ಶಿವಮೊಗ್ಗ

ಯಕ್ಷಗಾನ ಉಳಿವಿಗೆ ಪ್ರೇಕ್ಷಕರು ಜಾಗೃತರಾಗಲಿ

Published On :

ಕ.ಪ್ರ.ವಾರ್ತೆ ,  ಹೊಸನಗರ ,  ನ. 6
ಕಲಾಭಿಮಾನಿಗಳು ಕೆಟ್ಟದ್ದನ್ನು ಬಯಸಿದರೆ ಕಲೆಯ ಜೀವಂತಿಕೆ ದೃಷ್ಟಿಯಿಂದ ಕಲಾವಿದರು ಕೂಡ ಅದನ್ನೇ ಬಯಸುತ್ತಾರೆ ಎಂದು ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ, ವಿಮರ್ಶಕ ಶ್ರೀಧರ್ ಹಂದೆ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ನಿಟ್ಟೂರಿನಲ್ಲಿ ನಡೆದ ಶ್ರೀ ರಾಮೇಶ್ವರ ಯಕ್ಷಗಾನ ಮಕ್ಕಳ ಮೇಳದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಜಾನಪದ ಲೋಕದ ಶ್ರೀಮಂತ ಕಲೆ ಅಂತಲೇ ಬಿಂಬಿತವಾದ ಯಕ್ಷಗಾನದ ಉಳಿವು ಪ್ರೇಕ್ಷಕರ ಮೇಲೆ ನಿಂತಿದೆ ಎಂದರು.
ಜಗತ್ತು ಬದಲಾದಂತೆ ಯಕ್ಷಗಾನದಲ್ಲೂ ಅನೇಕ ಬದಲಾವಣೆಯಾಗುತ್ತಿದೆ. ಕಾಲಕ್ಕೆ ತಕ್ಕಂತೆ ಇಂದಿನ ಪೀಳಿಗೆ ಬಯಸುವ ನಿಟ್ಟಿನಲ್ಲಿ ಯಕ್ಷಗಾನ ರೂಪುಗೊಳ್ಳುತ್ತಿದೆ. ಯಕ್ಷಗಾನಕ್ಕೆ ಪ್ರೇಕ್ಷಕರನ್ನು ಕರೆತರುವ ಕಾರಣಕ್ಕಾಗಿ ಬದಲಾವಣೆ ಸಹಜವಾದರು ಕೂಡ ಸಾಂಪ್ರದಾಯಿಕ ಯಕ್ಷಗಾನ ಮರೆಯಾಗುತ್ತಿರುವುದಕ್ಕೆ ವಿಷಾದ ವ್ಯಕ್ತ ಪಡಿಸಿದರು.
ಹಳ್ಳಿಯಲ್ಲಿ ಹುಟ್ಟಿ, ಅನೇಕ ಸವಾಲು ಸ್ವೀಕರಿಸಿ ಬೆಳೆದು ಬಂದ ಶ್ರೀರಾಮೇಶ್ವರ ಯಕ್ಷಗಾನ ಮಕ್ಕಳ ಮೇಳ ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ಮೂಲೆಮೂಲೆಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರವಾಗಿದೆ. ಮಕ್ಕಳಲ್ಲಿ ಯಕ್ಷಗಾನ ಕಲೆಯ ಅರಿವು ಮೂಡಿಸಿ, ತರಬೇತಿ ನೀಡಿ, ಮೇಳ ಕಟ್ಟಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಡಿ.ಎಸ್. ಸುಬ್ರಹ್ಮಣ್ಯ ಮೂರ್ತಿಯವರ ಶ್ರಮವನ್ನು ಶ್ಲಾಘಿಸಿದರು.
ಸನ್ಮಾನ: ಮಕ್ಕಳ ಮೇಳವನ್ನು ಕಟ್ಟಿ ಬೆಳೆಸಿದ ಡಿ.ಎಸ್. ಸುಬ್ರಹ್ಮಣ್ಯ ಮೂರ್ತಿ ಮತ್ತು ತರಬೇತಿ ಗುರುಗಳಾದ ಇಡಗುಂಜಿಯ ಭಾಸ್ಕರ ಭಂಡಾರಿ ಅವರನ್ನು ಗೌರವಿಸಲಾಯಿತು.
ದಶಮಾನೋತ್ಸವ ಅಂಗವಾಗಿ ಹತ್ತು ದಿನಗಳಕಾಲ ಮಕ್ಕಳಿಗೆ ಯಕ್ಷಗಾನ ಪೂರ್ವ ರಂಗ ತರಬೇತಿ ನೀಡಲಾಯಿತು. ಸುಮಾರು 30ಕ್ಕು ಹೆಚ್ಚು ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. ವಿದ್ವಾನ್ ಹಿರಣ್ಯ ವೆಂಕಟೇಶಭಟ್, ವಾಸುದೇವ ರಂಗಭಟ್, ಶ್ರೀಧರ್ ಡಿ.ಎಸ್., ಡಾ.ಪಿ. ಶಾಂತರಾಮಪ್ರಭು ಮತ್ತು ಇತರ ಪ್ರಸಿದ್ಧ ಕಲಾವಿದರಿಂದ ಕೃಷ್ಣ ಸಂದಾನ ತಾಳಮದ್ದಲೆ ನಡೆಯಿತು.
ರಂಗ ತರಬೇತಿ ಪಡೆದ ಮಕ್ಕಳಿಂದ ಯಕ್ಷಗಾನ ಪೂರ್ವರಂಗದ ಬಾಲಗೋಪಾಲ, ಸ್ತ್ರೀ ವೇಷ, ಕೋಡಂಗಿ, ಪಾಂಡವರ ಒಡ್ಡೋಲಗ, ಯುದ್ಧ ನೃತ್ಯ ಸೇರಿದಂತೆ ವಿವಿಧ ಪ್ರದರ್ಶನಗಳು ಗಮನ ಸೆಳೆದವು.
ಹಿರಿಯ ಕಲಾವಿದ ಎ. ಶ್ರೀನಿವಾಸ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸುಧಾಕಿರಣ್, ಗಜಾನನ ಹೆಗಡೆ, ಲಂಬೋಧರ ಹೆಗಡೆ, ಜಿ.ಆರ್. ಸುಬ್ರಹ್ಮಣ್ಯ, ಬಿ.ಎಚ್. ಸುರೇಶ್ ಮತ್ತಿತರರು ದಶಮಾನೋತ್ಸವದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.