೆಯ ದಿನವಾಗಿದೆ ಎಂದ ಅವರು, ಈ ದಿನದಂದು ಸದೃಢ ಹಾಗೂ ಸಮೃದ್ಧ ನಾಡನ್ನು ಕಟ್ಟಲು ಶ್ರಮಿಸಿದ ನಾಡಿನ ಕವಿ, ಕಲಾವಿದರನ್ನು, ಸಾಹಿತಿಗಳು, ಸಂತರು ಹಾಗೂ ಕರ್ನಾಟಕದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ಎಲ್ಲಾ ಗಣ್ಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
263 ಕೋಟಿ ಅನುದಾನ: ಸರ್ಕಾರ ಕಲೆ, ಸಂಸ್ಕೃತಿ ಹಾಗೂ ರಾಜ್ಯದ ಶ್ರೀಮಂತ ಪರಂಪರೆ ರಕ್ಷಿಸಲು ಹಾಗೂ ಉತ್ತೇಜಿಸುವ ಬದ್ಧತೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 263 ಕೋಟಿ ಅನುದಾನ ಒದಗಿಸಲಾಗಿದೆ ಎಂದು ವಿವರಿಸಿದರು.
ಶಿವಮೊಗ್ಗ ಜಿಲ್ಲೆ ರಾಜ್ಯದ ಭೂಪಟದಲ್ಲಿ ಕಳಶಪ್ರಾಯವಾಗಿ ಕಂಗೊಳಿಸುವಲ್ಲಿ ಹೆಸರಾಂತ ಕವಿಗಳಾದ ಕುವೆಂಪು, ಯು.ಆರ್.ಅನಂತಮೂರ್ತಿ, ಜಿ.ಎಸ್. ಶಿವರುದ್ರಪ್ಪ, ನಾ. ಡಿಸೋಜಾ, ಪಿ. ಲಂಕೇಶ್, ಕೆ.ವಿ. ಸುಬ್ಬಣ್ಣ, ಗಾಯಕ ಶಿವಮೊಗ್ಗ ಸುಬ್ಬಣ್ಣ, ಗರ್ತಿಕೆರೆ ರಾಘಣ್ಣ ಹಾಗೂ ಕಲೆ, ಸಂಗೀತ, ಕೃಷಿ ಮತ್ತಿತರ ಕ್ಷೇತ್ರಗಳಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ಮಲೆನಾಡಿನ ಹೆಬ್ಬಾಗಿಲೆನಿಸಿದ ಶಿವಮೊಗ್ಗ ಜಿಲ್ಲೆಯ ಪ್ರಾಕೃತಿಕ ಸಂಪತ್ತು ಮತ್ತಷ್ಟು ಮೆರಗುಗೊಳಿಸಿದ ಮಹನೀಯರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರಕುಮಾರ್, ಅಪರ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಜಿಪಂ ಸಿಇಒ ಸಸಿಕಾಂತ್ ಸೆಂಥಿಲ್, ಉಪವಿಭಾಗಾಧಿಕಾರಿ ಕುಸುಮಾ ಕುಮಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಡೊಳ್ಳು ಕುಣಿತ, ವೀರಗಾಸೆ ಕುಣಿತ ಗಮನ ಸೆಳೆಯಿತು. ವಾರ್ತಾ ಇಲಾಖೆ, ರೇಷ್ಮೆ, ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕೃಷಿ ಇಲಾಖೆಯ ಸ್ತಬ್ದಚಿತ್ರಗಳು ಮನಸೊರೆಗೊಂಡಿತು. ಶಾಲಾಮಕ್ಕಳ ಪಥಸಂಚಲನ ರಾಜ್ಯೋತ್ಸವಕ್ಕೆ ಮೆರುಗು ತಂದು ಕೊಟ್ಟಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

