ಶಿವಮೊಗ್ಗ

ಇಂದಿನಿಂದ ಮರಳು ಲಾರಿ ಮುಷ್ಕರ

Published On :

ಕ.ಪ್ರ.ವಾರ್ತೆ ,  ಶಿವಮೊಗ್ಗ ,  ನ. 6
ಜಿಲ್ಲೆಯಲ್ಲಿ ತಲೆದೋರಿರುವ ಮರಳು ಸಮಸ್ಯೆ ಪರಿಹಾರ ನೀಡದ ಜಿಲ್ಲಾಡಳಿತದ ವಿರುದ್ಧ ಮರಳು ಸಾಗಾಣೆ ಲಾರಿ ಮಾಲಿಕರು ಸಮರ ಸಾರಿದ್ದು, ನ.7ರಂದು ಪ್ರತಿಭಟನೆ ಹಮ್ಮಿಕೊಳ್ಳುವ ಜೊತೆಗೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಮೊಗ್ಗ ಕಟ್ಟಡ ಸಾಮಗ್ರಿ ಸರಬರಾಜು ಲಾರಿ ಮಾಲಿಕರ ಸಂಘದ ಅಧ್ಯಕ್ಷ ಡಿ. ರಾಜಶೇಖರಪ್ಪ, ನಾವು(ಲಾರಿ ಮಾಲಿಕರು) ಕಾನೂನು ಬದ್ಧವಾಗಿ ಲಾರಿಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳಡಿಸಿಕೊಂಡರೂ ತಮಗೆ ಮರಳು ಸಾಗಾಣೆಗೆ ಪರ್ಮಿಟ್ ನೀಡುತ್ತಿಲ್ಲ. ಇದರಿಂದ ಜಿಲ್ಲಾಡಳಿತವೇ ಪರೋಕ್ಷವಾಗಿ ಅಕ್ರಮ ಮರಳು ಸಾಗಾಣೆ ದಂಧೆಗೆ ಕುಮ್ಮಕ್ಕು ನೀಡುತ್ತಿದೆ ಎಂದರೆ ತಪ್ಪಾಗಲಾರದು. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ಪರ್ಮಿಟ್ ನೀಡುತ್ತಿಲ್ಲ: ಜಿಲ್ಲೆಯಲ್ಲಿ ಕಳೆದ ಐದು ತಿಂಗಳಿನಿಂದ ಮರಳು ಸಾಗಾಣಿಗೆ ಪರ್ಮಿಟ್ ಸ್ಥಗಿತಗೊಳಿಸಲಾಗಿದ್ದು, ಇದರಿಂದ ಮರಳು ಸಾಗಾಣೆ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ರಾಜ್ಯ ಸರ್ಕಾರದ ನೀತಿಯ ಪ್ರಕಾರ ಮಳೆಗಾಲದ ನಾಲ್ಕು ತಿಂಗಳ ಅವಧಿಯಲ್ಲಿ ಜಿಲ್ಲಾಡಳಿತ ಗುರುತಿಸಿದ ಮರಳು ಲೋಡಿಂಗ್ ಪಾಯಿಂಟ್ ಸ್ಥಳಗಳಲ್ಲಿ ಮರಳು ತುಂಬುವುದಕ್ಕೆ ಅವಕಾಶವಿರುವುದಿಲ್ಲ. ಪ್ರಸ್ತುತ ಮಳೆಗಾಲದ ಅವಧಿ ಮುಕ್ತಾಯವಾಗಿದ್ದು ಒಂದು ತಿಂಗಳು ಕಳೆದರೂ ಇಲ್ಲಿಯವರೆಗೂ ಜಿಲ್ಲಾಧಿಕಾರಿ ಶಿವಮೊಗ್ಗ ಜಿಲ್ಲೆಯಲ್ಲಿ ಮರಳು ಸಾಗಾಣೆಗೆ ಯಾವುದೇ ಪರ್ಮಿಟ್ ನೀಡುತ್ತಿಲ್ಲ. ಇದರಿಂದ ಕಟ್ಟಡ ನಿರ್ಮಾಣ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದ್ದು, ಮರಳು ಸಾಗಾಣೆ ನಂಬಿಕೊಂಡು ಜೀವನ ನಡೆಸುತ್ತಿರುವ ಲಾರಿ ಮಾಲಿಕರು, ಚಾಲಕರು, ಕೂಲಿ ಕಾರ್ಮಿಕರು ಅಕ್ಷರಶಃ ಬೀದಿ ಪಾಲಾಗುವ ಹಂತಕ್ಕೆ ಬಂದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಅಕ್ರಮ ಮರಳು ಸಾಗಾಣೆ ದಂಧೆ: ಪ್ರಸ್ತುತ ನೆರೆ ಜಿಲ್ಲೆಗಳಾದ ದಾವಣಗೆರೆ, ಉಡುಪಿ ಜಿಲ್ಲೆಗಳಲ್ಲಿ ಮರಳು ಸಾಗಾಣೆಗೆ ಅಲ್ಲಿನ ಜಿಲ್ಲಾಡಳಿತಗಳು ಪರ್ಮಿಟ್ ನೀಡುತ್ತಿವೆ. ಆ ಜಿಲ್ಲೆಗಳಿಂದ ಶಿವಮೊಗ್ಗ ಜಿಲ್ಲೆಗಳಿಗೆ ದಿನನಿತ್ಯ ಮರಳು ಬರುತ್ತಿದೆ, ಬೇಕಾಬಿಟ್ಟಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರ ಜೊತೆಗೆ ಶಿವಮೊಗ್ಗ ತಾಲೂಕು ಹಾಗೂ ಜಿಲ್ಲೆಯ ವಿವಿಧೆಡೆ ಅಕ್ರಮ ಮರಳು ಸಾಗಾಣೆ ದಂಧೆ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ. ಕೋಟ್ಯಂತರ ರುಪಾಯಿ ವ್ಯವಹಾರ ನಡೆಸಲಾಗುತ್ತಿದೆ ಎಂದರು.
ಅನಿರ್ದಿಷ್ಟಾವಧಿ ಮುಷ್ಕರ: ನ.7ರಂದು ಬೆಳಿಗ್ಗೆ 10 ಗಂಟೆಗೆ ಸೈನ್ಸ್ ಮೈದಾನದಿಂದ ರ್ಯಾಲಿ ಆರಂಭವಾಗಲಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಅರ್ಪಿಸಲಾಗುವುದು. ಜೊತೆಗೆ ನ.7ರಿಂದಲೇ ಅನಿರ್ದಿಷ್ಟಾವಧಿ ಮರಳು ಲಾರಿಗಳ ಮುಷ್ಕರ ಆರಂಭಿಸಲಾಗುವುದು. ನಾಗರಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಗುತ್ತಿಗೆದಾರರು ಸಂಘ ಸಂಸ್ಥೆಗಳು ಸಹಕರಿಸುವಂತೆ ಕೋರಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀಧರ್, ಅನ್ವರ್ ಸಿಕ್ಕಿದಿ, ನಾಗೇಶ್, ಎನ್.ಮಂಜುನಾಥ, ಎಸ್.ಮಂಜುನಾಥ, ಚಿನ್ನಪ್ಪ ಮತ್ತಿತರರು ಇದ್ದರು.
ಪ್ರಮುಖ ಬೇಡಿಕೆಗಳು
- ತಕ್ಷಣವೇ ಶಿವಮೊಗ್ಗ ಜಿಲ್ಲೆಯಲ್ಲಿ ಮರಳು ಸಾಗಾಣೆಗೆ ಪರ್ಮಿಟ್ ನೀಡಬೇಕು.
- ಶಿವಮೊಗ್ಗ ತಾಲೂಕು ಹಾಗೂ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕೋಟ್ಯಂತರ ರುಪಾಯಿ ಮೌಲ್ಯದ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ತಪ್ಪಿತಸ್ಥರ ವಿರುದ್ಧ ಹೊಸ ಮರಳು ನೀತಿಯ ಅನ್ವಯ ಗೂಂಡಾ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
- ತಕ್ಷಣವೇ ಜಿಲ್ಲೆಯಾದ್ಯಂತ ಮರಳು ಲಭ್ಯವಿರುವ ಸ್ಥಳಗಳನ್ನು ಗುರುತಿಸಬೇಕು.
- ತುರ್ತಾಗಿ ಗ್ರೀನ್ ಟ್ರಿಬ್ಯೂನಲ್ ಆದೇಶದಂತೆಯೇ ಕಾನೂನು ಬದ್ಧವಾಗಿ ಮರಳು ಲೋಡಿಂಗ್ ಪಾಯಿಂಟ್ ಸ್ಥಳಗಳ ಗುರುತು ಮಾಡಲು ಅರಣ್ಯ ಮತ್ತು ಜೀವಿಶಾಸ್ತ್ರ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು.
- ಲಾರಿಗಳಿಗೆ ಅಳವಡಿಕೆ ಮಾಡಿರುವ ಜಿಪಿಎಸ್ ತಂತ್ರಜ್ಞಾನಕ್ಕೆ ಮರಳು ಲಾರಿ ಮಾಲಿಕರಿಂದ ಮಾಸಿಕ 250 ವಸೂಲಿ ಮಾಡಲಾಗುತ್ತಿದ್ದು, ಈ ಕೂಡಲೇ ಇದನ್ನು ರದ್ದುಗೊಳಿಸಬೇಕು.
ಅಕ್ರಮ ಮರಳು ಗಣಿಗಾರಿಕೆ ನಡೆಯಬಹುದಂತೆ, ರಾಜಸ್ವ ಕಟ್ಟಿ ಗಣಿಗಾರಿಕೆ ನಡೆಸುವುದಕ್ಕೆ ಅನುಮತಿ ಕೊಡುವುದಿಲ್ಲವಂತೆ. ಶಿವಮೊಗ್ಗ ಜಿಲ್ಲೆ ಕರ್ನಾಟಕದಲ್ಲಿದೆಯೋ ಬೇರೆ ದೇಶದಲ್ಲಿದೆಯೋ ಅರ್ಥವಾಗುತ್ತಿಲ್ಲ.
- ರಾಜಶೇಖರಪ್ಪ
ಕಟ್ಟಡ ಸಾಮಗ್ರಿ ಸರಬರಾಜು ಲಾರಿ ಮಾಲಿಕರ ಸಂಘ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.